ಕೊರಟಗೆರೆ: ಮುರಿದು ಬಿದ್ದ 20 ವರ್ಷದ ಹಿಂದಿನ ಸೇತುವೆ 100 ಗ್ರಾಮಗಳಿಗೆ ಹೋಗುವ ರಸ್ತೆಯ ಸಂಪರ್ಕ ಕಟ್

ಸ್ಥಳಕ್ಕೆ ಶಾಸಕ ಡಾ.ಪರಮೇಶ್ವರ್ ಹಾಗೂ ಮಾಜಿ ಶಾಸಕ ಸುಧಾಕರ್ ಲಾಲ್ ಭೇಟಿ : ಪರಿಶೀಲನೆ

ಕೊರಟಗೆರೆ: ಹದಿನೈದು ದಿನಗಳ ಹಿಂದೆ ಬಿರುಕು ಬಿಟ್ಟ ಸೇತುವೆ ನಿನ್ನೆ ರಾತ್ರಿ ಸುರಿದ ಮಳೆಗೆ ಸಂಪೂರ್ಣ ಬಿದ್ದು ನೆಲಸಮವಾಗಿದೆ. ಗೊರವನಹಳ್ಳಿ-ತೀತಾ ಗ್ರಾಮಗಳ ಸಂಪರ್ಕ ಸೇತುವೆ ಕುಸಿದಿದ್ದು, ಇದರಿಂದಾಗಿ ಜನಸಾಮಾನ್ಯರ ಸಾರಿಗೆ ಸಂಪರ್ಕ ಕಡಿತಗೊಂಡಿದೆ.

ತಾಲೂಕಿನ ಗೊರವನಹಳ್ಳಿ-ತೀತಾ ಜಯಮಂಗಲಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದ ಸೇತುವೆ ಇದಾಗಿದ್ದು, ಜಯಮಂಗಲಿ ನದಿ ನೀರು ಹರಿದು ಹೋಗುತ್ತದೆ. ಹಳ್ಳಿ, ನಗರ ಸೇರಿದಂತೆ ಸುಮಾರು ೧೦೦ಕ್ಕೂ ಹೆಚ್ಚು ಗ್ರಾಮಗಳ ಕಡೆ ಸಂಪರ್ಕ ಹೊಂದಿದ್ದ ರಸ್ತೆ ಇಂದು ಸೇತುವೆ ಬಿದ್ದು ಕಡಿತಗೊಂಡಿದೆ.

ಜಲಾಶಯದ ಮೂಗಳತೆ ದೂರದಲ್ಲಿರುವ ಬ್ರಿಡ್ಜ್ ಈ ರೀತಿ ಕುಸಿತಗೊಂಡಿದ್ದು . ಜನಸಾಮಾನ್ಯರು ಹಾಗೂ ಪ್ರತಿಯೊಬ್ಬರು ಓಡಾಡಲು ಬೇರೆ ಮಾರ್ಗವನ್ನು ಹುಡುಕಬೇಕಿದೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಸೇತುವೆ ಇದಾಗಿದ್ದು, 80 ರಿಂದ 90 ಲಕ್ಷ ಹಣ ಬಿಡುಗಡೆಯಾಗಿದ್ದು ಅಧಿಕಾರಿಗಳು ಯಾವ ರೀತಿ ನಿರ್ಮಾಣ ಮಾಡಿದ್ದಾರೆ ಎಂಬುದು ಅವರ ಅದಕ್ಷತೆಗೆ ಇದೊಂದು ನಿದರ್ಶನವಾಗಿದೆ.

ಸೇತುವೆ ಕುಸಿದು ಬೀಳಲಿಕ್ಕೆ ಕಾರಣ ಏನು ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇಂಜಿನಿಯರ್‌ಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಓಡಾಡಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತೇವೆ. ಸೇತುವೆ ಬಿದ್ದಿರುವುದರಿಂದ ಅದನ್ನು ಹೊಸದಾಗಿ ನಿರ್ಮಾಣ ಮಾಡಬೇಕಾಗುತ್ತದೆ.
ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ.

ಈ ಬಾರಿ ನಮ್ಮ ತಾಲ್ಲೂಕಿನಲ್ಲಿ ಹೆಚ್ಚು ಮಳೆ ಆಗಿದೆ. ಇನ್ನೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಅನೇಕ ಕೆರೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೆರೆಗಳ ನಿರ್ವಹಣೆ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿಗಳಿಗೆ ನೀಡಿದ್ದಾರೆ. ಆದರೆ ಅವರು ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಗ್ರಾಮ ಪಂಚಾಯ್ತಿಗಳಲ್ಲಿ ಹಣದ ಕೊರತೆ ಇರುವುದರಿಂದ ಕೆರೆಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ.

  • ಡಾ.ಜಿ.ಪರಮೇಶ್ವರ್, ಶಾಸಕರು.

ತೀತಾ ಮತ್ತು ಗೊರವನಹಳ್ಳಿ ಮಧ್ಯೆ ಇರುವ ಸೇತುವೆ ಕುಸಿದು ಬಿದ್ದಿರುವುದರಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕೆಂದು ಒತ್ತಾಯಿಸುತ್ತೇನೆ.

  • ಸುಧಾಕರ್ ಲಾಲ್, ಮಾಜಿ ಶಾಸಕರು.

ಜಯಮಂಗಲಿ ನದಿಗೆ ಅಡ್ಡಲಾಗಿ ಸುಮಾರು 20ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸೇತುವೆಯು ಇಂದು ಬೆಳಿಗ್ಗೆ ಮುರಿದು ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಸಾರ್ವಜನಿಕರು ಓಡಾಡಲು ಪರ್ಯಾಯ ವ್ಯವಸ್ಥೆಯನ್ನು ಕಲ್ಫಿಸಲಾಗಿದೆ. ಲೋಡ್ (ಬಾರ) ಇರುವ ವಾಹನಗಳನ್ನು ನಿಷೇಧಿಸಲಾಗಿದೆ. ಸೇತುವೆಯನ್ನು ಆದಷ್ಟು ಬೇಗ ಪುನರ್ ನಿರ್ಮಿಸಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಸೇತುವೆ ಮುರಿದು ಬಿದ್ದಾಗ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ.

  • ಮಲ್ಲಿಕಾರ್ಜುನಯ್ಯ, ಎ.ಇ.ಇ. ಪಿಡಬ್ಲ್ಯುಡಿ ಇಲಾಖೆ.

ಈ ಸೇತುವೆಯನ್ನು ಸುಮಾರು 15-20 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಇಷ್ಟು ವರ್ಷಗಳ ಕಾಲ ನೀರು ಹರಿದಿಲ್ಲ. ಕಳೆದ 2 ವರ್ಷಗಳಿಂದ ಮಾತ್ರ ಸೇತುವೆ ಕೆಳಗಡೆ ನೀರು ಹರಿತಾ ಇದೆ. ಇವತ್ತಿನ ಸ್ಥಿತಿ ನೋಡಿದರೆ ಕಳಪೆ ಕಾಮಗಾರಿಯೇ ಕಾರಣ ಎಂಬುದು ಗೊತ್ತಾಗುತ್ತದೆ. ವಿವಿಧ ಭಾಗಗಳಿಂದ ಗೊರವನಹಳ್ಳಿಗೆ ಬರುವ ಸಾರ್ವಜನಿಕರಿಗೆ ಅನಾನುಕೂಲವಾಗಿದೆ.
ಅದರಲ್ಲೂ ಶಾಲಾ ಮಕ್ಕಳಿಗೆ ತುಂಬಾ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ದುರಸ್ಥಿಗೊಳಿಸಬೇಕೆಂದು ಎಂದು ಮನವಿ ಮಾಡಿಕೊಳ್ಳುತ್ತೇನೆ.

  • ರಂಗರಾಜು, ಸ್ಥಳೀಯ.

ಸೇತುವೆ ನಿರ್ಮಾಣ ಮಾಡುವಾಗ ಕಳಪೆ ಗುಣಮಟ್ಟದ ವಸ್ತುಗಳ ಬಳಕೆಯೇ ಕಾರಣ. ತೀತಾ ಜಲಾಶಯ ಕೋಡಿ ಬಿದ್ದಿದ್ದು ಇದರಿಂದಾಗಿ ಈಗ ಸೇತುವೆ ಮುರಿದು ಬಿದ್ದಿದೆ. ಆದಷ್ಟು ಬೇಗ ಅಧಿಕಾರಿಗಳು ನಿರ್ಮಾಣ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

  • ಕಾಮರಾಜು, ಸ್ಥಳೀಯ.

ಇನ್ನು ಘಟನಾ ಸ್ಥಳಕ್ಕೆ ಹಾಲಿ ಶಾಸಕರು ಮಾಜಿ ಶಾಸಕರು ಹಾಗೂತಾಲ್ಲೂಕು ದಂಡಾಧಿಕಾರಿ ನಾಹೀದ ಜಮ್ ಜಮ್ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸ್ಥಳಿಯ ಗ್ರಾಮಸ್ಥರು ಸ್ಥಳದಲ್ಲಿದ್ದರು ..

ವರದಿ : ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!