ಗುಬ್ಬಿ : ತಾಲೂಕು ಆಡಳಿತ ಮುನ್ನೆಡೆಸುವ ಜನಪ್ರತಿನಿಧಿಗಳಾಗಲಿ, ಆಡಳಿತ ಅಧಿಕಾರಿಗಳಾಗಲಿ ರೈತರ ಕಷ್ಟಕ್ಕೆ ಸ್ಪಂದಿಸದೆ ಆಡಳಿತ ಕುಸಿದಿದೆ. ರಾಜ್ಯದ ಅತೀ ದೊಡ್ಡ ಭೂ ಮಾಫಿಯಾ ಕಂಡಿದ್ದು ಈ ಹಗರಣ ಹಿಂದೆ ಯಾವ ಪ್ರಭಾವಿ ಇದ್ದರೂ ಕಾನೂನು ಕ್ರಮ ಜರುಗಿಸಬೇಕು. ಈ ಹಿನ್ನಲೆ ಉನ್ನತ ಮಟ್ಟದ ತನಿಖೆ ನಡೆಯಲೇಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ನಂತರ ಮಾತನಾಡಿದ ಅವರು ಗುಬ್ಬಿ ತಾಲೂಕು ಭೂಗಳ್ಳರ ಕೇಂದ್ರ ಸ್ಥಾನವಾಗಿದ್ದು ಭೂಮಿ ಮಾಲೀಕರಾಗಿರುವ ರೈತರನ್ನು ಒಕ್ಕಲಿಬ್ಬಿಸುವ ಹಂತಕ್ಕೆ ಅಧಿಕಾರಿಗಳು ತಲುಪಿರುವುದು ರೈತರ ದುರಾದೃಷ್ಟವೇ ಸರಿ. ಹಳೆಯ ಪಹಣಿಗಳನ್ನು ತಿದ್ದಿ ಸಮಾಜದ ಬಲಾಡ್ಯರಿಂದ ಹಣ ಪಡೆದು ಜಮೀನನ್ನು ವರ್ಗಾಯಿಸಲು ಭೂಗಳ್ಳರು ಎಲ್ಲಾ ಹಂತದಲ್ಲೂ ಕೆಲಸ ಮಾಡಿರುವುದು ಇದನ್ನು ಸಿಓಡಿ ತನಿಖೆಗೆ ವಹಿಸಲು ಸರ್ಕಾರವು ಮೀನಾ ಮೇಷ ಎಣಿಸುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಲು ಕಾರಣವಾಗಿದೆ ಎಂದು ಕಿಡಿಕಾರಿದರು.
ರಾಜಕೀಯ ಮುಖಂಡರುಗಳ ಒತ್ತಡಕ್ಕೆ ಮಾಡಿದ ಅಧಿಕಾರಿಗಳು ಕೆಲಸ ನಿರ್ವಹಿಸಲು ವಿಫಲರಾಗಿದ್ದರೆಯೇ? ಈ ಹಗರಣದಲ್ಲಿ ಯಾವುದೇ ರಾಜಕೀಯ ವ್ಯಕ್ತಿಯಾಗಲಿ ಸರ್ಕಾರಿ ನೌಕರರಾಗಲಿ ಅವರನ್ನು ಕೂಡಲೇ ಬಂಧಿಸಿ ತನಿಖೆ ನಡೆಸಬೇಕು. ಸ್ಥಳೀಯ ಪೊಲೀಸರು ಕೇವಲ ಬೆರಣಿಕೆಯಷ್ಟು ಜನರನ್ನು ಬಂಧಿಸಿದ್ದು ಇದರಿಂದ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಯಾವ ಸಾರ್ವಜನಿಕರಿಗೂ ತಿಳಿಯಪಡಿಸುತ್ತಿಲ್ಲ ಎಂದ ಅವರು ಅತಿವೃಷ್ಟಿಯಿಂದಾಗಿ ರೈತರು ಬೆಳೆದ ಬೆಳೆಗಳು ಹಾಗೂ ತೆಂಗು ಅಡಿಕೆ ಮರಗಳು ಹಾಳಾಗುತ್ತಿದ್ದು ಬೆಳೆ ವಿಮೆಯನ್ನು ರಾಜ್ಯ ಸರ್ಕಾರವು ಆದಷ್ಟು ಬೇಗ ತುಂಬಬೇಕು. ಬೆಳೆ ನಷ್ಟ ಸಮೀಕ್ಷೆ ನಡೆಸಿ ಪರಿಹಾರವನ್ನು ಜಾಗೃತಿ ನೀಡಬೇಕು ಎಂದು ಆಗ್ರಹಿಸಿದವರು. ಇದೇ ತಿಂಗಳು 8 ರ ಸೋಮವಾರದಂದು ಜಿಲ್ಲೆಯಲ್ಲಿರುವ ರೈತ ಸಂಘಟನೆ, ಪ್ರಾಂತ ರೈತ ಸಂಘಟನೆ, ದಲಿತ ಸಂಘಟನೆ, ಕೂಲಿ ಕಾರ್ಮಿಕರ ಸಂಘಟನೆ, ಹಾಗೂ ವಿವಿಧ ಬೇರೆ ಬೇರೆ ಸಂಘಟನೆಗಳ ಒಳಗೂಡಿ ಬೃಹತ್ ಪ್ರತಿಭಟನೆಯನ್ನು ತಾಲೂಕು. ಕಚೇರಿಯ ಮುಂದೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಜಕೀಯ ನಾಯಕರುಗಳು ಇಂದು ರೈತರು ಸಂಕಷ್ಟದಲ್ಲಿದ್ದಾಗ ಯಾವುದೇ ಸ್ಪಂದನೆಗೆ ಒಳಪಡದೆ ಕೇವಲ ತಮ್ಮ ರಾಜಕೀಯ ವೃತ್ತಿಗೋಸ್ಕರ ರೈತರ ಹೆಸರು ಹೇಳಿಕೊಂಡು ಅಧಿಕಾರ ನಡೆಸುತ್ತಿರುವುದು ಒಂದೆಡೆಯಾದರೆ ತಾಲೂಕಿನ ಅಧಿಕಾರ ಚುಕ್ಕಾಣಿ ಹಿಡಿದ ಶಾಸಕ ಇಲ್ಲಿಯವರೆಗೂ ರೈತರಿಗೆ ಆದ ಅನ್ಯಾಯದ ಬಗ್ಗೆ ಯಾವುದೇ ಚಕಾರ ಎತ್ತದೆ ಇರುವುದು ಕಾರಣ ಏನು ಎಂದು ಪ್ರಶ್ನಿಸಿದ ಅವರು ಚೇಳೂರು ಹಟ್ಟಿ ಗ್ರಾಮದಲ್ಲಿ ಅರಣ್ಯಾಧಿಕಾರಿ ದೌರ್ಜನ್ಯವು ತೀವ್ರ ಖಂಡನೀಯ. ಈ ಬಗ್ಗೆ ಕೂಡಾ ಜಿಲ್ಲಾಡಳಿತಕ್ಕೆ ಆಗ್ರಹಿಸಿ ಅರಣ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ವಿ.ರತ್ನ ಕುಮಾರ್, ಎನ್. ಎ.ನಾಗರಾಜು, ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಪ್ರಾಂತ ರೈತ ಸಂಘದ ಸಂಚಾಲಕ ಅಜ್ಜಪ್ಪ, ಯತೀಶ್, ಗುರು ಚನ್ನಬಸಪ್ಪ, ಶಿವಕುಮಾರ್, ಮೋಹನ್ ಕುಮಾರ್ ಇತರರು ಇದ್ದರು.