ಹಬ್ಬದ ಸಂಭ್ರಮ ಕಸಿದ ಮಳೆ : ನಿಲ್ಲೋ ನಿಲ್ಲೋ ಮಳೆರಾಯ ಎನ್ನುತ್ತಿರುವ ಜನತೆ

ಮಧುಗಿರಿ : ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ತಾಲೂಕು ಇದೇ ಮೊದಲ ಬಾರಿಗೆ ಅತೀವೃಷ್ಟಿಯಿಂದ ತೊಂದರೆ ಅನುಭವಿಸುವಂತಾಗಿದ್ದು,  ಇಷ್ಟು ದಿನ ಬಾರೋ ಬಾರೋ ಮಳೆರಾಯ ಎಂದು ಪ್ರಾರ್ಥನೆ ಮಾಡುತ್ತಿದ್ದ ಜನತೆ ಈಗ ನಿಲ್ಲೂ ನಿಲ್ಲೋ ಮಳೆರಾಯ ಎಂದು ಕೈ ಮುಗಿಯುವಂತಾಗಿದೆ. 

ಕಳೆದ ಒಂದು ತಿಂಗಳಿನಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯು ಸೋಮವಾರ ರಾತ್ರಿಯೂ ರೌದ್ರ ನರ್ತನ ಮುಂದುವರೆದಿದ್ದು, ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಬಹುತೇಕ ಎಲ್ಲಾ ಕೆರೆಗಳು ತುಂಬಿ ಹರಿದಿದ್ದರೆ,  ಬೆಲ್ಲದ ಮಡುಗು ಗ್ರಾಮದ ಕೆರೆಯ ಕೋಡಿ ಹರಿಯುವ ಸ್ಥಳವು ಒಡೆದು, ಕೆರೆಯ ನೀರೆಲ್ಲ ಹರಿದು ಹೋಗಿದ್ದು, ಸ್ಥಳಕ್ಕೆ ಶಾಸಕ ಎಂ.ವಿ. ವೀರಭದ್ರಯ್ಯ ಮತ್ತು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮತ್ತು ಅಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚೋಳೆನಹಳ್ಳಿ ಕೆರೆಯ ಏರಿ ಮತ್ತು ಬೈಪಾಸ್ ಸಮೀಪದ ರಸ್ತೆಯಲ್ಲಿ ಹರಿಯುತ್ತಿದ್ದ ಪ್ರದೇಶಗಳನ್ನೂ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ. 

ಮತ್ತೆ ಜಲಾವೃತಗೊಂಡ ಗ್ರಾಮಗಳು :  ಸತತ ಮಳೆಗೆ  25 ದಿನಗಳ ಹಿಂದಷ್ಟೇ ಜಲಾವೃತಗೊಂಡು ತೊಂದರೆ ಅನುಭವಿಸಿದ್ದ ತಾಲೂಕಿನ ಜಯಂಮಗಲಿ ನದಿ ಪ್ರದೇಶದ ಗ್ರಾಮಗಳಾದ  ಚೆನ್ನಸಾಗರ, ಇಮ್ಮಡಗೊಂಡನಹಳ್ಳಿ, ಕೋಡಗದಾಲ, ಪುರವರ ಹೋಬಳಿಯ ಗ್ರಾಮಗಳು  ಸೋಮವಾರ ರಾತ್ರಿ ಸುರಿದ ಮಳೆಗೆ  ಮತ್ತೆ ಜಲ ದಿಗ್ಬಂದನಕ್ಕೆ ಒಳಗಾಗಿದ್ದು, ಸ್ಥಳಕ್ಕೆ  ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಸುರೇಶಾಚಾರ್ ಮತ್ತು ಡಿವೈಎಸ್.ಪಿ ಕೆ.ಎಸ್. ವೆಂಕಟೇಶ್ ನಾಯ್ಡು ನೇತೃತ್ವದ ತಂಡ ಗ್ರಾಮಸ್ಥರ  ನೆರವಿಗೆ ದಾವಿಸಿದ್ದು, ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, 

ಇಮ್ಮಡಗೊಂಡನಹಳ್ಳಿಯಲ್ಲಿ ಅಗ್ನಿಶಾಮಕ ದಳದವರು ಬೊಟಿಂಗ್ ವ್ಯವಸ್ಥೆ ಯಲ್ಲಿ ಗ್ರಾಮಸ್ಥರನ್ನು ರಕ್ಷಿಸಿದ್ದಾರೆ.

ಜಲಾವೃತಗೊಂಡ ವಸತಿ ಶಾಲೆ : ಮಧುಗಿರಿ ತಾಲ್ಲೂಕಿನ ಸೋದೇನಳ್ಳಿಯ ಡಾ. ಅಂಬೇಡ್ಕರ್ ವಸತಿ ಶಾಲೆಯು ಸಂಪೂರ್ಣ ಜಲಾವೃತಗೊಂಡಿದ್ದು,  ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ವಸತಿ  ಗುರುವಾರದವರೆಗೂ ರಜೆ ನೀಡಲಾಗಿದೆ.

ತಾಲ್ಲೂಕಿನ ಬಿಟ್ಟನಕುರಿಕೆ ,ಬಿಜವಾರ,  ಕೆರೆ ಏರಿಗಳು ಶಿಥಿಲಾವಸ್ಥೆ ತಲುಪುತ್ತಿದ್ದು ಯಾವುದೇ ಸಂದರ್ಭದಲ್ಲಿ ಒಡೆಯುವ ಅಂತ ಇದೆ ಎಂದು ಅಲ್ಲಿನ ರೈತರು ದೂರಿದ್ದಾರೆ. 

ಇನ್ನು ಮಧುಗಿರಿ ತಾಲ್ಲೂಕಿನ ಹೊಸಕೆರೆ -ಬಸವನಹಳ್ಳಿ  ಸಂಪರ್ಕ ರಸ್ತೆ ಕಡಿತಗೊಂಡಿದ್ದು,  ಗ್ರಾಮಸ್ಥರು ತೊಂದರೆ ಅನುಭವಿಸಿದ್ದಾರೆ.‌ ಧಾರಕಾರ ಮಳೆಗೆ ಬಹುತೇಕ ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು, ಮಳೆಗೆ ರಸ್ತೆಗಳು ಕೊಚ್ಚಿ ಹೋಗಿವೆ. 

ಪ್ರಾಣಾಪಾಯದಲ್ಲಿದ್ದ ಕುಟುಂಬದ ರಕ್ಷಣೆ : ಧಾರಾಕಾರ ಮಳೆಯಿಂದ ತಾಲೂಕಿನ  ಚಂದ್ರಗಿರಿ ಕೆರೆ ಕೋಡಿ ಬಿದ್ದಿದ್ದು, ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ ಮಂಜುನಾಥ್ ರವರ ಮನೆಗೆ ಕೆರೆ ಕೋಡಿಯಿಂದ ನೀರು ನುಗ್ಗಿದ್ದು, ಮೂವರು ಮಕ್ಕಳು, ಗಂಡ, ಹೆಂಡತಿ ಸೇರಿ ಐವರು ನೀರಿನಲ್ಲಿ ಸಿಲುಕಿ, 

ಮನೆಯಿಂದ ಹೊರಬರಲಾರದೇ ಸಂಕಷ್ಟಕ್ಕೆ ಸಿಲುಕಿದ್ದರು.  ಇದನ್ನು ಗಮನಿಸಿದ ಗ್ರಾಮದ ಯುವಕರ ತಂಡ

ಕುಟುಂಬ ಸದಸ್ಯರನ್ನು ಮತ್ತು  ನೀರಿನಲ್ಲಿ ಸಿಲುಕಿರುವ 20 ಕುರಿ, ನಾಲ್ಕು ಹಸುಗಳನ್ನು

ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.

ಮುಖ್ಯ ರಸ್ತೆಗೆ ಹರಿದ ಕೆರೆಯ ನೀರು : ಪಟ್ಟಣದ ಪಾವಗಡ ರಸ್ತೆಯಲ್ಲಿರುವ ಬಸವನಹಳ್ಳಿ ಬಳಿಯ ದೊಡ್ಡ ಸೇತುವೆಯಲ್ಲಿ ಹರಿಯುತ್ತಿದ್ದ ಸಿದ್ದಾಪುರ ಕೆರೆಯ ನೀರು ಪಕ್ಕದ ಹೊಲಗಳಿಗೆಲ್ಲ  ನುಗ್ಗಿದ್ದು, ಸಂಪೂರ್ಣ ಜಲಾವೃತಗೊಂಡಿದ್ದು, ಈ ನೀರು ಮುಖ್ಯ ರಸ್ತೆಗೆ ನುಗ್ಗಿದ್ದು, ವಾಹನ ಸವಾರರು ಬಹಳಷ್ಟು ತೊಂದರೆ ಅನುಭವಿಸುವಂತಾಯಿತು.

ಇನ್ನು ತಾಲೂಕಿನ ದೊಡ್ಡೇರಿ ಹೋಬಳಿಯ ಬಣಗಾರ ಹಳ್ಳಿ ಮತ್ತು  ಪೆಮ್ಮನಹಳ್ಳಿ ಮಾರ್ಗದಲ್ಲಿ ಸೇತುವೆ ಕುಸಿದು ಕಾರಣ ಸುಮಾರು 40 ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ ಎರಡು ಕಡೆಯಿಂದಲೂ ಸಂಚಾರ ಸ್ಥಗಿತಗೊಂಡಿದ್ದು,   ಪೆಮ್ಮನಹಳ್ಳಿಯಲ್ಲಿ ಇರುವ ಮಕ್ಕಳು ನಾಲ್ಕು ದಿನದಿಂದ ಶಾಲೆಗೆ ಬರದೇ ಸೇತುವೆ ಬಳಿ ಬಂದು ಮನೆಗೆ ವಾಪಸ್ ಹೋಗುತ್ತಿದ್ದು,  ಗ್ರಾಮದ ಹಿರಿಯರು ಚಿಕಿತ್ಸೆಗೆ  ಆಸ್ಪತ್ರೆಗೂ ಹೋಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಧುಗಿರಿ ಪಟ್ಟಣವನ್ನು ಹಾದುಹೋಗಿರುವ ಬೈಪಾಸ್ ರಸ್ತೆ ಬಹುತೇಕ ಕಡೆ ಜಲಾವೃತಗೊಂಡಿದ್ದು ಕರಡಿ ಗುಡ್ಡದ ಬಳಿ ಗುಡ್ಡ ಕುಸಿದ ಪರಿಣಾಮ  ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಇನ್ನೂ ಬಿಜವರ ಕೆರೆಯ ಹಿನ್ನೀರು ಎರಡು ಸಾವಿರ ಕ್ಯೂಸೆಕ್ ನಷ್ಟು ನೀರು ಚೋಳೆನಹಳ್ಳಿ ಮತ್ತು ಸಿದ್ದಾಪುರ ಕೆರೆಗಳ ಹಳ್ಳದಿಂದ ನೀರು ಬರುತ್ತಿರುವುದರಿಂದ ಕಂಭತ್ತನಹಳ್ಳಿ ಮತ್ತು ಭಕ್ತರಹಳ್ಳಿ ನಡುವಿನ ರಸ್ತೆ ಹಾಗೂ ತೋಟಗಳು ,ವಿದ್ಯುತ್  ಕಂಬಗಳು ಸಂಪೂರ್ಣ ಜಲವೃತ ಗೊಂಡಿದೆ.ಸಿದ್ದಾಪುರ-ಮರಿತಿಮ್ಮನಹಳ್ಳಿ ಸಂಪರ್ಕ ರಸ್ತೆ ಹಿಪ್ಪೆತೋಪಿನ ಬಳಿ ಕೊಚ್ಚಿ ಹೊಗಿದೆ.ಮೂವತ್ತು ವರ್ಷಗಳ ನಂತರ ರಂಟವಳಲು ಕೆರೆ ನೀರು ಕೊಡಿ ಹರಿದಿದೆ. ದೊಡ್ಡೇರಿ ಕೆರೆ ಕೊಡಿಹರಿದಿದೆ. ಬಿಟ್ಟನಕುರಿಕೆ-ದಬ್ಬೆಘಟ್ಟ ರಸ್ತೆ ಸಂಪರ್ಕ ಕಡಿತವಾಗಿದೆ.ದೊಡ್ಡಹೊಸಹಳ್ಳಿ ಕೆರೆ ಕೊಡಿಯಿಂದಾಗಿ ಗಂಕಾರನಹಳ್ಳಿ ಜಲವೃತಗೊಂಡಿದೆ.

ಏಕಶಿಲಾ ಬೆಟ್ಟದಲ್ಲಿನ ಕೋಟೆ ಕುಸಿತ:- ವಿಶ್ವವಿಖ್ಯಾತ ಏಕಶಿಲಾ ಬೆಟ್ಟದ ತಪ್ಪಲಿನಲ್ಲಿರುವ ಮಾರನವಮಿ ದಿಬ್ಬದ ನಂತರ ಸಿಗುವ ಬೆಟ್ಟಕ್ಕೆ ಕಳಸಾಪ್ರಾಯದಂತಿದ್ದ ಕೋಟೆ ಮಂಗಳವಾರ ಮಧ್ಯಾಹ್ನ ಕುಸಿದಿದೆ.

ಸೋಮವಾರದ ಮಳೆಯ ವಿವರ: 

 ಮಧುಗಿರಿ -123ಮಿ.ಮೀ

 ಬಡವನಹಳ್ಳಿ -20ಮಿ.ಮೀ

 ಮಿಡಿಗೇಶಿ-40.5ಮಿ.ಮೀ

 ಬ್ಯಾಲ್ಯ-99ಮಿ.ಮೀ

 ಐಡಿ ಹಳ್ಳಿ-62.2ಮಿ.ಮೀ

 ಕೊಡಿಗೇನಹಳ್ಳಿ-26.2ಮಿ.ಮೀ ಮಳೆಯಾಗಿದೆ.

ಮಳೆಯಿಂದ ಹಾನಿಗೊಳಗಾದ ಸ್ಥಳಗಳನ್ನು ವೀಕ್ಷಿಸಿದ ನಂತರ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ ಭಾರೀ ಮಳೆಯಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿವೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ತರಕಾರಿ ಬೆಳೆಗಳು,  ತೋಟಗಾರಿಕಾ ಬೆಳೆಗಳು, ಹಾನಿಯಾಗಿವೆ. ಮನೆಗಳಿಗೂ ನೀರು ನುಗ್ಗಿ ಜನರಿಗೆ ತೊಂದರೆಯಾಗಿದೆ. ಕೂಡಲೇ ಸರ್ಕಾರ ರೈತರಿಗೆ ತ್ವರಿತವಾಗಿ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಎಡಿಸಿ ಚನ್ನಬಸಪ್ಪ, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ್, ತಹಸೀಲ್ದಾರ್ ಸುರೇಶ್ ಆಚಾರ್, ಡಿವೈಎಸ್ಪಿ ವೆಂಕಟೇಶ್ ನಾಯ್ಡು, ಎಇಇ ಮಂಜುನಾಥ್,  ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಹಾಗೂ ಕಂದಾಯ ಇಲಾಖೆ ಮತ್ತು ಗ್ರಾ.ಪಂ ಅಧಿಕಾರಿಗಳು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!