ಯುವ ಜನತೆ ಆರ್ಥಿಕ ಸ್ವಾವಲಂಬಿ ಬದುಕು ರೂಡಿಸಿ ದೇಶ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು : ಶಾಸಕ ಎಸ್.ಆರ್.ಶ್ರೀನಿವಾಸ್.

ಗುಬ್ಬಿ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಆರ್ಥಿಕ ಸ್ವಾವಲಂಬಿ ಬದುಕು ರೂಡಿಸಿಕೊಳ್ಳಬೇಕಿದೆ. ಉದ್ಯೋಗ ಸೃಷ್ಟಿ ಜೊತೆ ತಲಾ ಆದಾಯ ಹೆಚ್ಚಿಸಿಕೊಳ್ಳಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ನಡೆದ 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಬಂದ ಸಮಯದಲ್ಲಿ ಶೇಕಡಾ 12 ರಷ್ಟು ಸಾಕ್ಷರತೆ ಇತ್ತು. ಅಭಿವೃದ್ದಿಯ ಹೆಜ್ಜೆ ಹಾಕುವ ನಂತರದಲ್ಲಿ ಸಾಕ್ಷರತಾ ಅಂಕಿ ಅಂಶ ಶೇಕಡಾ 77 ರಷ್ಟಿದೆ. ಬಾಕಿ ಇರುವ 23 ರಷ್ಟು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ. ಆದರೆ ಉದ್ಯೋಗ ಹುಡುಕಿ ವಿದೇಶದತ್ತ ಸಾಗುವ ಯುವ ಜನತೆಯನ್ನು ಹಿಡಿದು ಇಟ್ಟುಕೊಳ್ಳುವ ಕೆಲಸ ಮಾಡಲು ಸ್ವಾವಲಂಬಿತನಕ್ಕೆ ಆದ್ಯತೆ ನೀಡಬೇಕು ಎಂದ ಅವರು ಭೂ ಹಗರಣ ಕಳಂಕ ತಾಲ್ಲೂಕಿಗೆ ತಾಕುವ ಮುನ್ನ ಹಗರಣ ತೀವ್ರ ತನಿಖೆಗೆ ಒಳಪಡಿಸಲು ಸೂಚಿಸಿದ್ದೆ. ಆದರೆ ಸುಖಾಸುಮ್ಮನೆ ನನ್ನ ಮೇಲೆಯೇ ಆರೋಪ ಮಾಡಿ ಕೆಲವರು ಮಾತನಾಡುತ್ತಾರೆ. ಯಾವುದೇ ತಪ್ಪು ನನ್ನಿಂದ ಆಗಿಲ್ಲ. ನನ್ನ ಹೆಸರಿನಲ್ಲಿ ಅಥವಾ ಕುಟುಂಬ ಹೆಸರಿನಲ್ಲಿ ಬಗರ್ ಹುಕುಂ ಮೂಲಕ ಆಗಿದ್ದಲ್ಲಿ ನಿವೃತ್ತಿ ಘೋಷಿಸುತ್ತೇನೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಬಿ.ಆರತಿ ಸಂದೇಶ ನೀಡಿ ಸ್ವಾತಂತ್ರ್ಯ ತರಲು ಶ್ರಮಿಸಿದ ವೀರ ಸೇನಾನಿಗಳ ಸ್ಮರಿಸುವುದು ಎಲ್ಲರ ಕರ್ತವ್ಯ. ಮಹಾತ್ಮ ಗಾಂಧೀಜಿ ಅವರ ನೇತೃತ್ವದ ಚಳವಳಿ ಬ್ರಿಟಿಷರಿಂದ ಮುಕ್ತಿ ಕಂಡಿತು. ಸ್ವತಂತ್ರ ಭಾರತವನ್ನು ಗತ ವೈಭವಕ್ಕೆ ಮರಳಿಸುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಇಡೀ ದೇಶವನ್ನೇ ವಿಶ್ವ ವಿಖ್ಯಾತಗೊಳಿಸಿತು. 75 ವರ್ಷದ ನಂತರದ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಿ ದೇಶ ಭಕ್ತಿ ಪ್ರದರ್ಶಿಸಬೇಕಿದೆ ಎಂದು ಕರೆ ನೀಡಿದರು.

ಇತಿಹಾಸ ಪ್ರಾದ್ಯಾಪಕ ಡಾ.ಎಸ್.ಎ.ಮಲ್ಲಿಕಾರ್ಜುನ್ ಅವರು ವಿಶೇಷ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಪೊಲೀಸ್, ಗೃಹ ರಕ್ಷಕ ದಳ, ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ ಹಾಗೂ ಶಾಲಾ ಮಕ್ಕಳಿಂದ ಆಕರ್ಷಕ ಕವಾಯತು ನಡೆಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರತಿಭಾವಂತ ಮಕ್ಕಳು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಜಿ.ಕೆ.ಪರಮೇಶ್ವರಯ್ಯ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷ್ಮೀ, ತಾಪಂ ಇಓ ಪರಮೇಶ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಬಿಇಓ ಸೋಮಶೇಖರ್ ಸೇರಿದಂತೆ ಎಲ್ಲಾ ಪಪಂ ಸದಸ್ಯರು, ಎಲ್ಲಾ ಇಲಾಖಾಧಿಕಾರಿಗಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!