ಗುಬ್ಬಿ: ರಾತ್ರಿ ಸುರಿದ ಮಳೆಗೆ ತೋಟದ ಮನೆ ಮುಳುಗಡೆಯಾದ ಘಟನೆ ತಾಲ್ಲೂಕಿನ ಮದನಘಟ್ಟ ಗ್ರಾಮದಲ್ಲಿ ನಡೆದರೆ, ಗುಬ್ಬಿಯಲ್ಲಿ ರಾತ್ರಿ ಬಡಿದ ಸಿಡಿಲಿಗೆ ಕೆಪಿಟಿಸಿಎಲ್ ಸ್ಟೇಷನ್ ನಲ್ಲಿನ ಎಸ್ 13 ಬಿದರೆ ಫೀಡರ್ ಸಂಪೂರ್ಣ ಸುಟ್ಟು ಹೋಗಿದೆ.
ಗುಡುಗು ಮಿಂಚು ಜೊತೆಗಿನ ಮಳೆ ತಡ ರಾತ್ರಿ ಆರಂಭವಾಗಿತ್ತು. ನಂತರ ಬಡಿದ ಸಿಡಿಲು ಇಡೀ ಗುಬ್ಬಿ ಪಟ್ಟಣದ ಜನರನ್ನೇ ಕಂಗಾಲಾಗಿಸಿದೆ. ಸುಟ್ಟು ಫೀಡರ್ ಪರಿಣಾಮ ಕೆಲ ಗ್ರಾಮಗಳಲ್ಲಿ ವಿದ್ಯುತ್ ಕಡಿತವಾಗಿದೆ. ಕೆಲ ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಸುಟ್ಟ ಘಟನೆ ನಡೆದಿದೆ.
ತಾಲ್ಲೂಕಿನ ನಿಟ್ಟೂರು ಹೋಬಳಿ
ಮದನಘಟ್ಟ ಗ್ರಾಮದಲ್ಲಿ ಸುರಿದ ಮಳೆಗೆ ತೋಟಗಳು ಹಾಗೂ ತೋಟದಮನೆಗಳು ಮುಳುಗಡೆಯಾಗಿದೆ. ಖರಾಬು ಮುಚ್ಚಿದ ಹಿನ್ನಲೆ ಸರಾಗವಾಗಿ ಮಳೆ ನೀರು ಹರಿಯದ ಕಾರಣ ಈ ಅವಾಂತರ ಸೃಷ್ಟಿಯಾಗಿದೆ. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೆ ದೂರು ನೀಡಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ದ್ವೀಪದಂತಾದ ಸರ್ಕಾರಿ ಡಿಗ್ರಿ ಕಾಲೇಜು ಕೆರೆಯಲ್ಲಿ ನಿರ್ಮಾಣವಾದ ಪರಿಣಾಮ ಇಡೀ ಕಟ್ಟಡವೇ ಅಪಾಯದಂಚಿನಲ್ಲಿದೆ. ಸುಮಾರು ಕಳೆದ ಒಂದು ತಿಂಗಳಿಂದ ಮಳೆ ನೀರು ಕಟ್ಟಡಕ್ಕೆ ಆವೃತವಾಗಿದೆ. ಮಾರನಕಟ್ಟೆ ಎಂದೇ ಹೇಳುವ ಕೆರೆಯಂಗಳದಲ್ಲಿ ನಿರ್ಮಾಣವಾದ ಕಾಲೇಜು ಕಟ್ಟಡದ ಅಡಿಪಾಯ ನೀರಿನ ಜೋಪಿಗೆ ತೊಂದರೆ ಅನುಭವಿಸಲಿದೆ.
ಮಳೆ ನೀರು ತನ್ನ ಮೂಲ ಸ್ಥಾನ ಹುಡುಕಿ ಹರಿಯುತ್ತಿರುವ ಕಾರಣ ಕೆರೆಕಟ್ಟೆಗಳು, ಖರಾಬುಹಳ್ಳ, ರಾಜುಗಾಲುವೆಗಳು ಎಲ್ಲವನ್ನೂ ಒತ್ತುವರಿ ತೆರವು ಮಾಡುವ ಕೆಲಸ ತಾಲ್ಲೂಕು ಆಡಳಿತ ಮಾಡಬೇಕಿದೆ. ಇನ್ನೂ ಮಳೆಗಾಲ ಬಾಕಿ ಇದೆ. ಹೀಗೆ ಮುಂದುವರೆದರೆ ಸಾಕಷ್ಟು ತೊಂದರೆ ಸಾರ್ವಜನಿಕರೇ ಅನುಭವಿಸಬೇಕಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರರು ಎಚ್ಚರಿಸಿದ್ದಾರೆ.