ರಸ್ತೆಯಲ್ಲೇ ಉಪಾಧ್ಯಕ್ಷೆ ಮತ್ತು ಮುಖ್ಯಾಧಿಕಾರಿಗಳ ವಾಗ್ಯುದ್ಧ

ಹುಳಿಯಾರು: ಊರಿನ ಅಭಿವೃದ್ಧಿ ಕಾರ್ಯದ ವಿಚಾರವಾಗಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಮತ್ತು ಮುಖ್ಯಾಧಿಕಾರಿಗಳು ನಡುರಸ್ತೆಯಲ್ಲೇ ವಾಗ್ಯುದ್ಧ ಮಾಡಿದ ಘಟನೆ ಹುಳಿಯಾರಿನಲ್ಲಿ ಸೋಮವಾರ ಜರುಗಿದೆ.

ಇಲ್ಲಿನ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಶೃತಿಸನತ್ ಅವರು ನಮ್ಮ ಬ್ಲಾಕ್‌ನಲ್ಲಿ ಅನಗತ್ಯ ಗಿಡಗಂಟೆಗಳು ಬೆಳೆದಿದ್ದು ವಿಷಜಂತುಗಳ ಹಾಗೂ ಸೊಳ್ಳೆಗಳು ಹೆಚ್ಚಾಗಿವೆ. ಹಾಗಾಗಿ ಸ್ವಚ್ಚ ಮಾಡುವಂತೆ ಹದಿನೈದು ದಿನದಿಂದ ಕೇಳಿದ್ದರೂ ಇಲ್ಲಿಯವರೆವಿಗೆ ಸ್ಪಂಧಿಸಿಲ್ಲ ಎಂದು ಆರೋಪಿಸಿ ಖಾಸಗಿ ಕಾರ್ಮಿಕರನ್ನು ಕರೆ ತಂದು ಸೋಮವಾರ ಪೇಟೆಬೀದಿಯನ್ನು ಕ್ಲೀನ್ ಮಾಡಿಸುತ್ತಿದ್ದರು.

ಈ ವಿಷಯ ತಿಳಿದ ಮುಖ್ಯಾಧಿಕಾರಿ ಡಿ.ಭೂತಪ್ಪ ಅವರು ಸ್ಥಳಕ್ಕೆ ಆಗಮಿಸಿ ಇದ್ಯಾಕೆ ಮೇಡಂ ಇಷ್ಟು ಸಿಟ್ಟಾಗಿದ್ದೀರಿ ಎಂದು ಪ್ರಶ್ನಿಸಿದ್ದೇ ತಡ ಉಪಾಧ್ಯಕ್ಷೆ ಶೃತಿಸನತ್ ತಮ್ಮ ಆಕ್ರೋಶ ಹೊರಗೆಡವಿದರು. ನಮ್ಮ ಯಾವ ಕೆಲಸವನ್ನೂ ಮಾಡಿಕೊಡ್ತಿಲ್ಲ. ಖಾತೆ, ನಮೊನೆ-೩ ಕೇಳಿದರೂ ಮಾಡಿ ಕೊಡದೆ ಪೆಂಡಿಗ್ ಇಡ್ತಿದ್ದೀರಿ. ಬ್ಲಾಕ್ ಸ್ವಚ್ಚ ಮಾಡಿ ಅಂದರೂ ಮಾಡಿಸ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಸಿಬ್ಬಂದಿಯ ಕೊರತೆಯಿರುವುದರಿಂದ ಕೆಲಸಕಾರ್ಯಗಳು ವಿಳಂಬವಾಗುತ್ತಿದೆ. ಈ ಬಗ್ಗೆ ಗೊತ್ತಿರುವ ನೀವೇ ಹೀಗೆ ಮಾಡಿದರೆ ಹೇಗೆ ಎಂದು ಮುಖ್ಯಾಧಿಕಾರಿ ಡಿ.ಭೂತಪ್ಪ ಮರುಪ್ರಶ್ನೆಯಾಕಿದರು. ಕಛೇರಿ ಕೆಲಸಕ್ಕೆ ಸಿಬ್ಬಂದಿ ಕೊರತೆಯಿದೆಯಾದರೂ ಪೌರಕಾರ್ಮಿಕರ ಕೊರತೆಯಿವಾದ್ದರಿಂದ ಅವರಿಂದ ಸ್ವಚ್ಚ ಮಾಡಿಸಲು ಏನು ಕಷ್ಟ ಎಂದು ಕೇಳಿದರು.

ಪೌರಕಾರ್ಮಿಕರು ೨೨ ಮಂದಿ ಇದ್ದಾರೆ. ಅದರಲ್ಲಿ ಐವರು ವಾಟರ್ ಸಪ್ಲೈಗೆ, ೭ ಮಂದಿ ಕಛೇರಿ ಒಳಗೆ ಕೆಲಸ ಮಾಡ್ತಾರೆ. ಉಳಿದ ಏಳೆಂಟು ಮಂದಿ ಇಡೀ ಊರಿನ ಸ್ವಚ್ಚ ಮಾಡಬೇಕು. ಆಟೋ ಟಿಪ್ಪರು, ಸಕ್ಕಿಂಗ್ ಮಿಷಿನ್, ಫುಷ್‌ಕಾಟ್‌ಗಳಿಲ್ಲ. ಇರುವ ಒಂದೇ ಒಂದು ಟ್ರ್ಯಾಕ್ಟರ್ ಬಳಸಿ ಊರಿನ ತ್ಯಾಜ್ಯ ತೆರವು ಮಾಡಬೇಕು. ನಮ್ಮ ಕಷ್ಟ ನೀವೆ ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ ಎಂದು ತಿಳಿದರು.

ಈ ಸಂದರ್ಭದಲ್ಲಿ ಅಲ್ಲಿದ್ದ ಆರ್ಯವೈಶ್ಯ ಮಂಡಳಿ ಜಿಲ್ಲಾಧ್ಯಕ್ಷ ಎಲ್.ಆರ್.ಚಂದ್ರಶೇಖರ್ ಕೂಡ ಶೃತಿ ಪರವಾಗಿ ಬ್ಯಾಟಿಂಗ್ ಮಾಡಿದರು. ಇಲ್ಲಿನ ಅನೈರ್ಮಲ್ಯತೆಯ ಬಗ್ಗೆ ನಾನೇ ಖುದ್ದು ನಿಮ್ಮ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ನಾವೆಲ್ಲರೂ ಮತ ಕೊಟ್ಟು ಗೆಲ್ಲಿಸಿ ಕಳುಹಿಸಿದ್ದ ಶೃತಿ ಅವರಿಗೆ ಪೇಟೆ ಬೀದಿನ ಜನ ಕ್ಲೀನ್ ಮಾಡಿಸಲು ತಾಕೀತು ಮಾಡಿದ್ದರು. ಹಾಗಾಗಿ ಇಂದು ಖಾಸಗಿ ಕಾರ್ಮಿಕರನ್ನು ಕರೆತಂದು ಕ್ಲೀನ್ ಮಾಡಿಸುತ್ತಿದ್ದಾರೆ ಎಂದರು.

ಸುತ್ತಮುತ್ತ ನವಿಲುಗಳು ಹೆಚ್ಚಾಗಿರುವ ಹಾಗೂ ಹುಳಿಯಾರು ಕೆರೆಗೆ ನೀರು ಬರುತ್ತಿರುವುದರಿಂದ ಹಾವುಗಳು ಊರಿನೊಳಗೆ ಬರುತ್ತಿವೆ. ಅಲ್ಲದೆ ಸಿಸಿ ರಸ್ತೆ ಮಾಡುವಾಗ ಹಾಕಿದ್ದ ನಾರಿನ ತೌಡು, ಚರಂಡಿ ತ್ಯಾಜ್ಯ ಇವುಗಳನ್ನು ತೆರವು ಮಾಡಿಲ್ಲ. ಹೀಗಾದರೆ ಇಲ್ಲಿನ ಜನ ವಾಸಿಸುವುದಾದರೂ ಹೇಗೆ? ಇಲ್ಲಿನ ಮಹಿಳಾ ಜನಪ್ರತಿನಿಧಿ ಮನೆ ಕೆಲಸದ ಜೊತೆ ಇವುಗಳನ್ನೂ ಮಾಡಬೇಕಿದ್ದು ನೀವೇ ಸಹಕಾರ ನೀಡದಿರುವುದು ಸರಿಯೇ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಸಿಬ್ಬಂದಿ ಕೊರತೆಯ ಜೊತೆಗೆ ಹಬ್ಬಗಳು ಬಂದಿದ್ದರಿಂದ ಸ್ವಚ್ಚತೆಗೆ ಕಳುಹಿಸುವುದು ತಡವಾಗಿದ್ದು ಮಂಗಳವಾರದಿಂದ ಕ್ಲೀನ್ ಮಾಡಲು ಹೇಳಿದ್ದೆ ಅಷ್ಟರಲ್ಲಿ ಖಾಸಗಿಯವರನ್ನು ಕರೆಸಿ ಕ್ಲೀನ್ ಮಾಡುತ್ತಿದ್ದಾರೆ. ಕಛೇರಿಯ ಸಮಸ್ಯೆ ತಿಳಿದಿರುವ ಉಪಾಧ್ಯಕ್ಷರೆ ಹೀಗೆ ಮಾಡಿದರೆ ಜನರಿಗೆ ಹೇಗೆ ಉತ್ತರ ಕೊಡೋದು. ಆದರೂ ಪರ್‍ವಾಗಿಲ್ಲ ನಾಳೆಯಿಂದ ಸ್ವಚ್ಚ ಮಾಡಲು ಪೌರಕಾರ್ಮಿಕರನ್ನು ಕಳುಹಿಸಿಕೊಡುತ್ತೇನೆ. ಅಲ್ಲದೆ ಈಗ ಖಾಸಗಿಯವರಿಗೆ ಆಗಿರುವ ಖರ್ಚಿ ಬಾಬ್ತು ಹಣವನ್ನು ಪಂಚಾಯ್ತಿಯಿಂದಲೇ ಕೊಡುತ್ತೇವೆ ಎಂದೇಳಿ ಸಮಸ್ಯೆಗೆ ಇತಿಶ್ರೀ ಹಾಡಿದರು.

     

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!