ಪಾವಗಡ: ಪಟ್ಟಣಕ್ಕೆ ಸಮೀಪವಿರುವ ಎಸ್.ಎಸ್.ಕೆ ಕಾಲೇಜು ಬಳಿ ಚಿರತೆಯೊಂದು ಹಾಡುಹಗಲೇ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ತುಮಕೂರು ಮುಖ್ಯ ರಸ್ತೆಯಲ್ಲಿರುವ ಮತ್ತು ಪಟ್ಟಣದಿಂದ ಕೇವಲ ಎರಡು ಕಿ.ಮೀ ದೂರವಿರುವ ಎಸ್.ಎಸ್,ಕೆ ಕಾಲೇಜು ಹಿಂಭಾಗದ ರಸ್ತೆಯಲ್ಲಿರುವ ಗುಂಡಿಯಲ್ಲಿ ಚಿರತೆ ನೀರು ಕುಡಿಯುವುದನ್ನು ಸ್ಥಳೀಯರು ಕಂಡು ಭಯಭೀತರಾಗಿದ್ದಾರೆ.
ಚಿರತೆ ಪ್ರತ್ಯಕ್ಷವಾಗಿರುವ ಸ್ಥಳ ಎಸ್.ಎಸ್.ಕೆ ಕಾಲೇಜಿಗೆ ಹೊಂದಿಕೊಂಡಿದ್ದು, ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಕ್ಕೆ ೨೦೦ ಮೀಟರ್ ದೂರವಿದೆ ಹಾಗೂ ರಾಯಲ್ ರೆಸಾರ್ಟ್ ನಿಂದ ೩೦೦ ಮೀಟರ್ ದೂರವಿದೆ ಮತ್ತು ಕಣಿವೇನಹಳ್ಳಿ ತಾಂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದ್ದು ಈ ಭಾಗದಲ್ಲಿ ಸಂಚರಿಸುವ ವಾಯು ವಿಹಾರಿಗಳು ಮತ್ತು ಜನರಲ್ಲಿ ಆತಂಕ ಮನೆಮಾಡಿದೆ.
ವಿಷಯ ತಿಳಿದು ಎಸ್.ಎಸ್.ಕೆ ಕಾಲೇಜು ಸಂಸ್ಥೆಯ ಅದ್ಯಕ್ಷರಾದ ಕೆ.ವಿ.ಶ್ರೀನಿವಾಸ್ ರವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಕಾಲೇಜಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದು ಹೋಗುತ್ತಾರೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೆ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಲಿಖಿತ ಮನವಿ ಪತ್ರ ಸಲ್ಲಿಸಿದ್ದಾರೆ.
ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷತೆ ಬದಿಗಿಟ್ಟು ಈ ಕೂಡಲೆ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಿ ಚಿರತೆಯನ್ನು ಸೆರೆಹಿಡಿದು ಸಾರ್ವಜನಿಕನ್ನು ರಕ್ಷಣೆ ಮಾಡಬೇಕಾಗಿದೆ ಎಂಬುದು ಸ್ಥಳಿಯ ನಾಗರೀಕರ ಒತ್ತಾಯವಾಗಿದೆ.