ಗುಬ್ಬಿ: ಸ್ವಾತಂತ್ರ್ಯ ಪಡೆಯುವ ಮುನ್ನ ಹಾಗೂ ನಂತರದ ನಮ್ಮ ದೇಶದ ಭವ್ಯ ಪರಂಪರೆ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮಗಳ ಆದ್ಯ ಕರ್ತವ್ಯ ಎಂದು ತಹಶೀಲ್ದಾರ್ ಬಿ.ಆರತಿ ತಿಳಿಸಿದರು.
ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಆಡಳಿತ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 75 ನೇ ವರ್ಷದ ಅಮೃತ ಮಹೋತ್ಸವ ಅವಿಸ್ಮರಣೀಯ ಅನುಭವವನ್ನು ಇಂದಿನ ಮಕ್ಕಳಲ್ಲಿ ತುಂಬಬೇಕಿದೆ. ಈ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಹಲವು ಕಾರ್ಯಕ್ರಮವನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ನಡೆಸಲಾಯಿತು. ಮಕ್ಕಳ ಪ್ರತಿಭೆಗೆ ನೀರೆರೆಯುವ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತು ನಡೆಸಿರುವುದು ಮೆಚ್ಚುವಂತಹದ್ದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ಅಮೃತ ಮಹೋತ್ಸವ ಆಚರಣೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ಅದ್ದೂರಿಯಾಗಿ ನಡೆಸಲಾಯಿತು. ಭಾರತಮಾತಾ ಭಾವಚಿತ್ರ ಮೆರವಣಿಗೆ, ಪಂಜಿನ ಮೆರವಣಿಗೆ ಹಾಗೂ ವೀರ ಸೇನಾನಿಗಳ ಪೋಟೋಗಳು ಅನಾವರಣ ಹಾಗೂ ಮಕ್ಕಳ ಪ್ರತಿಭಾ ಕಾರ್ಯಕ್ರಮ ನಡೆಸಲಾಗಿದೆ. ಈ ಜೊತೆಗೆ ಸಂಜೆಯ ಮನರಂಜನಾ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದೆ. ಪಟ್ಟಣದ ಎಲ್ಲಾ ಶಾಲಾ ಮಕ್ಕಳು ಈ ವೇದಿಕೆ ಬಳಸಿಕೊಂಡಿದ್ದಾರೆ. ಗುಬ್ಬಿ ವೀರಣ್ಣ ರಂಗ ಮಂದಿರ ಸುಂದರ ವೇದಿಕೆ ನೀಡಿದೆ ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಯತೀಶ್ ಮಾತನಾಡಿ ನಾಡು ನುಡಿಗಾಗಿ ಸದಾ ಮುಂದಿರುವ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಸೇವೆ ಸಲ್ಲಿಸಿ ಮಾತೃಭಾಷೆ ಉಳಿವಿಗೆ ಶ್ರಮಿಸಿದೆ. ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಮೃತ ಮಹೋತ್ಸವ ಅಂಗವಾಗಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಮಕ್ಕಳಲ್ಲಿ ಮತ್ತಷ್ಟು ಉತ್ಸಾಹ ತುಂಬಲಾಗಿದೆ ಎಂದರು.
ನಂತರ ಶಾಲಾ ಮಕ್ಕಳ ದೇಶ ಭಕ್ತಿ ಕುರಿತ ನಾಟಕ, ನೃತ್ಯ, ಸಂಗೀತ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಸಿ.ಕೃಷ್ಣಮೂರ್ತಿ, ಶಶಿಕುಮಾರ್, ಮಹಮದ್ ಸಾದಿಕ್, ಶೋಕತ್ ಆಲಿ, ಪ್ರಕಾಶ್, ಬಸವರಾಜು, ಮುಖ್ಯಾಧಿಕಾರಿ ಮಂಜುಳಾದೇವಿ, ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯಕುಮಾರ್, ಎಸ್ ಸಿವೈಸಿ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಂಕರಕುಮಾರ್, ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ಡಾ.ರಾಜೇಶ್ ಗುಬ್ಬಿ, ಕಸಾಪ ಪದಾಧಿಕಾರಗಳಾದ ದಯಾನಂದ ಸರಸ್ವತಿ, ದಯಾನಂದ್, ಕುಮಾರಸ್ವಾಮಿ, ರವೀಶ್ ಇತರರು ಇದ್ದರು.