ಚಿತ್ರದುರ್ಗ: ದಾವಣಗೆರೆ-ಚಿತ್ರದುರ್ಗ ತುಮಕೂರು ಹೊಸ ನೇರ ರೈಲ್ವೆ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಮೂರೂ ಜಿಲ್ಲೆಗಳಲ್ಲಿ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ, ಯೋಜನೆಗೆ ಶೀಘ್ರವೇ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಅವರು ಮೂರು ಜಿಲ್ಲೆಗಳ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾವಣಗೆರೆ ಜಿಲ್ಲೆಯ ತೋಳಹುಣಸೆಯಿಂದ ಯೋಜನೆಯ ಮಾರ್ಗ ಪ್ರಾರಂಭವಾಗಲಿದ್ದು, ಇಲ್ಲಿಂದ ಚಿತ್ರದುರ್ಗ ಜಿಲ್ಲೆಯ ನೀರ್ಥಡಿ ವರೆಗೆ ಒಟ್ಟು 32 ಕಿ.ಮೀ. ಮಾರ್ಗದವರೆಗಿನ 209.14 ಎಕರೆ ಭೂಸ್ವಾಧೀನಪಡಿಸಿಕೊಂಡು, ಪರಿಹಾರ ಹಣ ಪಾವತಿಸಿ, ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇಲ್ಲಿನ ಮಾರ್ಗದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ. ಈ ಪ್ರದೇಶದಲ್ಲಿನ ಅರಣ್ಯ ಇಲಾಖೆ ಭಾಗಕ್ಕೆ ಜಿಲ್ಲಾಧಿಕಾರಿಗಳಿಂದ ಕ್ಲಿಯರೆನ್ಸ್ ಅನ್ನು ರೈಲ್ವೆ ಇಲಾಖೆಗೆ ಸಲ್ಲಿಸುವುದು ಬಾಕಿ ಇದ್ದು ಶೀಘ್ರದಲ್ಲಿ ಇದೂ ಕೂಡ ಪೂರ್ಣಗೊಳ್ಳಲಿದೆ ಎಂದು ಇಲ್ಲಿನ ವಿಶೇಷ ಭೂಸ್ವಾಧೀನ ಅಧಿಕಾರಿ ರೇಷ್ಮಾ ಹಾನಗಲ್ ಅವರು ಸಭೆಗೆ ಮಾಹಿತಿ ನೀಡಿದರು.
ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ವಿಶೇಷ ಭೂಸ್ವಾಧೀನ ಅಧಿಕಾರಿ ವೆಂಕಟೇಶ್ ನಾಯಕ್ ಮಾತನಾಡಿ, ಜಿಲ್ಲೆಯ ನೀರ್ಥಡಿಯಿಂದ ಸಿದ್ದಾಪುರ ವರೆಗೆ 4.8 ಕಿ.ಮೀ. ಗಾಗಿ 28 ಎಕರೆ ಸ್ವಾಧೀನಪಡಿಸಿ, ರೈಲ್ವೆಗೆ ಹಸ್ತಾಂತರಿಸಲಾಗಿದೆ.
ತುಮಕೂರು ಜಿಲ್ಲೆಯ ವಿಶೇಷ ಭೂಸ್ವಾಧೀನ ಅಧಿಕಾರಿ ಧರ್ಮಪಾಲ್ ಅವರು ಮಾತನಾಡಿ, ಜಿಲ್ಲೆಯ ಉಜ್ಜನಕುಂಟೆ-ತುಮಕೂರು ಮಾರ್ಗದಲ್ಲಿ ಒಟ್ಟು 58 ಕಿ.ಮೀ. ಬರಲಿದ್ದು, ಇದರಲ್ಲಿ ಶಿರಾ ತಾಲ್ಲೂಕು 40 ಹಾಗೂ ತುಮಕೂರು-18 ಕಿ.ಮೀ. ಇರಲಿದೆ. ಉಜ್ಜನಕುಂಟೆ ಕಡವಿಗೆರೆ ಮಾರ್ಗದ 25 ಕಿ.ಮೀ. ವ್ಯಾಪ್ತಿಗೆ 115 ಎಕರೆ ಭೂಸ್ವಾಧೀನ ಪ್ರಕ್ರಿಯೆ ಆಗಿದೆ. ಕಡವಿಗೆರೆ-ತುಮಕೂರು 35 ಕಿ.ಮೀ. ನಲ್ಲಿ ಭೂಸ್ವಾಧೀನದ ಅವಾರ್ಡ್ ಆಗುವುದು ಬಾಕಿ ಇದೆ. ಶಿರಾ ತಾಲ್ಲೂಕಿನಲ್ಲಿ 20 ಕಿ.ಮೀ. ಮಾರ್ಗಕ್ಕಾಗಿ 146 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅವಾಡ್‌ರ್ಗೆ ಇನ್ನೂ 100 ಕೋಟಿ ರೂ. ಅನುದಾನದ ಅಗತ್ಯವಿದೆ. 34 ಎಕರೆ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ಕ್ಲಿಯರೆನ್ಸ್ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಮಾತನಾಡಿ, ಅರಣ್ಯ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಇರುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು, ಅಲ್ಲದೆ ಜಿಲ್ಲೆಯ ವ್ಯಾಪ್ತಿಯಲ್ಲಿ ರೈಲ್ವೆ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಲು ಅಗತ್ಯ ಎಲ್ಲ ಕ್ರಮಗಳನ್ನು ಶೀಘ್ರ ಕೈಗೊಳ್ಳುವಂತೆ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.