ಗುಬ್ಬಿ: ಚುನಾವಣಾ ಸಂದರ್ಭದಲ್ಲಿ ಸಲ್ಲದ ಟೀಕೆ ಮಾಡುತ್ತಾ ಕಾಂಗ್ರೆಸ್ ಪಕ್ಷವನ್ನೇ ಇಬ್ಭಾಗ ಮಾಡಲು ಮುಂದಾದ ಮುಖಂಡರ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ಪಕ್ಷದ ಆಂತರಿಕ ವಿಚಾರ ಬಹಿರಂಗ ಚರ್ಚೆ ಮಾಡುವವರು ಅಪಪ್ರಚಾರ ಪ್ರಿಯರು ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಬಿ.ಆರ್. ಭರತಗೌಡ ಟೀಕಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಪ್ರಚಾರ ಸಮಿತಿ ಅಧ್ಯಕ್ಷ ಸಲೀಂಪಾಷಾ ಅವರ ಹೇಳಿಕೆಗೆ ಪ್ರತ್ಯುತ್ತರ ನೀಡಿ ಪಕ್ಷಕ್ಕೆ ಯಾರೇ ಬರಲಿ ಸ್ವಾಗತ ಕೋರುವ ಜೊತೆಗೆ ಹೈಕಮಾಂಡ್ ನಿರ್ಧಾರಕ್ಕೆ ಬೆಲೆ ನೀಡಿ ಪಕ್ಷ ನಿಷ್ಠೆಯಿಂದ ಕೆಲಸ ಮಾಡಬೇಕಿದೆ. ಜಾತ್ರೆಗೆ ಬಂದು ಅಂಗಡಿ ಇಡುವ ರೀತಿ ಚುನಾವಣೆ ವೇಳೆ ಮಾತ್ರ ಗೊಂದಲ ಮೂಡಿಸುವ ಹೇಳಿಕೆ ನೀಡುವುದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ ಎಂದು ಕಿಡಿಕಾರಿದರು.
ಪಕ್ಷದಲ್ಲೇ ಚರ್ಚಿಸಿ ತೀರ್ಮಾನ ಮಾಡಿಕೊಳ್ಳುವ ವಿಚಾರವನ್ನು ಮಾಧ್ಯಮ ಮುಂದೆ ತರುವ ಉದ್ದೇಶ ತಿಳಿಯಬೇಕಿದೆ. ಈಗಾಗಲೇ ಟೋಕನ್ ಪಡೆದು ಮಾತಿನ ವರಸೆ ಬದಲಿಸುತ್ತಾ ಪಕ್ಷದಲ್ಲೇ ಒಡಕು ಮೂಡಿಸುತ್ತಿದ್ದಾರೆ. ಶಾಸಕರು ಅಥವಾ ಯಾವ ಮುಂಚೂಣಿ ನಾಯಕರು ಪಕ್ಷಕ್ಕೆ ಬರುವುದಾದರೇ ಸ್ವಾಗತ ಕೋರಬೇಕು. ಟಿಕೆಟ್ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಬರುವ ಮುನ್ನವೇ ವಿರೋಧ ವ್ಯಕ್ತಪಡಿಸುವುದು, ರಾಜ್ಯ ಮಟ್ಟದ ನಾಯಕರ ಬಗ್ಗೆ ಅವಹೇಳನ ಮಾಡುವುದು ಶೋಭೆಯಲ್ಲ ಎಂದು ಪ್ರತಿಕ್ರಿಯಿಸಿದ ಅವರು ಪಕ್ಷಕ್ಕೆ ಬರುವ ನಾಯಕರ ಬಳಿ ಟೋಕನ್ ಪಡೆಯಲು ಈ ತಂತ್ರಗಾರಿಕೆ ಬಳಸಿ ವಿರೋಧಿಸುವ ಗುಂಪು ಬೆಳೆಸಿಕೊಳ್ಳಲು ಮುಂದಾಗಿದ್ದಾರೆ ಎನಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ಕ್ಷೇತ್ರ ಸರ್ವೇ ಮಾಡಿ ಟಿಕೆಟ್ ಯಾರಿಗೆ ಎಂಬುದು ವರಿಷ್ಠರು ನಿರ್ಧರಿಸುತ್ತಾರೆ. ಬ್ಲಾಕ್ ಮಟ್ಟದ ಈ ಮುಖಂಡರು ಸಲ್ಲದ ಹೇಳಿಕೆ ನೀಡಿ ವಿರೋಧಿಸುತ್ತೇವೆ ಎಂದರೆ ಯಾರೋ ಕೇಳೋದಿಲ್ಲ. ಹಾದಿ ಬೀದಿಯಲ್ಲಿ ಮಾತು ಆಡುವ ಮುನ್ನ ಆಲೋಚಿಸಬೇಕಿತ್ತು. ಪಕ್ಷದ ಬಗ್ಗೆ ಅಗೌರವ ತೋರಿದಂತಾಗಿದೆ. ಕೆ.ಎನ್.ರಾಜಣ್ಣ ಅವರ ಹೇಳಿಕೆ ವಸ್ತು ನಿಷ್ಠೆಯಲ್ಲಿದೆ. ದೊಡ್ಡ ಮಟ್ಟದ ವಿಚಾರ ತಿಳಿದೇ ಮಾತನಾಡಿರುತ್ತಾರೆ. ಅವರ ಬಗ್ಗೆ ಟೀಕೆ ಸಲ್ಲದು. ಚುನಾವಣಾ ಸಂದರ್ಭದಲ್ಲಿ ಬರುವ ಮುಖಂಡರಲ್ಲಿ ಯಾರೋ ಅರ್ಹರಲ್ಲ. ಮುರುಳಿಧರ ಹಾಲಪ್ಪ ಹಾಗೂ ಬೆಟ್ಟದಹಳ್ಳಿ ಶಶಿಕಿರಣ್ ಅವರಿಗೆ ಟಿಕೆಟ್ ನೀಡಿದರೂ ಅರ್ಥವಿದೆ ಎಂದು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಎಸ್ಸಿ ಘಟಕದ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ ಪಕ್ಷದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜವಾಬ್ದಾರಿ ಹೊತ್ತು ಈ ರೀತಿ ಮುಖಂಡರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಪಕ್ಷ ಸೂಚಿಸಿದಂತೆ ನಡೆದುಕೊಳ್ಳುವುದು ಬಿಟ್ಟು ಮನಬಂದಂತೆ ಹೇಳಿಕೆ ನೀಡುವುದು ತರವಲ್ಲ. ಇದು ಪಕ್ಷ ಸಂಘಟನೆಗೆ ದೊಡ್ಡ ಪೆಟ್ಟು. ಅಪಪ್ರಚಾರ ಸಮಿತಿ ಅಧ್ಯಕ್ಷರಾಗಿ ವರ್ತಿಸಿದ್ದಾರೆ ಎಂದು ಬೇರೆಡೆ ಚರ್ಚೆಯಾಗುತ್ತಿದೆ. ಇದು ಬೇಸರ ಸಂಗತಿ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮಹಮದ್ ರಫಿ ಇತರರು ಇದ್ದರು.