ಚಿತ್ರದುರ್ಗ: ಪೋಕ್ಸ್ ಕೇಸ್ ಪ್ರಕರಣದಲ್ಲಿ ಕೊನೆಗೂ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಅರೆಸ್ಟ್ ಆಗಿದ್ದಾರೆ. ಕೇಸ್ ದಾಖಲಾಗಿ 144 ಗಂಟೆಗಳ ಬಳಿಕ ಶ್ರೀಗಳನ್ನ ಬಂಧಿಸಲಾಗಿದೆ.
ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಆಗಸ್ಟ್ 26ರಂದು ಪ್ರಕರಣ ದಾಖಲಾಗಿತ್ತು. ಚಿತ್ರದುರ್ಗದ ಮುರುಘಾಮಠದ ಅಧೀನದಲ್ಲೇ ಬರುವ ಹಾಸ್ಟೆಲ್ ವಿದ್ಯಾರ್ಥಿನಿಯರಿಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿದ್ದರು.
ಪೊಕ್ಟೋದಂತಹ ಗಂಭೀರ ಪ್ರಕರಣ ದಾಖಲಾಗಿದ್ದರೂ ಸಹ ಪ್ರಮುಖ ಆರೋಪಿಯಾಗಿದ್ದ ಮುರುಘಾ ಶರಣರನ್ನ ಬಂಧನ ಮಾಡುವಲ್ಲಿ ಪೊಲೀಸರು ವಿಳಂಬ ನೀತಿ ಅನುಸರಿಸಿದ್ದೂ ಆಕ್ರೋಶಕ್ಕೆ ಕಾರಣವಾಗಿತ್ತು. ಇದೆಲ್ಲದ್ರ ಮಧ್ಯೆ ನಿನ್ನೆ ರಾತ್ರಿ 10.10ರ ಸುಮಾರಿಗೆ ಮುರುಘಾ ಶರಣರು ಸ್ವತಃ ಶರಣಾಗಿದ್ದಾರೆ. ಬಳಿಕ ಶ್ರೀಗಳನ್ನ ಅರೆಸ್ಟ್‌ಮಾಡಲಾಗಿದೆ. ನಿನ್ನೆ ರಾತ್ರಿ ವೈದ್ಯಕೀಯ ಪರೀಕ್ಷೆಯ ಬಳಿಕ ಶ್ರೀಗಳನ್ನ ಮಧ್ಯರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಜಡ್ಜ್ ಶ್ರೀಗಳನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಸದ್ಯ ಶ್ರೀಗಳು ಚಿತ್ರದುರ್ಗ ಕೇಂದ್ರ ಕಾರಾಗೃಹದಲ್ಲಿದ್ದಾರೆ.