ಗುಬ್ಬಿ: ಪಟ್ಟಣದ ದೈವ ಶ್ರೀ ಗ್ರಾಮದೇವತೆ ಅಮ್ಮನವರ ಜಾತ್ರಾ ಮಹೋತ್ಸವ ರಾತ್ರಿ ನೇತ್ರೋನ್ಮಿಲನ ಕಾರ್ಯಕ್ರಮದೊಂದಿಗೆ ಆರಂಭವಾಗಿ ಹದಿನೆಂಟು ಕೋಮಿನ ಸಮ್ಮುಖದಲ್ಲಿ ಮಧ್ಯಾಹ್ನ ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಳೇ ಸಂತೆ ಮೈದಾನದ ಗದ್ದುಗೆಯಲ್ಲಿ ಪ್ರತಿಷ್ಠಾಪಸಿಲಾಯಿತು.
ಶ್ರಾವಣ ಮಾಸ ಮಂಗಳವಾರ ಬೆಳಿಗ್ಗೆ 10.30 ಕ್ಕೆ ಗದ್ದುಗೆ ಪೂಜೆ ನಂತರ ಹೂವಿನಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಅಮ್ಮನವರ ಮೆರವಣಿಗೆ ಪಣಗಾರ್ ಬೀದಿಯ ನೂತನ ದೇವಾಲಯದಿಂದ ಊರಿನ ಪ್ರಮುಖ ರಾಜ ಬೀದಿಯಲ್ಲಿ ಸಾಗಿ ಸಂಜೆ 5 ಕ್ಕೆ ಹಳೇ ಸಂತೆ ಮೈದಾನದಲ್ಲಿ ಗದ್ದುಗೆಗೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಹದಿನೆಂಟು ಕೋಮಿನ ಮುಖಂಡರು ಹಾಗೂ ಪಟೇಲ್ ಕೆಂಪೇಗೌಡ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ನಂತರ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಎಲ್ಲಾ ಕೋಮಿನ ಪರ ಪೂಜೆ ಸಲ್ಲಿಸಿ ನಂತರ ಅಮ್ಮನವರಿಗೆ ವಿವಿಧ ಕೋಮಿನ ಆರತಿ ಸೇವೆ ನಡೆಸಲಾಯಿತು. ಹೀಗೆ ನಿತ್ಯ ಪೂಜೆ, ಸಂಜೆ ಹಲವು ಸಮಾಜದ ಆರತಿ ಸೇವೆ ಇನ್ನೂ ಎರಡು ದಿನ ನಡೆಯಲಿದೆ. ಗುರುವಾರ ಯಾದವರ ಬಾನ ಪೂಜೆ, ಈಡಿಗರ ಘಟೆ ಸೇವೆ ಹಾಗೂ ಆರತಿ ನಡೆದು ರಾತ್ರಿ 11 ಕ್ಕೆ ಅಮ್ಮನವರನ್ನು ಬೀಳ್ಕೊಡುವ ಮೆರವಣಿಗೆ ನಡೆಯಲಿದೆ. ಗದ್ದುಗೆಯನ್ನು ವಿಶೇಷವಾಗಿ ಅಲಂಕರಿಸಲಾಯಿತು. ಮುಸುಕಿನ ಜೋಳ ಹಾಗೂ ಸೇಬು, ದ್ರಾಕ್ಷಿ ಹಣ್ಣಿನ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು. ಮೆರವಣಿಗೆಯಲ್ಲಿ ಸೋಮನಕುಣಿತ, ಅಸಾದಿ ನೃತ್ಯ, ತಮಟೆ ವಾದ್ಯ ಹಾಗೂ ಸಿಡಿಮದ್ದು ಪ್ರದರ್ಶನ ಆಕರ್ಷಣೀಯವಾಗಿತ್ತು.