ಒಡೆದ ಅಡಗೂರು ಕೆರೆ ಕೋಡಿ : ಹೇಮಾವತಿ ಇಲಾಖಾಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

ಗುಬ್ಬಿ: ಕಳೆದೆರಡು ವರ್ಷದ ಹಿಂದೆಯೇ ಅಡಗೂರು ಕೆರೆ ಕೋಡಿ ಬಿರುಕು ಬಿಟ್ಟ ಬಗ್ಗೆ ಇಲಾಖೆಗೆ ತಿಳಿಸಿದ್ದಲ್ಲದೆ ಈಚೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೆರೆ ಪರಿಶೀಲಿಸಿ ಸೂಚಿಸಿದರೂ ನಿರ್ಲಕ್ಷ್ಯ ತೋರಿದ ಹೇಮಾವತಿ ಇಲಾಖಾಧಿಕಾರಿಗಳ ಬೇಜವಾಬ್ದಾರಿತನಕ್ಕೆ ತಾಲ್ಲೂಕಿನ ಕಸಬಾ ಹೋಬಳಿ ಅಡಗೂರು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.

27.56 ಎಂಸಿಎಫ್ ಟಿ ನೀರು ಶೇಖರಣೆ ಆಗುವ 64 ಹೆಕ್ಟೇರ್ ವಿಸ್ತೀರ್ಣದ ಕೆರೆ, ಕೋಡಿ ಸುಮಾರು 100 ಮೀಟರ್ ಉದ್ದದ 1.5 ಮೀಟರ್ ಎತ್ತರದಲ್ಲಿದೆ. ಸುಮಾರು 80 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಾಗಿದೆ. ಹಳೆಯ ಕೋಡಿ ಮಧ್ಯೆ ಬಿರುಕು ಕಾಣಿಸಿಕೊಂಡು ವರ್ಷವಾದರೂ ಸಣ್ಣಪುಟ್ಟ ದುರಸ್ಥಿ ಮೇಲ್ನೋಟಕ್ಕೆ ನಡೆದಿದೆ. ಸಂಪೂರ್ಣ ಹೊಸ ಕೋಡಿ ನಿರ್ಮಾಣಕ್ಕೆ ಆಗ್ರಹ ಮಾಡಿದ್ದರೂ ಇಲಾಖೆ ಹೆಚ್ಚಿನ ನಿಗಾವಹಿಸದ ಕಾರಣ ಎಂದು ಕೆರೆ ಕೋಡಿ ಒಡೆದಿದೆ. ಇದರ ಹೊಣೆ ಹೇಮಾವತಿ ಇಲಾಖೆ ಹೊರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಸುರಿಯುತ್ತಿರುವ ಮಳೆಗೆ ಅಡಗೂರು ಕೆರೆಯ ಹಳೇ ಕೋಡಿ ಸ್ವಲ್ಪ ಬಿರುಕು ಕಾಣಿಸಿಕೊಂಡಿತ್ತು. ಈ ಬಗ್ಗೆ ಸ್ಥಳೀಯ ಮುಖಂಡರು ಹಲವಾರು ಬಾರಿ ಮನವಿ ಮಾಡಿದ್ದರು. ಸಂಬಂಧಪಟ್ಟ ಇಂಜಿನಿಯರ್ ಈಗ ಆಗ ಎನ್ನುತ್ತಲೇ ವಿಳಂಬ ಅನುಸರಿಸಿದ್ದಾರೆ. ಕೆರೆ ತುಂಬಿದ ಸಂದರ್ಭದಲ್ಲಿ ಬಿರುಕು ಬಿಟ್ಟ ಕೋಡಿ ಬಾಯಿಗೆ ಮರಳಿನ ಚೀಲ ಹಾಕುವ ಕೆಲಸ ಗ್ರಾಮಸ್ಥರೇ ಮಾಡಿದ್ದೇವೆ. ಇಲಾಖೆಯ ತೀವ್ರ ಬೇಜವಾಬ್ದಾರಿಯೇ ಇಂದು ಕೆರೆ ಒಡೆದು ಹೋಗಲು ಕಾರಣ. ಸಿಸಿ ರಸ್ತೆ ನಿರ್ಮಾಣಕ್ಕೆ ತೋರುವ ಆಸಕ್ತಿ ಈ ಕೆರೆ ಕೋಡಿ ನಿರ್ಮಾಣಕ್ಕೆ ತೋರದ ಅಧಿಕಾರಿಗಳು ಈ ಘಟನೆಗೆ ನೇರ ಹೊಣೆ ಎಂದು ತಾಪಂ ಮಾಜಿ ಸದಸ್ಯ ಕರೇತಿಮ್ಮಯ್ಯ ಆರೋಪ ಮಾಡಿದರು.

ಕೆರೆ ಕೋಡಿ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ ಕ್ರಿಯಾ ಯೋಜನೆ ರೂಪಿಸಿ ಇಲಾಖೆ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿತ್ತು. 86 ಲಕ್ಷ ರೂಗಳ ಮಂಜೂರಾತಿ ಆಗುವ ಮುನ್ನ ಈ ಕೆರೆ ಕೋಡಿ ಸುಮಾರು 5 ಮೀಟರ್ ಒಡೆದಿದೆ. ಸಚಿವ ಗೋವಿಂದ ಕಾರಜೋಳ ಅವರು ಸಹ ಭೇಟಿ ನೀಡಿ ಇಲ್ಲಿನ ಕೋಡಿ ಪರಿಶೀಲಿಸಿದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು. ಆದರೆ ಮೂರು ದಿನದ ಬಾರಿ ಮಳೆಗೆ ಕೋಡಿ ಒಡೆದಿದೆ. ತಾತ್ಕಾಲಿಕ ತಡೆಗೆ ಕ್ರಮವಹಿಸಲಾಗುತ್ತಿದೆ ಎಂದು ಹೇಮಾವತಿ ಎಇ ನಾಗರಾಜು ತಿಳಿಸಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!