ಪಾವಗಡ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಡಿ ಪಾವಗಡ ತಾಲ್ಲೂಕಿನ ಕೆರೆ ಕುಂಟೆಗಳು ತುಂಬಿ ತುಳುಕುತ್ತಿವೆ.ಪ್ರಕೃತಿ ಮಾತೆ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದಾಳೆ.ಆದರೆ ಅಷ್ಟೇ ವೇಗದಲ್ಲಿಯೇ ನೀರು ಜಮೀನಿಗಳಿಗೆ ಹರಿದು ಬೆಳೆ ನಾಶವಾಗುತ್ತಿದೆ.ಭಾನುವಾರ ಬಿದ್ದ ವರುಣಾರ್ಭಟಕ್ಕೆ ಬಹಳಷ್ಟು ದೊಡ್ಡ ವಿಸ್ತೀರ್ಣದ ಬ್ಯಾಡನೂರು ಕೆರೆ ತುಂಬಿ ಕೋಡಿ ಬಿದ್ದು ಗಂಗಮ್ಮ ತಾಯಿ ಧಮ್ಮಿಕ್ಕಿ ಹರಿಯುತ್ತಿದ್ದಾಳೆ.
ಸೋಮವಾರ ಬೆಳಿಗ್ಗೆಯಿಂದಲೇ ಹರಿಯುತ್ತಿರುವ ಕೆರೆ ಕೋಡಿಯನ್ನ ಕಣ್ತುಂಬಿಕೊಳ್ಳಲು ಗ್ರಾಮಸ್ಥರು ಹಾಗೂ ಸುತ್ತಮುತ್ತಲಾ ಜನರು ಕಿಕ್ಕಿರಿದು ಬಂದು ಹೋಗುತ್ತಿದ್ದರು.
ಸುಮಾರು 23 ವರ್ಷಗಳ ಹಿಂದೆ ತುಂಬಿದ್ದ ಕೆರೆ ಇಂದು ಮತ್ತೆ ತುಂಬಿ ಸುತ್ತಮುತ್ತಲ 7 ಹಳ್ಳಿಗಳಿಗೆ ಬೋರ್ ರೀಚಾರ್ಜ್ ಆಗುತ್ತವೆ ಎಂಬುದೆ ಸಂತೋಷದ ಸಂಗತಿ.ಇನ್ನು ಹೆಣ್ಣು ಮಕ್ಕಳು, ಯುವಕರು ವೃದ್ಧರು ನೀರನ್ನ ಕಂಡು ಪುಳಕಿತರಾಗಿ ಕುಣಿದು ಕುಪ್ಪಳಿಸಿದರು.
ಈ ಬ್ಯಾಡನೂರು ಕೆರೆ ಭರ್ತಿಯಾದರೆ ಪಳವಳ್ಳಿ ಕೆರೆಗೆ ನೀರು ಸಾಗುತ್ತವೆ.ಇದರಿಂದ ಸುತ್ತಮುತ್ತಲ ಬಾಲಮ್ಮನಹಳ್ಳಿ, ಕುರುಬರಹಳ್ಳಿ, ವಡ್ಡರಹಟ್ಟಿ, ಪಾಲುಕುಂಟೆ, ದೊಡ್ಡಹಟ್ಟಿ, ಗುಂಡಾರ್ಲಹಳ್ಳಿ, ಮದ್ದಿಬಂಡೆ ಸೇರಿದಂತೆ ಇನ್ನೀತರೆ ಹಳ್ಳಿಗಳ ರೈತರ ಕೃಷಿಯ ಚಟುವಟಿಕೆಗಳಿಗೆ ಉಪಯೋಗವಾಗುತ್ತದೆ ಎಂದು ಗ್ರಾಮಸ್ಥರಾದ ದಾಸಣ್ಣ, ವೀರೇಶ್ ತಿಳಿಸಿದರು.
ಮೂವತ್ತು ವರ್ಷಗಳ ಹಿಂದೆ ಕೆರೆ ಭರ್ತಿಯಾಗಿ ಕಟ್ಟೆ ಹೊಡೆದು ಬ್ಯಾಡನೂರು ಗ್ರಾಮದೊಳಗೆ ನುಗ್ಗಿ ಅವಾಂತರ ನಡೆದಿತ್ತು. ಇಂದು ಕೆರೆ ತುಂಬಿ ಹರಿಯುತ್ತಿರುವ ದೃಶ್ಯ ಮನಸ್ಸಿಗೆ ಮುದ ನೀಡುತ್ತಿದೆ ಎಂದು ಬ್ಯಾಡನೂರು ಶಿವು, ಹನುಮಂತರಾಯಪ್ಪ, ಓಬಳಪ್ಪ ಹರ್ಷ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಯವರು ಎಚ್ಚೆತ್ತುಕೊಂಡು ಕೆರೆ ಭರ್ತಿಯಾದ ನೀರು ಹೋಗುವ ಹಳ್ಳಗಳ ಕಾಲುವೆಯಲ್ಲಿ ಜಾಲಿ ಮುಳ್ಳಿನ ಗಿಡಗಳು ಬೆಳೆದಿವೆ.ಅವುಗಳನ್ನು ತೆಗೆಸಿದರೆ ಸರಾಗವಾಗಿ ನೀರು ಮುಂದೆ ಸಾಗುತ್ತವೆ.ಇದರಿಂದ ಕೃಷಿ ಬಳಕೆಗೆ ರೈತರಿಗೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಕೋಡಿ ಬಿದ್ದ ಕೆರೆಗೆ ವಿಶೇಷವಾಗಿ ಗಂಗಾ ಮಾತೆಗೆ ಶಾಸಕರು ಹಾಗೂ ಗ್ರಾಮಸ್ಥರು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಕೆರೆಯನ್ನ ವೀಕ್ಷಿಸಿ ಖುಷಿ ಪಟ್ಟು ಮಾತನಾಡಿದ ಶಾಸಕರು ಕೆರೆ ತುಂಬಿರುವುದು ಸಂತಸದ ಸುದ್ದಿ, ನೀರಿನಲ್ಲಿ ಅನಾವಶ್ಯಕ ಆಟವಾಡಬಾರದು, ತಮ್ಮ ಜೀವದ ಮೇಲೆ ಎಚ್ಚರವಿರಲಿ ಎಂದು ಈ ವೇಳೆ ಸಲಹೆ ನೀಡಿದರು.
ಕೂಡಲೇ ತಾಲ್ಲೂಕು ಆಡಳಿತ ವರ್ಗ ಎಚ್ಚೆತ್ತು ಕೆರೆಗೆ ಜನರು ಇಳಿಯದಂತೆ ನಿಗಾವಹಿಸಬೇಕಿದೆ.ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು ಬರುತ್ತದೆ.ಇದಕ್ಕೆ ಗ್ರಾಮಸ್ಥರ ಸಹಕಾರ ಕೂಡ ಅತ್ಯಗತ್ಯವಾಗಿದೆ.