ತ್ಯಾಗಟೂರು ಗ್ರಾಪಂ ಅಧ್ಯಕ್ಷರಾಗಿ ಭೈರಮ್ಮ ಈಶ್ವರಯ್ಯ ಅವಿರೋಧ ಆಯ್ಕೆ

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ತ್ಯಾಗಟೂರು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅದಲಗೆರೆ ಸದಸ್ಯೆ ಭೈರಮ್ಮ ಅವಿರೋಧವಾಗಿ ಆಯ್ಕೆಯಾದರು.

ತ್ಯಾಗಟೂರು ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಶಿರಸ್ತೇದಾರ್ ಶ್ರೀನಿವಾಸ್ ನಡೆಸಿಕೊಟ್ಟರು. ಎಸ್ಸಿ ಮಹಿಳಾ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ತ್ಯಾಗಟೂರು ವಿಜಯಲಕ್ಷ್ಮೀ ರಾಜೀನಾಮೆ ಸಲ್ಲಿಸಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅದಲಗೆರೆ ಭೈರಮ್ಮ ಈಶ್ವರಯ್ಯ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ಸದಸ್ಯರ ಒಮ್ಮತದಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

ನಂತರ ಸುದ್ದಿಗಾರರ ಜತೆ ಮಾತನಾಡಿದ ನೂತನ ಅಧ್ಯಕ್ಷೆ ಭೈರಮ್ಮ, ನಿಟ್ಟೂರಿಗೆ ಹೊಂದಿಕೊಂಡ ತ್ಯಾಗಟೂರು ಗ್ರಾಪಂ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಸರ್ಕಾರದ ಅನುದಾನ ಬಳಸಿ ಅಭಿವೃದ್ದಿ ಕೆಲಸ ಮಾಡಿ ಮಾದರಿ ಗ್ರಾಪಂ ಎನಿಸಿಕೊಳ್ಳಲು ಶ್ರಮಿಸುತ್ತೇನೆ ಎಂದರು.

ಗ್ರಾಪಂ ಸದಸ್ಯ ಕುಮಾರಸ್ವಾಮಿ ಮಾತನಾಡಿ ಎಲ್ಲಾ ಸದಸ್ಯರು ಒಗ್ಗೂಡಿ ಪಂಚಾಯಿತಿ ಅಭಿವೃದ್ಧಿ ಮಾಡುತ್ತಿದ್ದೇವೆ. ಪಕ್ಷಾತೀತ ನಿಲುವು ಜೊತೆಗೆ ಶಾಸಕರು, ಸಂಸದರಿಂದ ಅನುದಾನ ತರುವಲ್ಲಿ ಶ್ರಮಿಸಿದ್ದೇವೆ. ಹೆದ್ದಾರಿಗೆ ಹೊಂದಿಕೊಂಡ ಈ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಕ್ಕೂ ಕುಡಿಯುವ ನೀರು, ರಸ್ತೆ, ಬೀದಿ ದೀಪ ಒದಗಿಸಿದ್ದೇವೆ. ವಿಶೇಷ ಅನುದಾನ ತರುವ ಜೊತೆಗೆ ತೆರಿಗೆ ಸಂಗ್ರಹ ಮಾಡುವ ಮೂಲಕ ಆದಾಯದ ಮೂಲ ಹೆಚ್ಚಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಉಪಾಧ್ಯಕ್ಷ ವಿದ್ಯಾಧರ, ಸದಸ್ಯರಾದ ಲಕ್ಷ್ಮೀಪತಿ, ಮಂಜುನಾಥ್, ಜಗದೀಶ್, ಸುಮಾ ಶ್ರೀನಿವಾಸ್, ಭವ್ಯ ಪರಮೇಶ್, ಜಯಮಾಲಾ ಸದಾಶಿವಯ್ಯ, ಶಿವನಂಜಯ್ಯ, ಕಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ರವಿಕುಮಾರ್, ಭಾಗ್ಯಮ್ಮ ಪಿಡಿಒ ರಾಮಾಂಜನಪ್ಪ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!