ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸುದ್ದಿಮನೆಯಲ್ಲಿ ಕೆಲಸ ಮಾಡಿದ ಅತ್ಯಂತ ಹಿರಿಯ ಪತ್ರಕರ್ತರನ್ನು ಅವರ ಮನೆಯಂಗಳದಲ್ಲಿ ಮನದುಂಬಿ ಗೌರವಿಸುವ ಮೂಲಕ ಸಂಘದ ಅಧ್ಯಕ್ಷರಾದ ಚಿ.ನಿ. ಪುರುಷೋತ್ತಮ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.
ಸೊಗಡು ದಿನಪತ್ರಿಕೆಯ ಸಂಪಾದಕರಾದ ಎಸ್.ಶಿವಣ್ಣ ಅವರ ಮನೆಗೆ ತೆರಳಿ ಉಪಸಂಪಾದಕರಾದ ನಾಗರತ್ನ ಎಸ್.ಶಿವಣ್ಣ ಅವರನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಜಿಲ್ಲಾ ಘಟಕದ ಪರವಾಗಿ ಫಲಕ, ಶಾಲು, ಹಾರ ಹಾಕಿ ಸನ್ಮಾನಿಸಿ ಗೌರವಿಸಿದರು.








ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ತಗಡೂರು ಅವರು, ಸ್ವಾತಂತ್ರ್ಯದ ೭೫ ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸುದ್ದಿ ಮನೆಯ ಹಿರಿಯರನ್ನು ಗೌರವಿಸುವ ಕಾರ್ಯ ಇಡೀ ರಾಜ್ಯಾದ್ಯಂತ ಕೆಯುಡಬ್ಲ್ಯೂಜೆ ವತಿಯಿಂದ ಮಾಡಲಾಗುತ್ತಿದೆ ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಹಿರಿಯರನ್ನು ಭೇಟಿ ಮಾಡುವ, ಅವರ ಅನುಭವಗಳಿಗೆ ಕಿವಿಯಾಗಲು ಅದನ್ನು ಇಂದಿನ ಪತ್ರಿಕೋದ್ಯಮದಲ್ಲಿ ಅಳವಡಿಸಿಕೊಳ್ಳಲು ’ಮನೆಯಂಗಳದಲ್ಲಿ ಮನದುಂಬಿ ಗೌರವ’ ಎನ್ನುವ ಈ ಯೋಜನೆ ರೂಪಿಸಲಾಯಿತು ಎಂದು ಹೇಳಿದರು.


ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಸೂಚನೆಯ ಮೇರೆಗೆ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಅಂಗವಾಗಿ ಸುದ್ದಿಮನೆಯಲ್ಲಿ ಕೆಲಸ ಮಾಡಿದ ಹಿರಿಯ ಪತ್ರಕರ್ತರನ್ನು ಈ ದಿನ ಗೌರವಿಸಲಾಯಿತು ಎಂದರು.
ನಗರದ ೧೪ ಹಿರಿಯ ಪತ್ರಕರ್ತರನ್ನು ಸಂಘದಿಂದ ಗೌರವಿಸಿರುವುದು ನಮ್ಮೆಲ್ಲರ ಹೆಮ್ಮೆ, ಈ ಸುಂದರ ಕ್ಷಣಗಳು ಅವಿಸ್ಮರಣೀಯ ಎಂದು ಹೇಳಿದರು.
ಇಂತಹ ಹಿರಿಯರಿಂದಾಗಿ ನಮ್ಮ ಪತ್ರಿಕೋದ್ಯಮಕ್ಕೆ ದೊಡ್ಡ ಕೊಡುಗೆ ಸಾಧ್ಯವಾಯಿತು. ಪತ್ರಕರ್ತ ಹೇಗಿರಬೇಕು ಎನ್ನುವುದಕ್ಕೆ ಹಿರಿಯ ಪತ್ರಕರ್ತರೇ ನಮಗೆ ಮಾದರಿ. ಹಿರಿಯರ ಆದರ್ಶಗಳನ್ನು ಇಂದಿನ ಯುವ ಪತ್ರಕರ್ತರು ರೂಡಿಸಿಕೊಂಡರೇ ವೃತ್ತಿ ಘನತೆ ಹೆಚ್ಚಿಸಲು ಸಾಧ್ಯ ಎಂದರು.


ಇದೇ ಸಂದರ್ಭದಲಿ ಹಿರಿಯ ಪತ್ರಕರ್ತರಾದ ಅಮರ ಸಂದೇಶ ದಿನ ಪತ್ರಿಕೆಯ ಸಂಪಾದಕರಾದ ತೋ.ಗ. ಅಡವೀಶಪ್ಪ, ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ, ಸತ್ಯದರ್ಶಿನಿ ದಿನಪತ್ರಿಕೆಯ ಉಪಸಂಪಾದಕರಾದ ಹೆಚ್.ಎನ್. ಮಲ್ಲೇಶ್, ಗಂಗಾವಾಹಿನಿ ಪತ್ರಿಕೆಯ ಸಂಪಾದಕರಾದ ಆರ್. ಕಾಮರಾಜು, ಕೋಲಾರವಾಣಿ ಕನ್ನಡ ದಿನಪತ್ರಿಕೆಯ ಜಿಲ್ಲಾ ವರದಿಗಾರ ರವೀಂದ್ರನಾಥ ಹೊನ್ನೂರು, ಅಮೃತವಾಣಿ ಪತ್ರಿಕೆಯ ಉಪಸಂಪಾದಕರಾದ ಕಮಲ ಗಂಗಹನುಮಯ್ಯ, ಸೊಗಡು ದಿನಪತ್ರಿಕೆಯ ಉಪಸಂಪಾದಕರಾದ ನಾಗರತ್ನ ಎಸ್. ಶಿವಣ್ಣ, ಹಿರಿಯ ವರದಿಗಾರರಾದ ಉರ್ದು ಪತ್ರಿಕೆಯ ಆರಿಫ್ ಮತೀನ್, ಹೊಸದಿಗಂತ ಪತ್ರಿಕೆಯ ಜಿಲ್ಲಾ ಹಿರಿಯ ವರದಿಗಾರರಾದ ಕೆ.ಬಿ. ಚಂದ್ರಮೌಳಿ, ಹಿರಿಯ ಛಾಯಾಗ್ರಾಹಕರು ಹಾಗೂ ಪತ್ರಕರ್ತರಾದ ಟಿ.ಆರ್. ನಾಗರಾಜು (ಡಿಡಿ ನಾಗಣ್ಣ), ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಟಿ.ಎಸ್. ತ್ರಿಯಂಬಕ, ಟುಮಕಿ ದಿನಪತ್ರಿಕೆ ಸಂಪಾದಕರಾದ ಟಿ.ಎಸ್.ಗಟ್ಟಿ, ಹಿರಿಯ ಪತ್ರಕರ್ತರಾದ ಮಣ್ಣೆರಾಜು, ಎಸ್.ಪಿ.ಪುರುಷೋತ್ತಮ್ (ತಮ್ಸ್) ಅವರನ್ನು ಅವರ ಮನೆಯಂಗಳದಲ್ಲಿ ಆತ್ಮೀಯವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದಿಂದ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಎಲ್ಲಾ ಹಿರಿಯ ಪತ್ರಕರ್ತರು ತಮ್ಮ ಮನದಂಗಳದ ಮಾತನ್ನು ಹಂಚಿಕೊಂಡರು.

ಈ ವೇಳೆ ಕೆಯುಡಬ್ಲ್ಯೂಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ಉಪಾಧ್ಯಕ್ಷರಾದ ಎಲ್.ಚಿಕ್ಕೀರಪ್ಪ. ತಿಪಟೂರು ಕೃಷ್ಣ, ಕಾರ್ಯದರ್ಶಿ ಸತೀಶ್ ಹಾರೋಗೆರೆ, ರಾಷ್ಟ್ರೀಯ ಮಂಡಳಿ ಸದಸ್ಯರಾದ ಅನುಶಾಂತರಾಜು, ಸುದ್ದಿಬಿಂಬ ಸತೀಶ್, ಜಿಲ್ಲಾ ನಿರ್ದೇಶಕರಾದ ಟಿ.ಎಸ್.ಕೃಷ್ಣಮೂರ್ತಿ, ಪಿ.ಎಸ್.ಮಲ್ಲಿಕಾರ್ಜುನಸ್ವಾಮಿ, , ಎಸ್.ಡಿ.ಚಿಕ್ಕಣ್ಣ, ಜಯಣ್ಣ, ಮಂಜುನಾಥ್ ತಾಳಮಕ್ಕಿ, ಹೆಚ್.ಎಸ್.ಪರಮೇಶ್, ಯಶಸ್ ಕೆ.ಪದ್ಮನಾಭ್, ಪತ್ರಕರ್ತ ಎಸ್.ಹರೀಶ್ ಆಚಾರ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
