ಸಾರ್ವಜನಿಕ ರಂಗದ ಫೋಟೋಗ್ರಾಫರ್ ಕೂಡಾ ಸಾಮಾಜಿಕ ಸೇವಾಕರ್ತ : ಶಾಸಕ ಎಸ್.ಆರ್.ಶ್ರೀನಿವಾಸ್

ಗುಬ್ಬಿ: ಸಾರ್ವಜನಿಕ ರಂಗದಲ್ಲಿ ಸಾಮಾಜಿಕ ಕಳಕಳಿ ಹೊತ್ತ ಛಾಯಾಗ್ರಾಹಕರು ಸಂಘಟನೆ ಮೂಲಕ ಸಮಾಜದ ಒಳಿತಿಗೆ ಶ್ರಮಿಸಬೇಕಿದೆ. ಜನರ ಮಧ್ಯೆ ಆಗು ಹೋಗು ಗಮನಿಸುವ ಫೋಟೋಗ್ರಾಫರ್ ಕೂಡಾ ಸಾಮಾಜಿಕ ಸೇವಾಕರ್ತ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಎಸ್ ಎಂ ಪ್ಯಾಲೇಸ್ ನಲ್ಲಿ ತಾಲ್ಲೂಕು ಛಾಯಾಗ್ರಾಹಕರ ಸಂಘ ಆಯೋಜಿಸಿದ್ದ 183 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ಯುಗದಲ್ಲಿ ತಾಂತ್ರಿಕ ಜ್ಞಾನ ಬೆಳೆದಿದೆ. ಮೊಬೈಲ್ ಅಬ್ಬರದ ನಡುವೆ ಫೋಟೋ ಕೆಮರಾಗಳ ಕೈ ಚಳಕ ತೋರುವುದು ಸಾಹಸವಾಗಿದೆ. ಆದರೂ ಛಾಯಾಗ್ರಾಹಕರಿಗೆ ಇರುವ ಬೆಲೆ ಗೌರವ ಇಂದಿಗೂ ಇದೆ. ಅದಕ್ಕೆ ತಕ್ಕನಾಗಿ ಸಾಗುವ ಕಾರ್ಯ ಸಂಘ ಮಾಡಬೇಕಿದೆ ಎಂದರು.

ಜಾತಿಗೊಂದು ಸಮಾವೇಶ ನಡೆಯುವ ಈ ಸಮಯದಲ್ಲಿ ಜಾತ್ಯತೀತ ನಿಲುವು ಸಂಘ ಬೆಳೆಸಿಕೊಂಡು ಸಾಗಬೇಕು. ಸಂಘಟನೆಯೇ ಅಭಿವೃದ್ಧಿಗೆ ನಾಂದಿ. ಫೋಟೋಗ್ರಾಫರ್ ಗಳ ಬದುಕು ಗ್ರಾಮೀಣ ಭಾಗದಲ್ಲಿ ಕ್ಲಿಷ್ಟಕರವಾಗಿದೆ. ಆದರೆ ಈ ವೃತ್ತಿಯಲ್ಲಿ ವಿಶ್ವ ಖ್ಯಾತಿ ಪಡೆದವರು ಇದ್ದಾರೆ. ಸಮಾಜದ ಹಲವು ಮುಖಗಳನ್ನು ಪೋಟೋ ಮೂಲಕವೇ ಅನಾವರಣಗೊಳಿಸುವ ಚಾಣಾಕ್ಷತನ ಇಲ್ಲಿದೆ. ಶುಭ ಸಮಾರಂಭಗಳ ಸವಿ ನೆನಪು ಕಟ್ಟಿ ಕೊಡುವ ಈ ಫೋಟೋಗ್ರಾಫರ್ ಗಳ ಬಗ್ಗೆ ಗೌರವ ಹೆಚ್ಚಿರಬೇಕು ಎಂದ ಅವರು ಮಾಡುವ ಕಾಯಕದಲ್ಲಿ ಶ್ರದ್ದೆ ಬೆಳೆಸಿಕೊಂಡು ನಿಷ್ಠೆ ತೋರಿದರೆ ಯಶಸ್ಸು ಸಿಗಲಿದೆ. ಈ ವೃತ್ತಿಯಲ್ಲಿ ಬಹಳ ಮಂದಿ ಯಶ ಕಂಡವರು ನಿಮ್ಮಲ್ಲೇ ಇದ್ದಾರೆ ಎಂದರು.

ತಹಶೀಲ್ದಾರ್ ಬಿ.ಆರತಿ ಮಾತನಾಡಿ ಛಾಯಾಗ್ರಹಣ ಎಂಬುದು ಅಭೂತ ಪೂರ್ವ ಕೊಡುಗೆ. ತಾಂತ್ರಿಕತೆ ಬೆಳೆದಂತೆ ಮಾರ್ಪಾಡು ಗೊಂಡ ಫೋಟೋಗಳು ವಿಡಿಯೋ ಕೂಡಾ ಆಯಿತು. ಹೀಗೆ ಬೆಳೆದ ತಂತ್ರಜ್ಞಾನಕ್ಕೆ ತಕ್ಕಂತೆ ಛಾಯಾಗ್ರಾಹಕರ ಸಂಘ ಬಲಗೊಂಡು ಇತರೆ ಸದಸ್ಯರು ಬೆನ್ನೆಲುಬಾಗಿ ನಿಲ್ಲಬೇಕು. ವೃತ್ತಿ ಬದುಕು ಕಟ್ಟಿಕೊಂಡ ಫೋಟೋಗ್ರಾಫರ್ ಗಳು ಇಂದಿನ ದಿನಮಾನದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ಬೆಂಬಲಕ್ಕೆ ಸಂಘ ನಿಲ್ಲುವಂತೆ ಕರೆ ನೀಡಿದರು.

ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಭಕ್ತವತ್ಸಲ ಮಾತನಾಡಿ ಈ ಫೋಟೋಗ್ರಾಫರ್ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡವರಿಗಿಂತ ಹಿನ್ನಡೆ ಕಂಡವರ ಸಂಖ್ಯೆ ಹೆಚ್ಚು. ಆದರೆ ಇಲ್ಲೇ ಶ್ರಮವಹಿಸಿ ಭವಿಷ್ಯ ರೂಪಿಸಿಕೊಂಡವರು ಮಾದರಿಯಾಗಿರುವ ನಿದರ್ಶನ ಸಹ ಇಲ್ಲಿದೆ. ನಮ್ಮಲ್ಲಿನ ಸಂಘಟನೆ ಬಲಗೊಳಿಸಲು ಎಲ್ಲಾ ತಾಲ್ಲೂಕಿನಲ್ಲೂ ಸಂಘ ಆರಂಭವಾಗಿ ಸಂಘಟಿತರಾಗಿದ್ದಾರೆ. ಅವರ ಕಷ್ಟ ಸುಖ ಆಲಿಸುವ ಕೆಲಸ ಜಿಲ್ಲಾ ಸಂಘ ಮಾಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರು, ಪ್ರತಿಭಾವಂತ ಸದಸ್ಯರ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಗೆ ಮುನ್ನ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಕೆಮರಾ ಪಿತಾಮಹ ಲೂಯಿಸ್ ಡ್ಯಾಗೂರೆ ಅವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಸಿ.ಕೃಷ್ಣಮೂರ್ತಿ, ಜಿಲ್ಲಾ ಸಂಘದ ಮಹೇಶ್, ಅನಿಲ್, ಗುಬ್ಬಿ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎನ್.ನರಸಿಂಹರಾಜು, ಗೌರವಾಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ಮಲ್ಲೇಶ್, ಸಹ ಕಾರ್ಯದರ್ಶಿ ಶಶಿಕುಮಾರ್, ಸಂಘಟನಾ ಕಾರ್ಯದರ್ಶಿ ಬಾಲು, ಸಂಚಾಲಕ ಜಗದೀಶ್, ನಿರ್ದೇಶಕರಾದ ಸಿದ್ದಗಂಗಯ್ಯ, ವೀರೇಶ್, ರಮೇಶ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!