ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವಂತೆ ಸಿಇಓ ಕರೆ

ತುಮಕೂರು: ಚುನಾವಣೆಯನ್ನು ಮತ್ತಷ್ಟು ಸುಗಮವಾಗಿ ನಡೆಸುವ ಉದ್ದೇಶದಿಂದ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಕಾರ್ಯಕ್ರಮವನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಜೋಡಣೆ ಮಾಡಿದರೆ ಚುನಾವಣೆ ಇನ್ನಷ್ಟು ಸುಗಮವಾಗಿ ನಡೆಯಲಿದೆ. ಹಾಗಾಗಿ ಪ್ರತಿಯೊಬ್ಬರೂ ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಜೋಡಣೆ ಮಾಡಿಸಬೇಕು ಎಂದು ಕರೆ ನೀಡಿದರು.

ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಆವರಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಪಿಕ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಚುನಾವಣೆ ಮತ್ತಷ್ಟು ಪಾರದರ್ಶಕವಾಗಿ ನಡೆಯಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಗ ಜಾರಿಗೆ ತಂದಿದೆ.

ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ಪ್ರಜಾಪ್ರಭುತ್ವ ಗಟ್ಟಿಯಾಗಿರಲು ಚುನಾವಣೆ ಮುಖ್ಯ. ಚುನಾವಣೆ ಎಷ್ಟು ಪಾರದರ್ಶಕವಾಗಿ ನಡೆಯುತ್ತದೆಯೋ ಅಷ್ಟು ಪ್ರಜಾಪ್ರಭುತ್ವ ಗಟ್ಟಿಯಾಗುತ್ತಾ ಹೋಗುತ್ತದೆ ಎಂದರು.

ಚುನಾವಣೆಯಲ್ಲಿ ಹಕ್ಕು ಚಲಾಯಿಸುವವರು ನಾವೇ. ಭಾರತದ ನಾಗರಿಕರಾಗಿ ನಮಗೆ ಕೆಲವು ಹಕ್ಕು, ಹೊಣೆಗಾರಿಕೆಗಳಿವೆ. ನಮ್ಮ ಹೊಣೆಗಾರಿಕೆ. ಜವಾಬ್ದಾರಿಗಳ ಬಗ್ಗೆ ಯೋಚಿಸಬೇಕು. ಹೊಣೆಗಾರಿಕೆಗಳನ್ನು ಯಾರು ನಿರ್ವಹಿಸುತ್ತಾರೋ ಅವರಿಗೆ ಕೇಳುವ ಹಕ್ಕಿರುತ್ತದೆ. ಹಕ್ಕು ಮತ್ತು ಹೊಣೆಗಾರಿಗೆ ಎರಡೂ ಕೂಡಾ ಒಂದಕ್ಕೊಂದು ಪೂರಕವಾಗಿರುತ್ತದೆ ಎಂದರು.

ನಮ್ಮ ದೇಶದ ಸಂವಿಧಾನ ವಿಶೇಷವಾದ ಹಕ್ಕನ್ನು ಕೊಟ್ಟಿದೆ. ೧೮ ವರ್ಷ ಪೂರ್ಣವಾದವರಿಗೆ ವಿಶೇಷವಾದ ಮತದಾನದ ಹಕ್ಕು ಬರುತ್ತದೆ ಎಂದು ಅವರು ಹೇಳಿದರು.

ಬೇರೆ ದೇಶಗಳಿಗೆ ಹೋಲಿಕೆ ಮಾಡಿ ನೋಡಿದರೆ ಅಲ್ಲಿ ಮಾತನಾಡುವ ಹಕ್ಕಿಲ್ಲ. ಆದರೆ ನಮ್ಮಲ್ಲಿ ನಾವೆಲ್ಲ ಮಾತನಾಡುವ ಹಕ್ಕು, ನೆಮ್ಮದಿಯಿಂದ ನಿದ್ದೆ ಮಾಡುವ, ಹೊರಗೆ ಓಡಾಡುವ ಹಕ್ಕಿದೆ ಎಂದು ಹೇಳುವ ಮೂಲಕ ಸಿಇಓ ಡಾ. ಕೆ. ವಿದ್ಯಾಕುಮಾರಿ ಅವರು ವಿದ್ಯಾರ್ಥಿಗಳು ಚುನಾವಣಾ ಜಾಗೃತಿ ಮೂಡಿಸಿದರು.

ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಬಿ. ಕರಿಯಣ್ಣ ಮಾತನಾಡಿ, ಮತದಾನ ಬಹಳ ಪವಿತ್ರವಾದ ಹಕ್ಕು, ಪ್ರಜಾಪ್ರಭುತ್ವ ಬಲಿಷ್ಠಗೊಳ್ಳಬೇಕಾದರೆ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಹೀಗಾಗಬೇಕಾದರೆ ಚುನಾವಣೆ ಪಾರದರ್ಶಕವಾಗಿ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾರರ ಗುರುಚಿನ ಚೀಟಿಗೆ ಆಧಾರ್ ನಂಬರ್ ಜೋಡಣೆ ಮಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಜಿ.ಪಂ. ಯೋಜನಾ ಅಭಿಯಂತರ ಶ್ರೀನಿವಾಸ್ ಅವರು ವಿದ್ಯಾರ್ಥಿಗಳಿಗೆ ಮತದಾರರ ಗುರುತಿನ ಚೀಟಿಗೆ ಆಧಾರ ಲಿಂಕ್ ಮಾಡುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ತುಮಕೂರು ವಿವಿ ಕಲಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!