ಗುಬ್ಬಿ: ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಯಲ್ಲಿ ಬಡ ರೈತರ ಮಕ್ಕಳೇ ಅಧ್ಯಯನ ಮಾಡುತ್ತಾರೆ. ಈ ಪೈಕಿ ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕೆ ಸರ್ಕಾರಿ ಶಾಲೆ ಅಡಿಗಲ್ಲು ಆಗುತ್ತಿರುವ ನಿದರ್ಶನ ಸಾಕಷ್ಟಿದೆ ಎಂದು ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು ಹೆಣ್ಣು ಕಲಿತರೆ ಶಾಲೆ ತೆರೆದಂತೆ ಎನ್ನುವ ಮಾತು ನಿಜ ಮಾಡುವ ನಿಟ್ಟಿನಲ್ಲಿ ಬಾಲಕಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಇವರ ಆಸಕ್ತಿಗೆ ಅನುಸಾರ ಪ್ರೋತ್ಸಾಹ ನೀಡುವ ಕೆಲಸ ಪೋಷಕರು ಮಾಡಬೇಕು ಎಂದರು.
ಬಡತನ ಮೆಟ್ಟಿ ನಿಲ್ಲುವ ಕೆಲಸ ಇಂದಿನ ಹೆಣ್ಣು ಮಕ್ಕಳು ಮಾಡಲು ಮುಂದಾಗಿದ್ದಾರೆ. ಶಿಕ್ಷಣದ ಮಹತ್ವ ಅರಿತು ದೇಶದ ಉನ್ನತ ಸ್ಥಾನ ಅಲಂಕರಿಸುವ ಕೆಲಸ ಈಚೆಗೆ ನಡೆದಿದೆ. ಪಟ್ಟಣದ ಹೆಣ್ಣು ಮಕ್ಕಳಿಗೆ ಕಟ್ಟಿರುವ ಈ ಸರ್ಕಾರಿ ಶಾಲೆಗೆ ಬಹುತೇಕ ಹಳ್ಳಿಗಾಡಿನ ಮಕ್ಕಳು ಬರುತ್ತಿದ್ದಾರೆ. ಉತ್ತಮ ಕನಸು ಕಟ್ಟುವ ಕೆಲಸ ಶಿಕ್ಷಕರ ವೃಂದ ಮಾಡಬೇಕು ಎಂದ ಅವರು ಸರ್ಕಾರ ನೀಡುವ ಸಕಲ ಸವಲತ್ತು ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಶಾಲೆಗೆ ಅಗತ್ಯವಿರುವ ಬಯಲು ವೇದಿಕೆಗೆ ಛಾವಣಿ ನಿರ್ಮಾಣ ವೈಯಕ್ತಿಕವಾಗಿ ಮಾಡಿಸುವ ಭರವಸೆ ನೀಡಿದರು.
ಡಯಟ್ ಉಪನ್ಯಾಸಕಿ ಮಂಗಳಗೌರಮ್ಮ ಮಾತನಾಡಿ ಸಂಸ್ಕಾರಯುತ ಶಿಕ್ಷಣ ನೀಡುವ ಕೆಲ ಶಾಲೆಯಲ್ಲಿ ಈ ಸರ್ಕಾರಿ ಶಾಲೆ ಒಂದಾಗಿರುವುದು ಶ್ಲಾಘನೀಯ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹೆಣ್ಣು ಮಕ್ಕಳು ಅಳವಡಿಸಿಕೊಳ್ಳುವ ಆಯ್ಕೆ ಶಿಕ್ಷಣ ಮಾತ್ರ ಆಗಿರಬೇಕು. ಏಕಾಗ್ರತೆ, ಶ್ರದ್ದೆ ಮೂಡಿಸಿಕೊಂಡು ಶಿಕ್ಷಣ ಪಡೆಯುವ ಮಕ್ಕಳು ಮುಂದೆ ಉತ್ತಮ ನಾಗರೀಕ ಎನಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಹೆಚ್ಚಳ ಮಾಡಿಕೊಳ್ಳಲು ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ ಎಂದರು.
ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಜಿ.ಆರ್.ರಮೇಶ್ ಮಾತನಾಡಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯತೆ ಬಗ್ಗೆ ಈ ಹಿಂದೆಯೇ ಚಿಂತಿಸಿದ್ದ ನಾಟಕ ರತ್ನ ಗುಬ್ಬಿ ವೀರಣ್ಣ ಅವರ ಮುಂದಾಲೋಚನೆಯ ಫಲವಾಗಿ ಕಟ್ಟಿದ ಈ ಶಾಲೆ ಇಂದು ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಅತ್ಯುತ್ತಮ ಎನಿಸಿಕೊಂಡಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಸಮವಸ್ತ್ರ ಪಡೆದ ಮಕ್ಕಳು ಶಾಲೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಬಿಆರ್ ಸಿ ಮಧುಸೂದನ್, ಡಯಟ್ ಉಪನ್ಯಾಸಕಿ ಸರಸ್ವತಿ, ಎಸ್ ಡಿಎಂಸಿ ಅಧ್ಯಕ್ಷ ಪ್ರಸಾದ್, ಸದಸ್ಯ ಹರೀಶ್, ಮುಖ್ಯ ಶಿಕ್ಷಕಿ ವಸಂತಕುಮಾರಿ, ಶಿಕ್ಷಕರಾದ ದೇವಿಕಾ, ಭದ್ರೇಗೌಡ, ಜಯಣ್ಣ, ಸತ್ಯನಾರಾಯಣ, ರಮೇಶ್ ಇತರರು ಇದ್ದರು.