ಟೈಲರ್ ವೃತ್ತಿನಿರತರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ – ಶಾಸಕ ವೆಂಕಟರಮಣಪ್ಪ

ಪಾವಗಡ: ಬಡತನ ರೇಖೆಗಿಂತ ಕೆಳವರ್ಗದವರೇ ಹೆಚ್ಚಾಗಿರುವ ಟೈಲರ್ ವೃತ್ತಿನಿರತರನ್ನು ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸುವಂತೆ ಸರ್ಕಾರಕ್ಕೆ ಮನವಿ ಮಾಡಿ ಟೈಲರ್ ಗಳ ಹಲವು ಸಮಸ್ಯೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.

ಮಂಗಳವಾರ ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಪಾವಗಡ ತಾಲೂಕು ಟೈಲರ್‍ಸ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಹಲವು ಬೇಡಿಕೆಗಳ ಈಡೇರಿಕೆಗಾಗಿ ನಡೆದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ನಾನು ಕಾರ್ಮಿಕ ಸಚಿವನಾಗಿದ್ದಾಗ ವಿವಿಧ ಕ್ಷೇತ್ರಗಳಲ್ಲಿ ವೃತ್ತಿನಿರತರಾಗಿದ್ದವರು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ನೊಂದಣಿ ಮಾಡಿಸಿ ಸರ್ಕಾರದ ಸವಲತ್ತುಗಳು ದೊರೆಯುವಂತೆ ಮಾಡಿದ್ದೇನೆ, ಆ ವೇಳೆ ಟೈಲರ್‍ಸ್ ಅಸೋಸಿಯೇಷನ್ ನಿಂದ ಯಾವುದೇ ಅರ್ಜಿ ಬಂದಿರಲಿಲ್ಲ, ಶಿಘ್ರದಲ್ಲೇ ಕಾರ್ಮಿಕ ಸಚಿವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ತಾಲೂಕಿನ ಟೈಲರ್‍ಸ್ ಸಂಘದ ಮನವಿ ಮೇರೆಗೆ ಒಂದು ಸಮುದಾಯ ಭವನ ನಿರ್ಮಿಸಲು ಕ್ರಮ ವಹಿಸುತ್ತೇನೆ, ಸಂಘಟನೆಯಿಂದ ನೀಡಿರುವ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನಕ್ಕೆ ತಂದು ವೃತ್ತಿನಿರತರಿಗೆ ಸಾಮಾಜಿಕ ಭದ್ರತೆ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಸಂಘಟನೆಯ ಅಧ್ಯಕ್ಷ ಕರಿಯಣ್ಣ ಗೌಡ ಮಾತನಾಡಿ ದೇಶದಲ್ಲಿ ರೈತರು ಮತ್ತು ಟೈಲರ್‍ಸ್‌ಗಳ ಜೀವನ ನಿರ್ವಹಣೆ ಕಷ್ಟಕರವಾಗಿದೆ, ಸರ್ಕಾರ ಈ ಕೂಡಲೆ ಅಸಂಘಟಿತ ಟೈಲರ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಿ, ೬೦ ವರ್ಷದ ನಂತರ ವೃತ್ತಿಯಿಂದ ನಿವೃತ್ತರಾದವರಿಗೆ ಮೂರು ಸಾವಿರ ಪಿಂಚಣಿ ನೀಡುವುದು, ಹೆಲ್ತ್ ಕಾರ್ಡ್, ಗಾರ್ಮೆಂಟ್ಸ್ ಮತ್ತು ಕೈಗಾರಿಕೆಗಳಲ್ಲಿ ಉದ್ಯೋಗ, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ವಿವಾಹಕ್ಕೆ ಪ್ರೋತ್ಸಾಹ ಧನ ವಿತರಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಟೈಲರ್‍ಸ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಎಸ್ ಸಿ ಕರಿಯಣ್ಣ, ಪುರಸಭೆ ಅಧ್ಯಕ್ಷ ವೇಲು ರಾಜ್, ಮಾಜಿ ಶಾಸಕ ತಿಮ್ಮರಾಯಪ್ಪ, ಎಸ್ ಎಸ್ ಕೆ ಅಧ್ಯಕ್ಷ ಕೆ.ವಿ ಶ್ರೀನಿವಾಸ್, ಸಮಾಜ ಸೇವಕ ನೇರಳೆಕುಂಟೆ ನಾಗೇಂದ್ರ ಕುಮಾರ್, ಸಾಯಿ ಸುಮಾನಾ, ಕೊತ್ತೂರು ಹನುಮಂತರಾಯಪ್ಪ, ಗೌರವಾದ್ಯಕ್ಷ ರಸೂಲ್, ಉಪಾದ್ಯಕ್ಷ ಶ್ರೀನಿವಾಸ ರಾವ್, ಕಾರ್ಯದರ್ಶಿ ನಾರಾಯಣಪ್ಪ, ಖಜಾಂಜಿ ನರಸಿಂಹಮೂರ್ತಿ, ಟಿ.ಪ್ರಥಾಪ್, ವೀರಭದ್ರಪ್ಪ, ಕರಿಯಪ್ಪ, ಗೋವಿಂದಪ್ಪ ಸೇರಿದಂತೆ ತಾಲೂಕಿನ ಟೈಲರ್ ವೃತ್ತಿನಿರತರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!