ಮಧುಗಿರಿ : ಸಿನಿಮಾಗಳಲ್ಲಿನ ಕ್ರೌರ್ಯ, ಹಿಂಸೆ ಇಂದಿನ ಯುವಕರ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತವೆ ಎಂಬುದಕ್ಕೆ ಇಲ್ಲೊಂದು ದುರ್ಘಟನೆ ಉದಾಹರಣೆಯಾಗಿದ್ದು, ತೆಲುಗಿನ ಅರುಂಧತಿ ಸಿನಿಮಾವನ್ನು ನಿರಂತರವಾಗಿ ವೀಕ್ಷಿಸುತ್ತಿದ್ದ ಯುವಕನೋರ್ವ ಅದೇ ಸಿನಿಮಾದಂತೆ ಮುಕ್ತಿಗಾಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಕೊಡಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಗಿಡ್ಡಯ್ಯನಪಾಳ್ಯದ ನಿವಾಸಿ ಸಿದ್ದಪ್ಪ ಎಂಬುವವರ ಪುತ್ರ ರೇಣುಕಾ(22) ಮುಕ್ತಿ ಬೇಕೆಂದು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ.
ತುಮಕೂರು ನಗರದಲ್ಲಿ ಪಿಯುಸಿ ಓದುತ್ತಿದ್ದ ರೇಣುಕ ಬುಧವಾರ ಕಾಲೇಜು ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್ ಆಗಿದ್ದ, ಮನೆಗೆ ಬಂದು ಮತ್ತೆ ಅರುಂಧತಿ ಸಿನಿಮಾ ನೋಡಿದ್ದಾನೆ. ನಂತರ ಪುರವರದ ಪೆಟ್ರೋಲ್ ಬಂಕ್ ವೊಂದರಲ್ಲಿ 20 ಲೀಟರ್ ಪೆಟ್ರೋಲ್ ಖರೀದಿಸಿ ತಂದಿಟ್ಟುಕೊಂಡಿದ್ದು, ಗುರುವಾರ ತಮ್ಮದೇ ರೇಷ್ಮೆ ತೋಟದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದಾನೆ. ಬೆಂಕಿ ಹಚ್ಚಿಕೊಂಡಿದ್ದನ್ನು ನೋಡಿದ ಪೋಷಕರು ಮತ್ತು ಗ್ರಾಮಸ್ಥರು ತಕ್ಷಣ ಓಡಿಹೋಗಿ ಬೆಂಕಿಯನ್ನು ನಂದಿಸಿದ್ದರಾದರು. ಮೈತುಂಬಾ ಸುಟ್ಟ ಗಾಯಗಳಾಗಿವೆ. ಗಂಬೀರವಾಗಿ ಗಾಯಗೊಂಡು ನರಳುತ್ತಿದ್ದ ಯುವಕನನ್ನು ಸಮಾಜಸೇವೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಅಂಬುಲೆನ್ಸ್ ಬಿಟ್ಟಿರುವ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಕುಮಾರ್ ಮತ್ತು ಸ್ನೇಹಿತರು ಆಂಬುಲೆನ್ಸ್ ನಲ್ಲಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಕ್ತಿ ಕೊಡಿಸಪ್ಪಾ ಎಂದು ಅಂಗಲಾಚಿದ : ಮಗನ ಸ್ಥಿತಿಯನ್ನು ನೋಡಿ ಕಣ್ಣೀರು ಹಾಕಿದ ತಂದೆ ಸಿದ್ದಪ್ಪ ಯಾಕಪ್ಪ ರೇಣುಕಣ್ಣ..ಹೀಗೆ ಮಾಡಿಕೊಂಡೆ ಏನಾಗಿದೆ ನಿನಗೆ, ಆ ತೆಲುಗು ಅರುಂಧತಿ ಸಿನಿಮಾ ನೋಡಬೇಡ ಎಂದು ಪದೇ ಪದೇ ಹೇಳಿದರೂ, ನೀನು ಕೇಳಲಿಲ್ಲ ಆ ಸಿನಿಮಾ ನೋಡಿ ಅದೇ ರೀತಿ ಮಾಡಿಕೊಂಡಿದ್ದೀಯಲ್ಲಪ್ಪ ಎಂದು ತಂದೆ ಮಗನನ್ನು ತಬ್ಬಿಕೊಂಡು ಕಣ್ಣೀರು ಹಾಕಿದಾಗ, ತಂದೆಯ ಕಣ್ಣುಗಳನ್ನೇ ದೃಷ್ಟಿಸಿದ ಮಗ, ಅಪ್ಪ ನನಗೆ ಮುಕ್ತಿ ಕೊಡಿಸಪ್ಪ ಕೊನೇಯ ಸ್ಟೇಜ್ ಅಪ್ಪಾ…ಎಂದು ಸಿನಿಮಾ ಮಾದರಿಯಲ್ಲೇ ತಂದೆಯನ್ನು ಅಂಗಲಾಚಿದ್ದಾನೆ. ಇದಕ್ಕೆ ಬೆಸ್ತು ಬಿದ್ದ ತಂದೆ ನಿನಗೆ ನಾನು ಯಾವ ರೀತಿ ಮುಕ್ತಿಕೊಡಿಸಲಪ್ಪಾ.. ಸಿನಿಮಾ ಗೀಳು ಹಚ್ಚಿಕೊಳ್ಳಬೇಡ ಎಂದರೂ ಕೇಳಲಿಲ್ಲ ಈಗ ನೋಡು ಎಂತಹ ಪರಿಸ್ಥಿತಿಗೆ ತಂದುಕೊಂಡೆ ಎಂದು ಮಗನ ದುಸ್ಥಿತಿಗೆ ತಂದೆ ಕಣ್ಣೀರು ಹಾಕಿದ್ದಾರೆ.
ಟಾಪರ್ ಆಗಿದ್ದವ ಹಾಸ್ಟೆಲ್ ಸೇರಿ ಕೆಟ್ಟನಾ ; ಆತ್ಯಹತ್ಯೆಗೆ ಯತ್ನಿಸಿದ ಯುವಕನ ತಂದೆ ಮತ್ತು ಗ್ರಾಮಸ್ಥರು ಹೇಳುವಂತೆ ಯುವಕ ಎಸ್ ಎಸ್ ಎಲ್ ಸಿ ಯಲ್ಲಿ ಟಾಪರ್ ಆಗಿದ್ದ, ಆದರೆ ಎಸ್.ಎಸ್.ಎಲ್.ಸಿ ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ತುಮಕೂರಿನ ಹಾಸ್ಟೆಲ್ ಗೆ ಸೇರಿಕೊಂಡು ಅಲ್ಲಿ ಪುಂಡ ಹುಡುಗರ ಸ್ನೇಹ ಬೆಳೆಸಿ ಸಿನಿಮಾ ಗೀಳು ಹತ್ತಿಸಿಕೊಂಡು ಕೆಟ್ಟ. 5 ವರ್ಷದಿಂದ ಸರಿದಾಗಿಗೆ ತರಲು ಪ್ರಯತ್ನಿಸಿದರೂ ಸಾದ್ಯವಾಗಲಿಲ್ಲ ಇಂದು ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಾರೆ