ಮಲಗುವಾಗ ದಿಂಬಿನ ಪಕ್ಕದಲ್ಲಿಯೇ ಮೊಬೈಲ್ ಇಟ್ಟು ಮಲಗುವ ಅಭ್ಯಾಸವಿದ್ದರೆ ಇಂದೇ ಬದಲಿಸಿಕೊಳ್ಳಿ.!

ಸ್ಮಾರ್ಟ್‌ಫೋನ್‌ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಹೆಜ್ಜೆ ಹೆಜ್ಜೆಗೂ ಫೋನ್ ಬೇಕೇ ಬೇಕು. ಕೆಲವರಿಗೆ ನಿದ್ದೆ ಬರುವವರೆಗೂ ಫೋನ್ ನಲ್ಲಿ ವಿಡಿಯೋಗಳನ್ನು ನೋಡುವ ಅಭ್ಯಾಸವಿರುತ್ತದೆ. ಇನ್ನು ಕೆಲವರು ಅತ್ಯಂತ ಒರಟಾಗಿ ಫೋನ್ ಬಳಸುತ್ತಾರೆ. ಮೊಬೈಲ್‌ ಬಳಸುವ ವೇಳೆ ನಾವು ಮಾಡುವ ಕೆಲವೊಂದು ತಪ್ಪುಗಳು, ನಮ್ಮ ಪ್ರಾಣಕ್ಕೆ ಮುಳುವಾಗಬಹುದು. ಇತ್ತೀಚೆಗೆ ಹಲವು ಫೋನ್ ಸ್ಫೋಟಗೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂಥಹ ಘಟನೆಗಳು ಬಳಕೆದಾರರ ತಪ್ಪಿನಿಂದಲೇ ನಡೆಯುತ್ತದೆ.

ಮಲಗುವಾಗ ಮೊಬೈಲ್ ಹತ್ತಿರ ಇಟ್ಟುಕೊಳ್ಳಬೇಡಿ :
ಹೆಚ್ಚಿನ ಜನರು ತಮ್ಮ ಮೊಬೈಲ್ ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ. ಮೊಬೈಲ್ ತಾಪಮಾನವು ಬಹಳ ಹೆಚ್ಚಿರುತ್ತದೆ. ಇದರಿಂದ ನಿಮ್ಮ ಫೋನ್ ಕೂಡ ಸ್ಫೋಟಗೊಳ್ಳಬಹುದು. ದಿಂಬಿನ ಬಳಿ ನಿಮ್ಮ ಫೋನ್ ಇಟ್ಟು ಮಲಗುವುದರಿಂದ ನಿಮಗೂ ಅಪಾಯ ಎದುರಾಗಬಹುದು.

ಶರ್ಟ್ ಜೇಬಿನಲ್ಲಿ ಮೊಬೈಲ್ ಇಡಬೇಡಿ :
ಇತ್ತೀಚಿಗೆ ಶರ್ಟ್ ಜೇಬಿನಲ್ಲಿ ಇಟ್ಟಿದ್ದ ಫೋನ್‌ಗಳು ಸ್ಫೋಟಗೊಂಡ ಘಟನೆಗಳು ಕೂಡಾ ಹೆಚ್ಚಾಗಿ ಕೇಳಿ ಬರುತ್ತಿವೆ. ಅಂಗಿಯ ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡಿದ್ದರೆ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಅಂಗಿಯ ಜೇಬಿನಲ್ಲಿ ಹೆಚ್ಚು ಹೊತ್ತು ಮೊಬೈಲ್ ಇಡಬಾರದು. ಇದು ಸ್ಫೋಟದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್ ಮಾಡಬೇಡಿ :
ರಾತ್ರಿಯಿಡೀ ಮೊಬೈಲ್ ಅನ್ನು ಚಾರ್ಜ್‌ನಲ್ಲಿ ಇಡುವ ಅಭ್ಯಾಸವಿದ್ದರೆ ಅದನ್ನು ಬಿಟ್ಟು ಬಿಡಿ. ಇದು ಮೊಬೈಲ್‌ನ ಬ್ಯಾಟರಿಯನ್ನು ಹಾಳುಮಾಡುತ್ತದೆ. ಮೊಬೈಲ್‌ನ ಅತಿಯಾದ ಬಳಕೆಯಿಂದಾಗಿ, ಚಾರ್ಜ್ ಖಾಲಿಯಾಗುತ್ತಿರುತ್ತದೆ. ಈ ಕಾರಣಕ್ಕಾಗಿ ಕೆಲವರು, ರಾತ್ರಿಯಿಡೀ ಮೊಬೈಲ್ ಅನ್ನು ಚಾರ್ಜ್‌ಗೆ ಹಾಕಿಕೊಂಡು ಬಿಡುತ್ತಾರೆ. ರಾತ್ರಿಯಿಡೀ ಚಾರ್ಜ್ ಗೆ ಹಾಕಿರುವ ಕಾರಣ ಮೊಬೈಲ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಸ್ಥಳೀಯ ಚಾರ್ಜರ್‌ಗಳು ಮತ್ತು ಬ್ಯಾಟರಿಗಳನ್ನು ಬಳಸಬೇಡಿ :
ಮೊಬೈಲ್ ಚಾರ್ಜ್‌ಗಾಗಿ ಲೋಕಲ್ ಚಾರ್ಜರ್ ಅನ್ನು ಬಳಸಬಾರದು. ಯಾವಾಗಲೂ ಮೊಬೈಲ್‌ನ ಮೂಲ ಚಾರ್ಜರ್ ಅನ್ನು ಬಳಸಬೇಕು. ಇದಲ್ಲದೆ, ಮೊಬೈಲ್ ಫೋನ್‌ನ ಬ್ಯಾಟರಿ ಹಾಳಾಗಿದ್ದರೆ, ಲೋಕಲ್ ಬ್ಯಾಟರಿ ಬಳಸದೆ ಒರಿಜಿನಲ್ ಕಂಪನಿಯ ಬ್ಯಾಟರಿಯನ್ನೇ ಬಳಸಿ. ಲೋಕಲ್ ಬ್ಯಾಟರಿ ಮೊಬೈಲ್ ಬ್ಲಾಸ್ಟ್‌ಗೆ ಕಾರಣವಾಗಬಹುದು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!