ಭೂ ಕಬಳಿಕೆ ಪ್ರಕರಣ ಉನ್ನತ ತನಿಖೆ ಒಳಪಡಿಸಬೇಕು : ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯ

ಗುಬ್ಬಿ : ತಾಲೂಕು ಆಡಳಿತ ಕುಸಿದ ಗುಬ್ಬೀಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದೆ. ರಾಜ್ಯದ ಅತೀ ದೊಡ್ಡ ಭೂ ಮಾಫಿಯಾ ಕಂಡಿದ್ದು ಈ ಹಗರಣ ಹಿಂದೆ ಯಾವ ಪ್ರಭಾವಿ ಇದ್ದರೂ ಕಾನೂನು ಕ್ರಮ ಜರುಗಿಸಲೇಬೇಕು. ಈ ಹಿನ್ನಲೆ ಉನ್ನತ ಮಟ್ಟದ ತನಿಖೆ ನಡೆಸಲು ಸಿಓಡಿ ಸಂಸ್ಥೆಗೆ ಒಪ್ಪಿಸಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆಗ್ರಹಿಸಿದರು.

ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಮೆರವಣಿಗೆ ಮೂಲಕ ಪ್ರತಿಭಟನೆ ಆರಂಭಿಸಿದ ರೈತ ಸಂಘ ನೇತೃತ್ವದ ವಿವಿಧ ಸಂಘ ಸಂಸ್ಥೆಗಳು ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಗುಬ್ಬಿ ತಾಲೂಕು ಭೂಗಳ್ಳರ ಕೇಂದ್ರ ಸ್ಥಾನವಾಗಿದ್ದು ಭೂಮಿ ಮಾಲೀಕರಾಗಿರುವ ರೈತರನ್ನು ಒಕ್ಕಲಿಬ್ಬಿಸುವ ಹಂತಕ್ಕೆ ಅಧಿಕಾರಿಗಳು ತಲುಪಿರುವುದು ರೈತರ ದುರಾದೃಷ್ಟವೇ ಸರಿ. ಹಳೆಯ ಪಹಣಿಗಳನ್ನು ತಿದ್ದಿ ಸಮಾಜದ ಬಲಾಡ್ಯರಿಂದ ಹಣ ಪಡೆದು ಜಮೀನನ್ನು ವರ್ಗಾಯಿಸಲು ಭೂಗಳ್ಳರು ಎಲ್ಲಾ ಹಂತದಲ್ಲೂ ಕೆಲಸ ಮಾಡಿರುವುದು ಇದನ್ನು ಸಿಓಡಿ ತನಿಖೆಗೆ ವಹಿಸಲು ಸರ್ಕಾರವು ಮೀನಾ ಮೇಷ ಎಣಿಸುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಲು ಕಾರಣವಾಗಿದೆ ಎಂದು ಕಿಡಿಕಾರಿದರು.

ರಾಜಕೀಯ ಮುಖಂಡರುಗಳ ಒತ್ತಡಕ್ಕೆ ಮಾಡಿದ ಅಧಿಕಾರಿಗಳು ಕೆಲಸ ನಿರ್ವಹಿಸಲು ವಿಫಲರಾಗಿದ್ದರೆಯೇ? ಈ ಹಗರಣದಲ್ಲಿ ಯಾವುದೇ ರಾಜಕೀಯ ವ್ಯಕ್ತಿಯಾಗಲಿ ಸರ್ಕಾರಿ ನೌಕರರಾಗಲಿ ಅವರನ್ನು ಕೂಡಲೇ ಬಂಧಿಸಿ ತನಿಖೆ ನಡೆಸಬೇಕು. ಸ್ಥಳೀಯ ಪೊಲೀಸರು ಕೇವಲ ಬೆರಣಿಕೆಯಷ್ಟು ಜನರನ್ನು ಬಂಧಿಸಿದ್ದು ಇದರಿಂದ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಯಾವ ಸಾರ್ವಜನಿಕರಿಗೂ ತಿಳಿಯಪಡಿಸುತ್ತಿಲ್ಲ ಎಂದ ಅವರು ಅತಿವೃಷ್ಟಿಯಿಂದಾಗಿ ರೈತರು ಬೆಳೆದ ಬೆಳೆಗಳು ಹಾಗೂ ತೆಂಗು ಅಡಿಕೆ ಮರಗಳು ಹಾಳಾಗುತ್ತಿದ್ದು ಬೆಳೆ ವಿಮೆಯನ್ನು ರಾಜ್ಯ ಸರ್ಕಾರವು ಆದಷ್ಟು ಬೇಗ ತುಂಬಬೇಕು. ಬೆಳೆ ನಷ್ಟ ಸಮೀಕ್ಷೆ ನಡೆಸಿ ಪರಿಹಾರವನ್ನು ಜಾಗೃತಿ ನೀಡಬೇಕು ಎಂದು ಆಗ್ರಹಿಸಿದ ಅವರು ಹಳ್ಳ ಹಿಡಿಯುವ ಹಂತ ತಲುಪಿದ ಈ ಪ್ರಕರಣದಲ್ಲಿ ಕೆಲವರು ಮಾತ್ರ ಸಿಕ್ಕಿದ್ದಾರೆ. ಆದರೆ ಇದರ ಹಿಂದಿನ ಬಲಿಷ್ಠ ಕೈಗಳನ್ನು ಹಿಡಿಯಲು ಉನ್ನತ ತನಿಖೆಗೆ ಸರ್ಕಾರ ಒಪ್ಪಿಸಬೇಕು.

ರೈತ ಸಂಘದ ಜಿಲ್ಲಾ ಸಂಚಾಲಕ ಶಂಕರಪ್ಪ ಮಾತನಾಡಿ ರಾಜ್ಯದಲ್ಲೇ ಬಡ ರೈತರ ಜಮೀನು ಕಬಳಿಕೆ ನಡೆದಿದೆ. ಶಿರಾ ಮತ್ತು ಗುಬ್ಬಿ ಪ್ರಕರಣ ಕೇವಲ ಸಾಕ್ಷಿಯಾಗಿದೆ. ಇದೇ ಮಾದರಿ ಎಲ್ಲಡೆ ನಡೆದಿರುವ ಸಾಧ್ಯತೆ ಇದೆ. ಮಧ್ಯವರ್ತಿಗಳ ಹಾವಳಿಗೆ ತಕ್ಕಂತೆ ಕುಣಿಯುವ ಸರ್ಕಾರಿ ನೌಕರರು ಇಲ್ಲಿರುವುದು ಶೋಚನೀಯ. ಇವರ ಬೆಂಬಲಕ್ಕೆ ಜನ ಪ್ರತಿನಿಧಿಗಳು ಹಿಂಬದಿಯಲ್ಲಿ ನಿಂತಿರುವುದು ಕೂಡಾ ಮುಜುಗರ ತರುವಂತದ್ದು ಎಂದರು.

ಪ್ರಗತಿಪರ ಚಿಂತಕ ಯತಿರಾಜ್ ಮಾತನಾಡಿ ಭೂಮಿ ಕಬಳಿಕೆ ಅವ್ಯವಹಾರದಲ್ಲಿ ಇಲ್ಲಿ ನಡೆದರೆ ಕೇಂದ್ರದಲ್ಲಿ ಕಾನೂನು ರೀತಿಯೇ ಭೂಮಿ ಕಿತ್ತುಕೊಳ್ಳಲು ಮುಂದಾಗಿರುವುದು ಕಣ್ಮುಂದೆ ಇದೆ. ಭೂ ಕಾಯಿದೆ ತಿದ್ದುಪಡಿ ಮಾಡಿ ಬಂಡವಾಳಶಾಹಿಗಳಿಗೆ ಭೂಮಿ ಮಾರಾಟ ಮಾಡುವ ದಂಧೆ ಬಿಜೆಪಿ ಸರ್ಕಾರ ಮಾಡಿ ಆಗಿದೆ ಎಂದು ಕಿಡಿಕಾರಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಜಕೀಯ ನಾಯಕರುಗಳು ಇಂದು ರೈತರು ಸಂಕಷ್ಟದಲ್ಲಿದ್ದಾಗ ಯಾವುದೇ ಸ್ಪಂದನೆಗೆ ಒಳಪಡದೆ ಕೇವಲ ತಮ್ಮ ರಾಜಕೀಯ ವೃತ್ತಿಗೋಸ್ಕರ ರೈತರ ಹೆಸರು ಹೇಳಿಕೊಂಡು ಅಧಿಕಾರ ನಡೆಸುತ್ತಿರುವುದು ಒಂದೆಡೆಯಾದರೆ ತಾಲೂಕಿನ ಅಧಿಕಾರ ಚುಕ್ಕಾಣಿ ಹಿಡಿದ ಶಾಸಕ ಇಲ್ಲಿಯವರೆಗೂ ರೈತರಿಗೆ ಆದ ಅನ್ಯಾಯದ ಬಗ್ಗೆ ಯಾವುದೇ ಚಕಾರ ಎತ್ತದೆ ಇರುವುದು ಕಾರಣ ಏನು ಎಂದು ಪ್ರಶ್ನಿಸಿದ ಅವರು ಚೇಳೂರು ಹಟ್ಟಿ ಗ್ರಾಮದಲ್ಲಿ ಅರಣ್ಯಾಧಿಕಾರಿ ದೌರ್ಜನ್ಯವು ತೀವ್ರ ಖಂಡನೀಯ. ಈ ಬಗ್ಗೆ ಕೂಡಾ ಜಿಲ್ಲಾಡಳಿತಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಿ.ವಿ.ರತ್ನ ಕುಮಾರ್, ಎನ್. ಎ.ನಾಗರಾಜು, ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಪ್ರಾಂತ ರೈತ ಸಂಘದ ಸಂಚಾಲಕ ಅಜ್ಜಪ್ಪ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಅನುಸೂಯ, ಸಿ.ಟಿ.ಕುಮಾರ್, ಜಗದೀಶ್, ದೊಡ್ಡಮಾಳಯ್ಯ, ಯತೀಶ್, ಗುರು ಚನ್ನಬಸಪ್ಪ, ಶಿವಕುಮಾರ್, ಮೋಹನ್ ಕುಮಾರ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!