ಮುಂದಿನ ಮೂರು ದಿನ ಭಾರಿ ಮಳೆ: ಯೆಲ್ಲೋ ಅಲರ್ಟ್ ಎಚ್ಚರಿಕೆ

!

ಬೆಂಗಳೂರು: ಕರ್ನಾಟಕದ ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಮುಂದಿನ ಮೂರು ದಿನ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ ಐದು ದಿನವರೆಗೆ ಭಾರಿ ಪ್ರಮಾಣದಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.

ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆಗಳು, ಅವುಗಳ ತೀವ್ರತೆ ಹೆಚ್ಚಾಗಿರುವ ಕಾರಣಕ್ಕೆ ರಾಜ್ಯ ಅನೇಕ ಕಡೆಗಳಲ್ಲಿ ಮಳೆ ಮುಂದುವರಿದಿದೆ. ಕರ್ನಾಟಕದ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಬೆಳಗಾವಿ ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಭಾರಿ ಮಳೆ ಸುರಿಯಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಸೆ.3ರವರೆಗೆ ‘ಯೆಲ್ಲೋ ಅಲರ್ಟ್’ ಕೊಡಲಾಗಿದೆ.

ಇನ್ನೂ ದಕ್ಷಿಣ ಒಳನಾಡಿನಲ್ಲಿ ಈ ಸಲ ಹೆಚ್ಚು ಮಳೆ ಆಗುವ ನಿರೀಕ್ಷೆ ಇದೆ. ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ಹೆದ್ದಾರಿ ಜಲಾವೃತ, ಕೆರೆ ಕೋಡಿ ಒಡೆದು ನೀರು ಗ್ರಾಮಗಳನ್ನು ಆವರಿಸಿರುವುದು ಸೇರಿದಂತೆ ಹಿಂದೆಂದೂ ಕಾಣದಂಥ ಅವಘಡಗಳಿಗೆ ಈ ವರ್ಷ ಸಾಕ್ಷಿಯಾಗಿದೆ. ಮಳೆ ಮುಂದುವರಿದರೆ ಈ ಸಮಸ್ಯೆಗಳು ಸಹ ಮುಂದುವರಿಯಲಿವೆ. ಜನರು ಆತಂಕಗೊಂಡಿದ್ದಾರೆ.

ದಕ್ಷಿಣ ಒಳನಾಡಿನಲ್ಲಿ ಎಲ್ಲಿ ಮಳೆ ಜಾಸ್ತಿ?
ಮಲೆನಾಡು ಒಳಗೊಂಡಿರುವ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳ ಪೈಕಿ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿಯಿಂದ ಅತೀ ಭಾರಿ ಮಳೆ ಆಗುವ ಲಕ್ಷಣಗಳು ಇವೆ. ಇಲ್ಲಿ ಸುಮಾರು 20ಸೆಂಟಿ ಮೀಟರ್‌ವರೆಗೆ ಮಳೆ ಆಗುವ ಸಾಧ್ಯತೆ ಇರುವ ಕಾರಣಕ್ಕೆ ಈ ಮೂರು ಜಿಲ್ಲೆಗಳಿಗೆ ಸೆ.2ರಂದು ‘ಆರೆಂಜ್‌ ಅಲರ್ಟ್’ ಕೋಡಲಾಗಿದೆ. ಉಳಿದ ದಿನಗಳಲ್ಲಿ ಇದೇ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ.

ಯೆಲ್ಲೋ ಅಲರ್ಟ್ ಎಚ್ಚರಿಕೆ
ಉಳಿದಂತೆ ಈ ಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ದಾವಣಗೆರೆ, ಮಸೂರು, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ದಿನ ಬಿಟ್ಟು ದಿನ ಭಾರಿ ಮಳೆ ಬರಲಿದೆ. ಹೀಗಾಗಿ ಮುಂದಿನ ಐದುನ ಇಷ್ಟು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಕೇಂದ್ರ ಬೆಂಗಳೂರಿನ ವಿಜ್ಞಾನಿ ಹಾಗೂ ಹವಾಮಾನ ತಜ್ಞ ಪ್ರಸಾದ್ ತಿಳಿಸಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!