ಗುಬ್ಬಿ: ಪಟ್ಟಣದ ಅಂತರ್ಜಲ ವೃದ್ಧಿಗೆ ಈ ಮಾರನಕಟ್ಟೆ ಕೆರೆ ಉಳಿಸಿಕೊಳ್ಳುವ ಹೋರಾಟ ಕಳೆದ ನಾಲ್ಕು ವರ್ಷದಿಂದ ನಡೆದಿದೆ. ಮಾರನಕಟ್ಟೆ ಸಂರಕ್ಷಣಾ ಸಮಿತಿ ಕಟ್ಟಿಕೊಂಡು ಕಾನೂನಾತ್ಮಕ ಹೋರಾಟ ಆರಂಭಕ್ಕೆ ಸಾಕ್ಷಿಯಾದ ವರುಣ ನಿರಂತರ ಸುರಿಯುತ್ತಿದ್ದು ಸುಮಾರು 10 ಕಿಮೀ ದೂರದ ಸುತ್ತಳತೆಯಿಂದ ಹರಿದ ಮಳೆ ನೀರು ತನ್ನ ಮೂಲ ಸ್ಥಾನ ಹುಡುಕಿಕೊಂಡು ಹರಿದಿದೆ. ಅದರ ಪರಿಣಾಮ ಮಾರನಕಟ್ಟೆ ಕೆರೆ ತುಂಬಿದೆ.
ಕೆರೆಯಂಗಳದಲ್ಲಿ ನಿರ್ಮಾಣವಾಗಿದ್ದ ಸರ್ಕಾರಿ ಕಾಲೇಜು ಹಾಗೂ ಇತರೆ ಕಚೇರಿಗಳು ಸಂಪೂರ್ಣ ಮುಳುಗಡೆಯಾಗಿದೆ. ಕಳೆದ ಒಂದು ತಿಂಗಳಿಂದ ಕೆರೆಗೆ ಹರಿದ ನೀರಿನ ಮಧ್ಯೆ ಸರ್ಕಾರಿ ಡಿಗ್ರಿ ಕಾಲೇಜು ಕಟ್ಟಡ ದ್ವೀಪದಂತಾಗಿದೆ. ಮಾರನಕಟ್ಟೆಯಲ್ಲಿ ನೀರು ತುಂಬಿರುತ್ತಿದ್ದ ಕಾಲದಲ್ಲಿ ಇಡೀ ಗುಬ್ಬಿ ಪಟ್ಟಣದ ಎಲ್ಲಾ ಬೋರ್ ವೆಲ್ ಗಳು ಚಾಲ್ತಿಯಲ್ಲಿತ್ತು. ಅಂತರ್ಜಲ ವೃದ್ಧಿಗೆ ಮೂಲವಾಗಿದ್ದ ಈ ಕೆರೆಯನ್ನು 30 ವರ್ಷಗಳ ಹಿಂದೆ ಸರ್ಕಾರಿ ಕಾಲೇಜು ಕಟ್ಟಡಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಇಡೀ ಕೆರೆಯನ್ನು ಭೂ ಪರಿವರ್ತನೆ ಮಾಡಿದ್ದರ ಬಗ್ಗೆ ಇಂದಿಗೂ ದಾಖಲೆ ಸಿಕ್ಕಿಲ್ಲ. ಇದರ ಬಗ್ಗೆ ಅರಿತ ಸಾಮಾಜಿಕ ಹೋರಾಟಗಾರರ ತಂಡ ಹಾಗೂ ಕೆರೆಯ ಸುತ್ತಲಿನ ಕೃಷಿಕ ವರ್ಗ ಸಂರಕ್ಷಣಾ ಸಮಿತಿ ರಚಿಸಿಕೊಂಡು ಕಾನೂನಾತ್ಮಕ ಹೋರಾಟ ಆರಂಭವಾಗಿದೆ.

ಮಾರನಕಟ್ಟೆ ಇಂದಿಗೂ ತಗ್ಗು ಪ್ರದೇಶವಾಗಿದೆ. ಹತ್ತಾರು ಕಿಮೀ ದೂರದ ಮಳೆ ನೀರು ಇಲ್ಲಿ ಶೇಖರಣೆ ಆಗುತ್ತಿದೆ. ಮೂವತ್ತು ಅಡಿಗಳಲ್ಲಿ ಇಂದಿಗೂ ಕೆಸರು ಮಣ್ಣು ಇದೆ. ಇಂತಹ ಕಡೆ ಸರ್ಕಾರಿ ಕಟ್ಟಡವನ್ನು ಕಟ್ಟಿರುವುದು ವಿಪರ್ಯಾಸ. ಈ ಕೆರೆಗೆ ಹರಿದು ಬರುವ ನೀರು ಸರಾಗವಾಗಿ ಹೊರ ಹೋಗುವ ವ್ಯವಸ್ಥೆ ಸಹ ಮಾಡಿಲ್ಲ. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಸ್ಥಳೀಯ ಪಟ್ಟಣ ಪಂಚಾಯಿತಿ ಕೆರೆಯ ಸ್ಥಳವನ್ನು ಬೇಕಾದವರಿಗೆ ದಾನ ಮಾಡಿರುವುದು ಕೂಡಾ ಖಂಡನೀಯ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಎಸ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಹೃದಯ ಭಾಗದಲ್ಲಿನ ಮಾರನಕಟ್ಟೆ ಕೆರೆ ಇಂದಿಗೂ 46.01 ಎಕರೆ ಪ್ರದೇಶ ಸರ್ವೇ ನಂಬರ್ 17 ರಲ್ಲಿದೆ. ಪಹಣಿ ಸೇರಿದಂತೆ ಎಲ್ಲಾ ದಾಖಲೆ ಕೆರೆ ಎಂಬುದಾಗಿಯೇ ಇದೆ. ಮಳೆ ನೀರು ಹರಿದು ಮೂಲ ನೆಲೆ ಹುಡುಕಿಕೊಂಡ ಕೆರೆಯನ್ನು ಕೆರೆಯಾಗಿ ಉಳಿಸಲು ಹೋರಾಟ ನಡೆದಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಕಾನೂನು ಸೇವಾ ಪ್ರಾಧಿಕಾರ ಮೂಲಕ ಹೈಕೋರ್ಟ್ ನಲ್ಲಿ ಸಹ ಆದೇಶ ಹೊರಡಿಸಲಾಗಿದೆ. ಆದರೂ ಎಂಆರ್ ರದ್ದಿಗೆ ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವ ಮಾನವ ಹಕ್ಕುಗಳ ಕೇಂದ್ರ ಸಂಸ್ಥಾಪಕ ಸಿದ್ದಲಿಂಗೇಗೌಡ ಅವರ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಹೋರಾಟಗಾರ ಜಿ.ಆರ್.ರಮೇಶ್ ಹೇಳಿದರು.