ತುಮಕೂರು: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೀಮಸಂದ್ರ, ಅಡಗೂರು ಮತ್ತು ಮಲ್ಲಸಂದ್ರ ಕೆರೆ ಹಾಗೂ ತುಮಕೂರು ಶಾಖಾ ನಾಲೆಯ 131ನೇ ಕಿ.ಮೀ.ನಲ್ಲಿ ಮತ್ತು 97.8ನೇ ಕಿ.ಮೀ.ನಲ್ಲಿ ಉಂಟಾಗಿರುವ ಹಾನಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳುವ ಅವಶ್ಯಕತೆ ಇರುವುದರಿಂದ ಇದಕ್ಕೆ ಬೇಕಾಗುವ ಅನುದಾನ ಹಾಗೂ ವಲಯದ ಒಟ್ಟಾರೆ ಮಳೆ ಹಾನಿಯಾಗಿರುವುದನ್ನು ಪುನರ್ ಸ್ಥಾಪಿಸಲು ಪ್ರಸ್ತಾವನೆಯನ್ನು ಪರಿಶೀಲಿಸಿ ಅಗತ್ಯ ಅನುದಾನವನ್ನು ಒದಗಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಜುಲೈ ಹಾಗೂ ಆಗಸ್ಟ್ ಮಾಹೆಯಲ್ಲಿ ಬಿದ್ದ ಭಾರಿ ಮಳೆಯಿಂದ ತುಮಕೂರು ಜಿಲ್ಲೆಯಲ್ಲಿ ಅಗಾಧ ಪ್ರಮಾಣದ ಹಾನಿ ಉಂಟಾಗಿದ್ದು, ಇದರಿಂದ ಪ್ರಮುಖವಾಗಿ ಕೆರೆಗಳ ಏರಿಗಳು, ತೂಬುಗಳು ಮತ್ತು ಕೋಡಿಗಳು ಹಾಳಾಗಿವೆ. ಮುಖ್ಯ ನಾಲೆಗಳ ಮತ್ತು ವಿತರಣಾ ನಾಲೆಗಳ ಲೈನಿಂಗ್ ಕುಸಿತ, ಅಚ್ಚುಕಟ್ಟು ರಸ್ತೆಗಳ ಹಾನಿ, ಮಣ್ಣು ಏರಿ ಕುಸಿತ, ತಡೆಗೋಡೆಗಳ ಕುಸಿತ, ಇತ್ಯಾದಿ ನೀರಾವರಿ ಸ್ವತ್ತುಗಳಿಗೆ ಹಾನಿ ಉಂಟಾಗಿದ್ದು, ಒಟ್ಟಾರೆಯಾಗಿ ೬೫ ಸಂಖ್ಯೆಯ 49.94 ಕೋಟಿ ರೂ. ಮೊತ್ತದ ಕಾಮಗಾರಿಗಳು ಹಾನಿಗೊಳಗಾಗಿರುತ್ತದೆ ಎಂದು ತಿಳಿಸಿದರು.
ತುಮಕೂರು ಶಾಖಾ ನಾಲೆಯ ಸರಪಳಿ 131.೦೦ ಕಿ.ಮೀ. ನಾಲಾ ಪಂಕ್ತೀಕರಣವು ತುಮಕೂರು-ಗುಬ್ಬಿ ಹೆದ್ದಾರಿಯನ್ನು ಹಾದು ಹೋಗುತ್ತಿದ್ದು, ಸದರಿ ಸರಪಳಿಯ ಹತ್ತಿರದಲ್ಲಿ ತುಮಕೂರು ನಗರದ ವ್ಯಾಪ್ತಿಯಲ್ಲಿ ಬರುವ ತುಮಕೂರು ಅಮಾನಿಕೆರೆಯ ಕೋಡಿ ಹಳ್ಳವು ಒತ್ತುವರಿಯಾಗಿದ್ದು, ಇತ್ತೀಚಿನ ಭಾರಿ ಮಳೆಯಿಂದಾಗಿ ತುಮಕೂರು ಅಮಾನಿಕೆರೆಯು ತುಂಬಿ ಹೆಚ್ಚುವರಿ ನೀರನ್ನು ಹಳ್ಳದ ಮುಖಾಂತರ ಹರಿದು ಹೋಗುವ ಸಮಯದಲ್ಲಿ ಹಳ್ಳ ಒತ್ತುವರಿಯಿಂದಾಗಿ ತುಮಕೂರು ಶಾಖಾ ನಾಲೆಯ ಸರಪಳಿ 131.೦೦ ಕಿ.ಮೀ.ನಲ್ಲಿ ನಾಲೆಗೆ ಪ್ರವೇಶಿಸಿದ್ದರಿಂದ ನಾಲೆಯ ಪಾರ್ಶು ಹಾಗೂ ಅಡ್ಡ ಮೋರಿಗಳಿಗೆ ಹಾನಿ ಉಂಟಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಗುಬ್ಬಿ ತಾಲ್ಲೂಕು ಅಡಗೂರು ಕೆರೆಯ ಕೋಡಿಯು ಹೆಚ್ಚು ಹಾನಿಯಾಗಿದೆ. ಇದನ್ನು ಶೀಘ್ರವಾಗಿ ದುರಸ್ತಿ ಪಡಿಸದಿದ್ದರೆ ನೀರು ಅಚ್ಚುಕಟ್ಟು ಪ್ರದೇಶಕ್ಕೆ ನುಗ್ಗುವ ಸಂಭವವಿದ್ದು, ಬೆಳೆ ನಾಶ ಹಾಗೂ ಪ್ರಾಣ ಹಾನಿಯಾಗುವ ಸಂಭವವಿರುವುದರಿಂದ ಕೂಡಲೇ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.
ಆಗಸ್ಟ್ 10ರವರೆಗೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆರೆ ಕಟ್ಟೆಗಳು ಒಡೆದು ಹೋಗಿದ್ದು, ತೂಬುಗಳು ಮತ್ತು ಕೋಡಿಗಳು ಹಾನಿಗೊಳಗಾಗಿದ್ದು, ಹೇಮಾವತಿ ಮುಖ್ಯ ಕಾಲುವೆ ಮತ್ತು ವಿತರಣೆ ಕಾಲುವೆಗಳಲ್ಲಿ ಮಣ್ಣು ಕುಸಿತವಾಗಿದ್ದು, ಮತ್ತು ಅನೇಕ ಸಿಡಿ ವರ್ಕ್‌ಗಳು, ಸೇತುವೆಗಳು ಒಡೆದು ಹೋಗಿ ಅಪಾರ ಪ್ರಮಾಣದಂತಹ ನಷ್ಟವಾಗಿದೆ. ಇಂದು ಮತ್ತೆ ಹೇಮಾವತಿ ತುಮಕೂರು ಬ್ರಾಂಚ್ ಕಾಲುವೆ 97ರಲ್ಲಿ ತಡೆಗೋಡೆ ಮಣ್ಣು ಕುಸಿದು ದೊಡ್ಡ ಪ್ರಮಾಣದಲ್ಲಿ ಅಂದರೆ ಸುಮಾರು 350 ಮೀಟರ್‌ನಷ್ಟು ಭೂಕುಸಿತವಾಗಿ ನಾಲೆಯೊಳಗೆ ಬೀಳುತ್ತಿದ್ದು, ಮುಂದೆ 195 ಕಿ.ಮೀ.ವರೆಗೆ ನೀರು ಹರಿದು ಹೋಗುವುದಕ್ಕೆ ಇದರಿಂದಾಗಿ ತೊಂದರೆಯಾಗಿದೆ. ಇದನ್ನು ಕೂಡಲೇ ದುರಸ್ತಿಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂದಾಜು ಇದಕ್ಕೆ 25 ಕೋಟಿ ರೂ. ಬೇಕಾಗಿದ್ದು, ಇದಕ್ಕೆ ಕೂಡಲೇ ಡಿಪಿಆರ್ ಸಿದ್ಧಪಡಿಸಿ ಕಾಮಗಾರಿ ಅನುಮೋದನೆ ಪಡೆದು ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚಿಸಲಾಗಿದೆ.
ಒಟ್ಟಾರೆ ಜುಲೈ 31 ರಿಂದ ಆಗಸ್ಟ್ 10ರವರೆಗೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿರುತ್ತದೆ. ಒಟ್ಟಾರೆ ಜಲಸಂಪನ್ಮೂಲ ಇಲಾಖೆಯಿಂದ ಒಟ್ಟು ೬೫ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದ್ದು, ಇದಕ್ಕೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಇದಕ್ಕೆ 49.50ಕೋಟಿಯಷ್ಟು ಹಣ ಬೇಕಾಗಲಿದ್ದು, ಇದಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಈ ಸಂಬಂಧ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದರು.
ಆದಷ್ಟು ಬೇಗನೆ ಕೆರೆ, ಕಟ್ಟೆಗಳ, ಕಾಲುವೆಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಸಂಸದರಾದ ಜಿ.ಎಸ್. ಬಸವರಾಜು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಂಕರೇಗೌಡ, ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಎಂ.ವರದಯ್ಯ, ಕಾರ್ಯಪಾಲಕ ಇಂಜಿನಿಯರ್ ಸಿ.ಆರ್. ಮೋಹನ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಸಂದರ್ಭ ಉಪಸ್ಥಿತರಿದ್ದರು.