ಮಧುಗಿರಿ : ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸಿದಾಗ ಮಾತ್ರ ರೈತರು ಕೃಷಿ & ಹೈನುಗಾರಿಕೆಯಲ್ಲಿ ಲಾಭ ಗಳಿಸಲು ಸಾಧ್ಯ. ಎಂದು ತುಮುಲ್ ಮಾಜಿ ಅಧ್ಯಕ್ಷ, ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ತುಮುಲ್ ಉಪ ಕೇಂದ್ರ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಣೆ ಮತ್ತು ಮೇವು ಕಟಾವು ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶೇ.99 ರಷ್ಟು ರೈತರು ಇಂದು ಹಾಲು ಉತ್ಪಾದಕರಾಗಿದ್ದು, ಅವರು ಆರ್ಥಿಕವಾಗಿ ಸದೃಡರಾದಾಗ ಮಾತ್ರ ನಮ್ಮ ಅಧಿಕಾರಕ್ಕೆ ಅರ್ಥ ಬರುತ್ತದೆ. ಆದರೆ ಇಂದು ರೈತರ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದ್ದು, ಇಷ್ಟೊಂದು ಮಳೆ ಬಂದರೂ ರೈತರ ಬೆಳೆಗಳಿಗೆ ಪ್ರಯೋಜನವಾಗಿಲ್ಲ. ಎಲ್ಲಾ ಕಷ್ಟಗಳೂ ರೈತರಿಗೇ ಬರುತ್ತವೆ. ವರ್ಷ ಪೂರ ಕಷ್ಟ ಪಟ್ಟು ಬೆಳೆ ಬೆಳೆದರೂ ಕೂಲಿ ಸಹ ಹುಟ್ಟದ ಪರಿಸ್ಥಿತಿ ರೈತರದ್ದು, ಇದರಿಂದ ರೈತರು ತತ್ತರಿಸಿ ಹೋಗಿದ್ದು, ರೈತರಿಗೆ ಹೈನುಗಾರಿಕೆ ವರದಾನವಾಗಿದೆ ಎಂದರು.
ಜಿಲ್ಲೆಯಲ್ಲಿ ಲಕ್ಷಾಂತರ ಸಂಸಾರಗಳು ಇಂದು ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದು, ಈ ಹಿಂದೆ ಹಿಂದೆ ಒಕ್ಕೂಟದಲ್ಲಿ ರೈತರಿಗೆ ಬಟವಾಡೆ ನೀಡಲೂ ಸಹ ಹಣವಿರಲಿಲ್ಲ. ಸುಮಾರು 100 ಕೋಟಿ ಹಣ ರೈತರಿಗೆ ಬಟವಾಡೆ ನೀಡುವುದು ಬಾಕಿಯಿತ್ತು. ಆದರೆ ನಾನು ಅಧ್ಯಕ್ಷನಾದ ನಂತರ ಒಕ್ಕೂಟದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದ್ದು, ನನ್ನ ಸ್ವಂತ ಮನೆಯ ಕೆಲಸದಂತೆ ಒಕ್ಕೂಟದ ಕೆಲಸವನ್ನು ಮಾಡಿದ್ದು, ಒಕ್ಕೂಟ ಇಂದು ಲಾಭದತ್ತ ದಾಪುಗಾಲು ಹಾಕಿದೆ. 100 ಕೋಟಿ ರೂಗಳನ್ನು ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆ. ರೈತರಿಗೆ ಸಕಾಲಕ್ಕೆ ಬಟವಾಡೆ ನೀಡಿದರೆ ಒಕ್ಕೂಟದ ವ್ಯವಸ್ಥೆಗೆ ಅರ್ಥ ಬರುತ್ತದೆ ಎಂಬ ಉದ್ದೇಶದಿಂದ ಕಾಲಕಾಲಕ್ಕೆ ಬಟವಾಡೆ ನೀಡಲಾಗುತ್ತಿದ್ದು, ಇಂದು ಪ್ರತೀ ವಾರ 27 ಕೋಟಿ ಬಟವಾಡಿ ರೈತರಿಗೆ ವಿತರಿಸಲಾಗುತ್ತಿದೆ. ರೈತರೂ ಸಹ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸಿದಾಗ ಮಾತ್ರ ಒಕ್ಕೂಟಕ್ಕೆ ಲಾಭವಾಗಲಿದೆ ಎಂದ ಅವರು ರೈತರು ಹೊರಗಡೆ ಸಾಲಸೋಲ ಮಾಡಿ ಹಸು ಖರೀದಿಸಿ ಹೈನುಗಾರಿಕೆ ಮಾಡಬೇಡಿ, ನಂತರ ಸಾಲದ ಸುಳಿಗೆ ಸಿಲುಕಿ ತೊಂದರೆ ಅನುಭವಿಸುವುದು ಬೇಡ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬ್ರಹ್ಮ ದೇವರ ಹಳ್ಳಿಯ ರೈತ ರಾಮಪ್ಪ ಮಾತನಾಡಿ ನಮ್ಮ ಮನೆಯಲ್ಲಿ ಸಾಕಿದ್ದ 4 ಹಸುಗಳು ಏಕಕಾಲಕ್ಕೆ ಖಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದವು. ಕುಟುಂಬಕ್ಕೆ ಆಧಾರವಾಗಿದ್ದ ಹಾಲು ನೀಡುವ ಹಸುಗಳು ಮೃತಪಟ್ಟ ಸಂದರ್ಭದಲ್ಲಿ ನಮ್ಮ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿತ್ತು. ಈ ಸಮಯದಲ್ಲಿ ತುಮುಲ್ ನ ರಾಸು ಮಿಮಾ ಯೋಜನೆ ನಮ್ಮ ನೆರವಿಗೆ ದಾವಿಸಿದ್ದು, ಈಗ 2.10 ಲಕ್ಷ ಪರಿಹಾರ ಪಡೆಯುತ್ತಿದ್ದೇನೆ. ತುಮುಲ್ ಒಕ್ಕೂಟದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಸು ವಿಮಾ ಯೋಜನೆಯನ್ನು ಜಾರಿಗೆ ತಂದ ಕೊಂಡವಾಡಿ ಚಂದ್ರಶೇಖರ್ ರವರು ಜಿಲ್ಲೆಯ ಲಕ್ಷಾಂತರ ರೈತರ ನೆರವಿಗೆ ದಾವಿಸಿದ್ದು, ಅವರ ಈ ಯೋಜನೆಯಿಂದ ಬಹುತೇಕ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುತ್ತಿವೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ 160 ವಿವಿಧ ಫಲಾನುಭವಿಗಳಿಗೆ 1.10 ಕೋಟಿ ರೂಗಳ ಫರಿಹಾರದ ಚೆಕ್ ವಿತರಣೆ ಮತ್ತು 65 ಫಲಾನುಭವಿಗಳಿಗೆ ಮೇವು ಕಟಾವು ಯಂತ್ರ ವಿತರಿಸಲಾಯಿತು.
ಬಾಕ್ಸ್ : ತುಮುಲ್ ಒಕ್ಕೂಟದಿಂದ ಹಮ್ಮಿಕೊಳ್ಳುವ ಅಭಿವೃದ್ದಿ ಕೆಲಸಗಳಿಗೆ ನನ್ನ ವಿರೋಧವಿಲ್ಲ. ಆದರೆ ಅಭಿವೃದ್ದಿ ನೆಪದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಹಣವನ್ನು ಬಳಸಿಕೊಳ್ಳುವುದಕ್ಕೆ ನನ್ನ ವಿರೋಧವಿದೆ. – ಕೊಂಡವಾಡಿ ಚಂದ್ರಶೇಖರ್, ತುಮುಲ್ ನಿರ್ದೇಶಕ,
ಕಾರ್ಯಕ್ರಮದಲ್ಲಿ ತುಮುಲ್ ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ಗಿರೀಶ್, ದರ್ಶನ್, ಮಾರೇಗೌಡ, ಸುದರ್ಶನ್, ಮಹಾಲಕ್ಮ್ಮೀ, ಡಾ. ದೀಕ್ಷಿತ್ ಇತರರಿದ್ದರು.