ಶಿಕ್ಷಕರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸೋಣ : ಶಾಸಕ ಜಿ.ಬಿ. ಜ್ಯೋತಿಗಣೇಶ್

ತುಮಕೂರು: ಇಡೀ ದೇಶದ ದಿಕ್ಸೂಚಿಯನ್ನು ಬದಲಿಸುವಂತಹ ಸಾಮರ್ಥ್ಯ ಶಿಕ್ಷಣ ವ್ಯವಸ್ಥೆಗಿದೆ. ಆದುದರಿಂದ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಶಿಕ್ಷಕರ ದಿನಾಚರಣೆ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಈ ದಿನಾಚರಣೆಯನ್ನು ನಾವಿಂದು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಕರೆ ನೀಡಿದರು.

ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶೈಕ್ಷಣಿಕ ಜಿಲ್ಲೆ ತುಮಕೂರು ಸಂಯುಕ್ತಾಶ್ರಯದಲ್ಲಿ ಭಾರತ ರತ್ನ ಡಾ|| ಸರ್ವೇಪಲ್ಲಿ ರಾಧಾಕೃಷ್ಣನ್ ರವರ 135ನೇ ಜನ್ಮದಿನಾಚರಣೆ ಮತ್ತು ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ನಾವು ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ್ದು, ಈ ಸುಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಈ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನವಾದಲ್ಲಿ ಕಂಡಿತವಾಗಿಯೂ ನಮ್ಮ ದೇಶ ಇಡೀ ಜಗತ್ತಿಗೆ ವಿಶ್ವ ಗುರುವಾಗಲಿದೆ. ಈ ನೂತನ ಶಿಕ್ಷಣ ನೀತಿ ಕಂಡಿತವಾಗಿಯೂ ಉತ್ತಮ ವಿದ್ಯಾರ್ಥಿಗಳನ್ನು ಮತ್ತು ದೇಶಭಕ್ತರನ್ನು ನೀಡುವುದರಲ್ಲಿ ಅನುಮಾನವಿಲ್ಲ ಎಂದರು.

ರಾಜ್ಯದಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆಯಲ್ಲಿ, ಶೇ.40ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಇರಲಿ, ಸರ್ಕಾರಿ ಇರಲಿ ಹಳೆಯ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಮಕ್ಕಳಲ್ಲಿ ಸಾಕಷ್ಟು ಮಾಹಿತಿ ಇರುತ್ತದೆ, ಅದನ್ನು ಜ್ಞಾನವನ್ನಾಗಿ ಪರಿವರ್ತಿಸುವ ಕೆಲಸವಾಗಬೇಕಿದೆ. ಶಿಕ್ಷಕರು ಮಕ್ಕಳಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಬೇಕು ಎಂದರು.

 

ಶಿಕ್ಷಕ ವೃತ್ತಿ ನನಗೆ ಹೆಚ್ಚು ಖುಷಿಯನ್ನು ನೀಡಿತ್ತು ಎಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರು ತನ್ನ ಶಿಷ್ಯ ಕನ್ನಡಿಗ ಎನ್. ಮೂರ್ತಿರಾಯರೊಂದಿಗೆ ಹಂಚಿಕೊಂಡ ಮಾತುಗಳನ್ನು ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಸ್ಮರಿಸಿದರು.

ಸ್ವಾಮಿ ವಿವೇಕಾನಂದರ ನಂತರ ವಿಶ್ವದಾದ್ಯಂತ ಅತ್ಯಂತ ಹೆಚ್ಚು ಉಪನ್ಯಾಸಗಳನ್ನು ನೀಡಿದ ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿ, ವಿದ್ವಾಂಸ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿರುತ್ತಾರೆ. ಅಲ್ಲಿಂದ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಆದ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳು ಭಾವುಕರಾಗಿ ಗುರುಗಳಾದ ರಾಧಕೃಷ್ಣನ್ ಅವರನ್ನು ಸಾರೋಟಿನಲ್ಲಿ ಕೂರಿಸಿ ರೈಲ್ವೆ ನಿಲ್ದಾಣದವರೆಗೆ ಕರೆತಂದು ಬಿಳ್ಕೋಟ್ಟ ಪ್ರಸಂಗವನ್ನು ನೆರೆದಿದ್ದ ಅಪಾರ ಶಿಕ್ಷಕ ವೃಂದದ ಮುಂದೆ ತೆರೆದಿಟ್ಟರು.

  

ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಡುವಂತ ಗುರುವಾಗಬೇಕು. ಇಲ್ಲವಾದರೇ ಮಕ್ಕಳು ಹಾದಿ ತಪ್ಪುತ್ತಾರೆ ಎಂಬ ಮಾತನ್ನು ಒಂದು ದೃಷ್ಠಾಂತದ ಮೂಲಕ ಶ್ರೀಗಳು ಉದಹರಿಸಿದರು.

ರಾಷ್ಟ್ರವಿರುವುದು ಶಿಕ್ಷಕರ ಕೈಯಲ್ಲಿ ಅವರು ಉತ್ತಮ ಪ್ರಜೆಗಳನ್ನಾಗಿ ರೂಪಿಸಿದರೆ ರಾಷ್ಟ್ರ ಉತ್ತಮವಾಗಿರುತ್ತದೆ. ಶಿಕ್ಷಕನಿಗೆ ಕಲಿಯಲು ಆಸಕ್ತಿಯಿಂದ ಇದ್ದರೆ ಮಾತ್ರ ಉನ್ನತವಾದುದನ್ನು ಕಲಿಸಲು ಸಾಧ್ಯ. ಶಿಕ್ಷಕ ನಿಂತ ನೀರಾಗದೇ ಸದಾ ಚಲನಶೀಲರಾಗಿರಬೇಕು ಎಂದರಲ್ಲದೆ, ಶಿಕ್ಷಣ ಯಾವತ್ತಿಗೂ ಫಲಿತಾಂಶ ಆಧಾರಿತವಾಗಿರಬಾರದು ಮಕ್ಕಳ ಜ್ಞಾನ ವಿಕಾಸವಾಗುವಂತಹ ಅಂಶಗಳನ್ನು ತುಂಬಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿ.ಪಂ. ಸಿಇಓ ಡಾ.ಕೆ. ವಿದ್ಯಾಕುಮಾರಿ, ಡಿಡಿಪಿಐ ಸಿ.ನಂಜಯ್ಯ, ಡಿಡಿಪಿಯು ಗಂಗಾಧರ್, ಬಿಇಓ ಹನುಮನಾಯಕ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಮತ್ತು ಸಹಶಿಕ್ಷಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!