ಮಧುಗಿರಿ :-ಸ್ವಾತಂತ್ರ್ಯ ದಿನಾಚರಣೆ ದೇಶದ ಹಬ್ಬ. ತ್ಯಾಗ ಬಲಿದಾನಗಳ ಮೂಲಕ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಂ ವಿ ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ 76ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಅಮೃತ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿದ್ದೇವೆ. ಇಂದು ನಾವು ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಹೊಂದಿದ್ದು, ಇಡೀ ವಿಶ್ವದಲ್ಲೇ ಭಾರತ ಪ್ರಗತಿಪರ ಹಾಗೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವೆಂದು ಗುರುತಿಸಿಕೊಂಡಿದೆ. ಜಾಗತಿಕ ನಕ್ಷೆಯಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ. ನಮ್ಮ ದೇಶದ ಜನರಲ್ಲಿ ಅಡಗಿರುವ ರಾಷ್ಟಪ್ರೇಮದಲ್ಲಿ ಭಾರತದ ಶಕ್ತಿಯಿದೆ. ಒಂದು ದೇಶ ಸುಭದ್ರವಾಗಲು, ಸರ್ವತೋಮುಖ ಅಭಿವೃದ್ದಿ ಹೊಂದಲು ದೇಶದ ಪ್ರಜೆಗಳ ಕರ್ತವ್ಯ ಅತೀ ಮುಖ್ಯ, ದೇಶ ನಮಗೇನು ಮಾಡಿದೆ ಎಂಬುದರ ಬಗ್ಗೆ ಯೋಚಿಸದೇ ನಾವು ದೇಶಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇಂದಿಗೂ ಅನೇಕ ಜ್ವಲಂತ ಸಮಸ್ಯೆಗಳ ನಡುವೆ ನಾವಿದ್ದೇವೆ. ಜನಸಂಖ್ಯಾ ಸ್ಫೋಟ, ಬಡತನ, ಹಸಿವು, ಭ್ರಷ್ಟಾಚಾರ ಸೇರಿದಂತೆ ಅನೇಕ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಇವೆಲ್ಲವನ್ನೂ ಮೆಟ್ಟಿ ನಿಂತು ಧೃಡ, ಸಂಪದ್ಭರಿತ ದೇಶ ವನ್ನು ಕಟ್ಟಬೇಕಿದೆ ಎಂದ ಅವರು ಮಧುಗಿರಿ ತಾಲೂಕಿನ ಅಭಿವೃದ್ಧಿಗೆ ವೇಗ ಸಾಲದು, ತಾಲೂಕು ಬಹಳ ಹಿಂದುಳಿದಿದ್ದು, ತಾಲೂಕಿನ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ,ಜಿಲ್ಲಾ ಕೇಂದ್ರ,ಏತ್ತಿನಹೊಳೆ ಯೋಜನೆ,ಕೈಗಾರಿಕ ಪ್ರದೇಶ,ಏಕಶಿಲಾ ಬೆಟ್ಟಕ್ಕೆ ರೋಪ್ ವೇ,ತುಮಕೂರು-ರಾಯದುರ್ಗ ನಡುವಿನ ರೈಲ್ವೇ ಯೋಜನೆ ತ್ವರಿತವಾಗಿ ಅಗಬೇಕಾಗಿದೆ ಎಂದು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಧ್ವಜಾರೋಹಣ ನೆರವೇರಿಸಿ ಮಾತನಾಡಿ ” ಬಾಹ್ಯ ಶಕ್ತಿಗಳು ನಮ್ಮ ಆತ್ಮಶಕ್ತಿಯನ್ನು ಆಳಲು ಸಾಧ್ಯವಿಲ್ಲ” ಎನ್ನುವ ಪ್ರಜ್ಞೆಯನ್ನುಈ ದೇಶದ ಪ್ರತಿಯೊಬ್ಬ ಪ್ರಜೆ ಹೊಂದುವುದು ನಿಜವಾದ ಸ್ವಾತಂತ್ರ್ಯವಾಗಿದೆ.
ಕಳೆದ 75 ವರ್ಷಗಳಿಂದ ಮಾಡಿರುವ ಸಾಧನೆಗಳು ಮತ್ತು ದೇಶದ ಸವಲತ್ತುಗಳನ್ನು ಪಡೆಯುತ್ತಿರುವ ನಾವು ದೇಶಕ್ಕೆ ಕೊಟ್ಟಿರುವ ಕೊಡುಗೆಗಳೇನು ನಮ್ಮ ವೈಫಲ್ಯತೆಗಳೇನು ಎಂದು ಆತ್ಮವಲೋಕನ ಮಾಡಿಕೊಳ್ಳಬೇಕು. ಅದರ ಭಾಗವೇ ಹರ್ ಘರ್ ತಿರಂಗ ಆಜಾದಿ ಕಾ ಅಮೃತ ಮಹೋತ್ಸವ ಎಂದರು.
ಭಾರತದ ಸಾರ್ವಭೌಮತೆಯನ್ನು ಎದುರಿಸುವ ಧೈರ್ಯ ಯಾವ ದೇಶಕ್ಕೂ ಇಲ್ಲ ಉಕ್ಕೇನ್-ರಷ್ಯಾದ ನಡುವೆ ಈಗಲೂ ನಡೆಯುತ್ತಿರುವ ಯುದ್ಧದ ವೇಳೆ ಸಿಲುಕಿದ್ದ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಭಾರತ ತನ್ನ ತಾಯಿನಾಡಿಗೆ ಕರೆಸಿಕೊಂಡಿದೆ ಇದು ಭಾರತದ ಸ್ವತಂತ್ರ ವಿದೇಶಾಂಗ ನೀತಿಗೆ ಸಾಕ್ಷಿಯಾಗಿದೆ. ಆದರೂ ದೇಶದಲ್ಲಿ ಕೆಲವು ಸಮಸ್ಯೆಗಳಿದ್ದು, ಅಲ್ಲಲ್ಲಿ ಕೋಮು ಗಲಭೆ, ಹಿಂಸಾಚಾರ, ಭಯೋತ್ಪಾದನೆ ಒಂದು ಕಡೆಯಾದರೆ ಅತಿವೃಷ್ಟಿ, ಪ್ರವಾಹ, ತೈಲ ಬೆಲೆ ಹೆಚ್ಚಳ, ಕರೋನ, ಮಂಕಿ ಫಾಕ್ಸ್ ಗಳನ್ನು ಭೀಕರ ರೋಗಗಳು, ಹಣದುಬ್ಬರ, ಕಲುಷಿತ ವಾತಾವರಣ, ಪ್ಲಾಸ್ಟಿಕ್ ಸಮಸ್ಯೆ, ಖನಿಜ ಮಾಫಿಯಾ, ಭ್ರಷ್ಟಾಚಾರಗಳಂತಹ ಸಮಸ್ಯೆಗಳಿಂದ ದೇಶ ನಲುಗುತ್ತಿದೆ. ಇಂಥ ಸಮಯದಲ್ಲಿ ನಾವೆಲ್ಲರೂ ನಿಷ್ಠೆಯಿಂದ ಒಗ್ಗಟ್ಟಾಗಿ ದೇಶದ ಸವಾಲುಗಳನ್ನು ಹಿಮ್ಮೆಟ್ಟಿಸುತ್ತಾ ನಮ್ಮ ಹಿರಿಯರು ತ್ಯಾಗ ಬಲಿದಾನಗಳ ಮೂಲಕ ಗಳಿಸಿ ಕೊಟ್ಟಿರುವ ಸ್ವಾತಂತ್ರ್ಯವನ್ನು ಗೌರವಿಸಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ತಿಮ್ಮರಾಜು, ಡಿವೈಎಸ್ಪಿ ವೆಂಕಟೇಶ್ ನಾಯ್ಡು, ಡಿಡಿಪಿಐ ಕೆ.ಜಿ ರಂಗಯ್ಯ, ಪುರಸಭೆ ಸದಸ್ಯರಾದ ಎಂ.ಆರ್. ಜನಗನ್ನಾಥ್, ನಾರಾಯಣ್, ನರಸಿಂಹಮೂರ್ತಿ, ಚಂದ್ರಶೇಖರ್ ಬಾಬು, ಎಂ.ಎಸ್. ಚಂದ್ರಶೇಖರ್, ಕಸಾಪ ತಾಲೂಕು ಅಧ್ಯಕ್ಷೆ ಸಹನಾ ನಾಗೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ.ಹೆಚ್. ವೆಂಕಟೇಶಯ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಹೆಚ್.ಚಂದ್ರಕಾಂತ,ಪ್ರಧಾನ ಭಾಷಣಕಾರ ಟಿ.ಎನ್ ನರಸಿಂಹಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಶಂಕರಪ್ಪ, ತಹಶೀಲ್ದಾರ್ ಸುರೇಶಾಚಾರ್,ತಾ.ಪಂ.ಇಓ ಬಿ.ಎಸ್.ಲಕ್ಷ್ಮಣ್ ,ಬಿಇಓ ನಂಜುಂಡಯ್ಯ, ಎಇಇಗಳಾದ ರಾಜಶೇಖರ್, ಮಂಜುನಾಥ್, ಎಆರ್.ಟಿ.ಓ ದೇವಿಕಾ, ಸಿಡಿಪಿಓ ಅನಿತಾ, ಎ.ಡಿ ಹೆಚ್ ವಿಶ್ವನಾಥ್, ಗೌಡ, ಎಡಿಎ ಹನುಮಂತರಾಯಪ್ಪ, ತಾ.ಪಂ ಇಓ ಲಕ್ಷ್ಮಣ್, ಪುರಸಭೆ ಮುಖ್ಯಾಧಿಕಾರಿ ಫೈರೋಜ್ ಇತರರಿದ್ದರು.
ಇದೇ ಇದೇ ವೇಳೆ ತಾಲ್ಲೂಕಿನ ನಿವೃತ್ತ ಯೋಧರನ್ನು ತಾಲ್ಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಆಕರ್ಷಕ ಪಥಸಂಚಲನ ನಡೆಯಿತು. ಮಕ್ಕಳಿಂದ ದೇಶಭಕ್ತಿ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ರನ್ನು ಮನಸೊರೆಗೊಂಡಿತು.
ಬಾಕ್ಸ ಐಟಂ:-
ದೇಶ ಸ್ವಾತಂತ್ರ್ಯ ಗಳಿಸಲು ಅನೇಕ ಭಾರತೀಯರ ತ್ಯಾಗ ಬಲಿದಾನದಿಂದ ಸಾಧ್ಯವಾಗಿದೆ. ಸ್ವಾತಂತ್ರ್ಯಾನಂತರ ಭಾರತ ಬಹಳಷ್ಟು ಬದಲಾಗಿದೆ, ವೈಜ್ಞಾನಿಕ- ತಂತ್ರಜ್ಞಾನ- ಕೈಗಾರಿಕಾ- ಕೃಷಿ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವ ಜನರಿರುವ ದೇಶ ಭಾರತ ,ಯುವಜನರನ್ನು ದೇಶ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು. ಸ್ವಾತಂತ್ರ್ಯದ ಔಚಿತ್ಯವನ್ನು ಮನವರಿಕೆ ಮಾಡಿಕೊಟ್ಟು ದೇಶದ ಅಭಿವೃದ್ಧಿಗೆ ನಾಂದಿ ಹಾಡಬೇಕು