ಗುಬ್ಬಿ: ಪಟ್ಟಣದ ಶ್ರೀ ಚಿದಂಬರಾಶ್ರಮದ ದೈವ ಶ್ರೀ ದತ್ತಾಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆಯಿಂದ ರುದ್ರಾಭಿಷೇಕ ಸೇರಿದಂತೆ ವಿವಿಧ ಕೈಂಕರ್ಯಗಳು ವಿಧಿವತ್ತಾಗಿ ನಡೆಸಲಾಯಿತು. ನಂತರ ದತ್ತಾಂಜನೇಯಸ್ವಾಮಿ ಯುವಕರ ಸಂಘ ಕೊಡುಗೆಯಾಗಿ ನೀಡಿದ ಶ್ರೀ ಆಂಜನೇಯಸ್ವಾಮಿ ಬೆಳ್ಳಿ ವಿಗ್ರಹ ಜೊತೆ ದತ್ತಾತ್ರೇಯಸ್ವಾಮಿ ಉತ್ಸವ ಮೂರ್ತಿಯನ್ನು ಹೊತ್ತ ಹೂವಿನಿಂದ ಅಲಂಕೃತ ರಥೋತ್ಸವ ಆಶ್ರಮದ ಆವರಣದಲ್ಲಿ ಎಳೆಯಲಾಯಿತು.
ವೀರಗಾಸೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡ ಇಲ್ಲಿ ಮೇಳೈಸಿದ್ದವು. ರಥ ಬರುವ ಹಾದಿಯಲ್ಲಿ ರಂಗೋಲಿ ಚಿತ್ತಾರ ನೆರೆದಿದ್ದ ಭಕ್ತರನ್ನು ಆಕರ್ಷಿಸಿತು. ಪಾನಕ ಫಲಾಹಾರವನ್ನು ಯುವಕರ ಸಂಘ ಹಂಚಿತು. ಮಧ್ಯಾಹ್ನ ಅನ್ನ ಸಂತರ್ಪಣೆ ಕೂಡಾ ಆಯೋಜಿಸಲಾಗಿತ್ತು.
ಆಶ್ರಮದ ಅಜುಬಾಜು ಗ್ರಾಮಸ್ಥರು ಬಹಳ ವರ್ಷದಿಂದ ಈ ಜಾತ್ರೆ ವಿಶೇಷವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕೋವಿಡ್ ಹಿನ್ನಲೆ ಕಳೆದೆರಡು ವರ್ಷಗಳಿಂದ ಸರಳ ಆಚರಣೆಯಾಗಿದ್ದ ರಥೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಸಲು ಚಿಂತಿಸಿದ ಯುವಕರ ಶ್ರಮ ಯಶಸ್ವಿಯಾಗಿ ನಡೆಯಿತು.