ಗುಬ್ಬಿ: ದೇಶದ ಗಡಿ ಕಾಯುವ ಸೈನಿಕನ ರೀತಿ ಆಂತರಿಕ ಕಾವಲು ಶಿಕ್ಷಕರಿಂದ ನಡೆದಿದೆ. ಉತ್ತಮ ಪ್ರಜೆ ಸೃಷ್ಟಿಸುವ ಶಿಕ್ಷಕರ ಈ ನಿಸ್ವಾರ್ಥ ಸೇವೆಯನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ತಾಲ್ಲೂಕು ಶಿಕ್ಷಕರ ದಿನಾಚರಣೆ ಸಮಿತಿ ಸಹಯೋಗದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 135 ನೇ ಜಯಂತೊತ್ಸವ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಂದುವರೆದ ದೇಶಕ್ಕೆ ಶಿಕ್ಷಣ ರಂಗವೇ ಭದ್ರ ಬುನಾದಿ. ಇಂತಹ ರಂಗಕ್ಕೆ ಬಜೆಟ್ ನಲ್ಲಿ ಕೇವಲ 500 ಕೋಟಿ ರೂ ಮೀಸಲು ಸಾಲದು. ಮಾನವ ಸಂಪನ್ಮೂಲ ಉತ್ಪತ್ತಿಯ ಈ ಇಲಾಖೆ ಸಾಕಷ್ಟು ಹಣ ನೀಡಬೇಕಿದೆ ಎಂದರು.

ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಮಾಡದ ಸಂದರ್ಭದಲ್ಲಿ ಶಿಕ್ಷಕ ದಂಪತಿ ಪರಿಪಾಡು ಹೇಳತೀರದು. ವರ್ಗಾವಣೆ ನೀತಿ ಸಡಿಲಗೊಳಿಸುವ ಕೆಲಸ ಆಗಬೇಕು. ಖಾಲಿ ಹುದ್ದೆ ಭರ್ತಿ ಸಹ ಇಲಾಖೆ ಮಾಡಬೇಕು. ಹೊಡೆದು ತಿನ್ನುವ ಇಲಾಖೆಗಳ ಮಧ್ಯೆ ನಿಸ್ವಾರ್ಥ ಸೇವೆ ಮಾಡುವ ಶಿಕ್ಷಕರ ಪಿಂಚಣಿ ರಹಿತ ನೇಮಕಾತಿ ಬಗ್ಗೆ ಸದನದಲ್ಲಿ ಚರ್ಚಿಸುತ್ತೇನೆ ಎಂದ ಅವರು ಸಾಕ್ಷರತೆಯಲ್ಲಿ ನಾವು ಇನ್ನೂ ಸಾಧಿಸಬೇಕಿದೆ. ಶೇಕಡಾ 87 ರಷ್ಟು ಸಾಧಿಸಿದ್ದು, ನೂರರಷ್ಟು ಮುಟ್ಟಬೇಕು ಎಂದರು.
ರಾಧಾಕೃಷ್ಣನ್ ಪೋಟೋ ಅನಾವರಣಗೊಳಿಸಿದ ಬೆಳ್ಳಾವಿ ಮಠದ ಶ್ರೀ ಕಾರದ ವಿರಬಸವ ಸ್ವಾಮೀಜಿ ಮಾತನಾಡಿ ಗುರು ಕುಲ ಶಿಕ್ಷಣಕ್ಕೂ ಇಂದಿನ ಆಧುನಿಕ ಶಿಕ್ಷಣಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಮೆಕಾಲೆ ಶಿಕ್ಷಣ ದುಬಾರಿಯಾದ ಹಿನ್ನಲೆ ಮಾರಾಟದ ಶಿಕ್ಷಣ ನಿಲ್ಲಬೇಕು. ತಂತ್ರಜ್ಞಾನ ಬೆಳೆದಂತೆ ಶಿಕ್ಷಣ ಜೊತೆಗೆ ಹಾದಿ ತಪ್ಪಿಸುವ ಲಕ್ಷಣಗಳು ಸಹ ಹೆಚ್ಚಾಗಿದೆ. ಇಂದಿನ ಯುವ ಜನಾಂಗವನ್ನು ಉತ್ತಮ ನಾಗರೀಕರಾಗಿ ಸೃಷ್ಟಿಸಲು ಶಿಕ್ಷಕ ವರ್ಗ ಹಾಗೂ ಪೋಷಕರು ಕೈ ಜೋಡಿಸಬೇಕು ಎಂದು ಕರೆ ನೀಡಿದ ಅವರು ಶಿಕ್ಷಕ ಪದದಲ್ಲಿ ಶಿ ಎಂದರೆ ಶಿವ ಸ್ವರೂಪ, ಕ್ಷ ಅಕ್ಷರದಲ್ಲಿ ಕ್ಷಮಾಗುಣ ಹಾಗೂ ಕ ಅಕ್ಷರದಲ್ಲಿ ಕರುಣಾಮಯಿ ಎನ್ನುವ ಅರ್ಥ ಕೊಡುತ್ತದೆ ಎಂದು ವ್ಯಾಖ್ಯಾನಿಸಿದರು.

ಬಿಇಒ ಸೋಮಶೇಖರ್ ಮಾತನಾಡಿ ಸಮಾಜವು ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಶಿಕ್ಷಕ ಸ್ಥಾನಕ್ಕೆ ಇರುವ ಗೌರವ ಉಳಿಸುವಂತೆ ನಮ್ಮಗಳ ನಡವಳಿಕೆ ಇರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ವೃತ್ತಿಯ ಮೂಲಕ ಉತ್ತಮ ನಾಗರೀಕ ಸೃಷ್ಠಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕರು, ನಿವೃತ್ತ ಶಿಕ್ಷಕರು ಹಾಗೂ ಮೃತ ಶಿಕ್ಷಕ ಕುಟುಂಬಕ್ಕೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬಿಆರ್ ಸಿ ಮಧುಸೂದನ್, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಉಮಾಮಹೇಶ್ವರ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಟಿ.ಪ್ರಕಾಶ್, ಜಿಲ್ಲಾ ಸಹ ಕಾರ್ಯದರ್ಶಿ ಭೈರಯ್ಯ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಕಸಾಪ ಅಧ್ಯಕ್ಷ ಯತೀಶ್ ಹಾಗೂ ಪಟ್ಟಣ ಪಂಚಾಯಿತಿ ಎಲ್ಲಾ ಸದಸ್ಯರು ಇತರರು ಇದ್ದರು.