ಮಧುಗಿರಿ : ಮಧುಗಿರಿ ಕಂದಾಯ ಜಿಲ್ಲಾಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.
ಪಟ್ಟಣದ ಎಂಜಿಎಂ ಪ್ರೌಢಶಾಲೆಯ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜು ಸಂಘಗಳ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಇಂಡಿಯಾದಿಂದ ಭಾರತದ ಕಡೆಗೆ ಉಪನ್ಯಾಸಕ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಧುಗಿರಿ ಜಿಲ್ಲೆಯಾದರೆ ಉನ್ನತ ಶಿಕ್ಷಣ ಕಾಲೇಜುಗಳು ಪ್ರಾರಂಭವಾಗಿ ಹೆಚ್ಚು ಮಂದಿ ಶಿಕ್ಷಣವಂತರಾಗಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ಯಾರೂ ಕೂಡ ವಂಚಿತರಾಗಬಾರದು. ವಿದ್ಯಾಬ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಅಂತಹವರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು. ಪಠ್ಯ ಪುಸ್ತಕಗಳಲ್ಲಿ ಇತಿಹಾಸವನ್ನು ತಿದ್ದುವ ಕಾರ್ಯ ನಡೆಯುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಯಾರು ಕೂಡ ಇತಿಹಾಸ ತಿರುಚುವ ಕೆಲಸ ಮಾಡಬಾರದು ಎಂದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಹಾಗೂ ಯೋಧರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು.
ತಾಲ್ಲೂಕು ಕನ್ನಡ ಭವನ ನಿರ್ಮಾಣಕ್ಕಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ, ಕಾಮಗಾರಿಯನ್ನು ನವೆಂಬರ್ ಮಾಹೆ ಒಳಗಾಗಿ ಪೂರ್ಣಗೊಳಿಸಿ, ಕನ್ನಡದ ಚಟುವಟಿಕೆಗಳನ್ನು ನಡೆಸುವಂತಾಗಬೇಕೆಂದು ತಿಳಿಸಿದರು.
ಉಪನ್ಯಾಸಕ ಮಹಾಲಿಂಗೇಶ್ , ಡಿವೈಎಸ್ ಪಿ ಕೆ. ಎಸ್. ವೆಂಕಟೇಶ ನಾಯ್ಡು ಮಾತನಾಡಿದರು. ಸಾಹಿತಿ ಮಲನಮೂರ್ತಿ , ಪ್ರಾಂಶುಪಾಲ ರಂಗಪ್ಪ, ಎಂ.ಜಿ.ಎಂ ಸಂಸ್ಥೆಯ ಅಧ್ಯಕ್ಷ ಡಿ.ಜಿ.ಶಂಕರನಾರಾಯಣ ಶೆಟ್ಟಿ , ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್ , ಉಪಾಧ್ಯಕ್ಷ ರಾಮಚಂದ್ರಪ್ಪ , ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಸ್. ಶಂಕರ್ ನಾರಾಯಣ ರಂಗಧಾಮಯ್ಯ, ಖಜಾಂಚಿ ವೆಂಕಟೇಶ್ ಪ್ರಸಾದ್, ಪುರಸಭೆ ಸದಸ್ಯರಾದ ಮಂಜುನಾಥ್ ಆಚಾರ್, ಲಾಲೆ ಪೇಟೆ ಮಂಜುನಾಥ್, ಅಲೀಮ್, ಕಸಾಪ ನಿರ್ದೇಶಕರಾದ ಉಮಾ ಮಲ್ಲೇಶ್, ವೀಣಾ ಶ್ರೀನಿವಾಸ್, ಎಂ.ವಿ. ಮೂಡ್ಲಿ ಗಿರೀಶ್, ಜಗದೀಶ್ , ರಂಗಧಾಮಯ್ಯ, ನಂಜಮ್ಮ , ಶೃತಿ ಅಭಿಲಾಷ್ , ಗಾಯಿತ್ರಿ ನಾರಾಯಣ್ , ಶಕುಂತಲಾ, ಎಂಜಿಎಂ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಇದ್ದರು.