ಗುಬ್ಬಿ: ಕಳೆದೆರಡು ವರ್ಷದಿಂದ ಸುರಿಯುತ್ತಿರುವ ಮಳೆರಾಯನೇ ಕೆರೆಗಳ ಗಡಿ ಸೃಷ್ಟಿಸಿದ್ದರೂ, ಒತ್ತುವರಿ ತೆರವು ಕಾರ್ಯಾಚರಣೆ ಮಾಡಲು ಸರ್ಕಾರ ಮೀನಾ ಮೇಷ ಎಣಿಸಿರುವುದು ಸರಿಯೇ ಎಂಬುದು ಸಾಮಾಜಿಕ ಹೋರಾಟಗಾರರ ಪ್ರಶ್ನೆಯಾಗಿದೆ.
ಗುಬ್ಬಿ ತಾಲ್ಲೂಕಿನ ಒಟ್ಟು 203 ಕೆರೆಗಳ ಪೈಕಿ 92 ಕೆರೆಗಳ ಸರ್ವೇ ಕಾರ್ಯ ನಡೆದು 68 ಕೆರೆಗಳು ಒತ್ತುವರಿ ಆಗಿರುವ ಬಗ್ಗೆ ಸರ್ವೇ ಇಲಾಖೆ ದೃಢ ಪಡಿಸಿದೆ. ಉಳಿದ 24 ಕೆರೆಗಳು ಒತ್ತವರಿ ಇಲ್ಲ ಎಂಬ ಮಾಹಿತಿ ಇದ್ದು ಉಳಿದ ಕೆರೆಗಳ ಸರ್ವೇ ಕಾರ್ಯ ಮಳೆಗಾಲದ ಸಮಯದಲ್ಲೇ ಗುರುತಿಸಿದ್ದಲ್ಲಿ ಸೂಕ್ತ ಎಂದು ಹೋರಾಟಗಾರರ ಆಗ್ರಹವಾಗಿದೆ
.
ಒತ್ತುವರಿ ಕೆರೆಗಳ ಪೈಕಿ ಗುಬ್ಬಿಯ ಸರ್ವೆ ನಂಬರ್ 17 ಮಾರನಕಟ್ಟೆ ಸಂಪೂರ್ಣ 46.01 ಎಕರೆ ಒತ್ತುವರಿ ಎನ್ನಲಾಗಿದೆ ವಿಶೇಷವೆಂದರೆ ಇಡೀ ದೇಶದಲ್ಲಿ ಭೂ ಮಾಫಿಯಾದವರು ಕೆರೆಗಳ ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಿದ್ದು ಗುಬ್ಬಿ ಪಟ್ಟಣದ ಹೃದಯ ಭಾಗದಲ್ಲಿನ ಮಾರನಕಟ್ಟೆ ಕೆರೆಯನ್ನು ಸರ್ಕಾರಿ ಅಧಿಕಾರಿಗಳೇ ಒತ್ತುವರಿ ಮಾಡಿರುವುದು ವಿಪರ್ಯಾಸ. ಎಡಬಿಡದೆ ಸುರಿದ ಮಳೆ ನೀರು ತನ್ನ ಮೂಲ ಸ್ಥಾನ ಹುಡುಕಿ ಹೊರಟ ಪರಿಣಾಮ ಇಂದು ಎಲ್ಲಾ ಕೆರೆಕಟ್ಟೆ ತುಂಬಿವೆ. ನೀರು ಶೇಖರಣೆಯಾದ ಕೆರೆಯ ವಿಸ್ತೀರ್ಣವನ್ನು ಗಮನಿಸಿದ ಹಿರಿಯರು ಕೆರೆ ಒತ್ತುವರಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಕೆರೆ ಹೇಗಿತ್ತು ಎನ್ನುವ ಮಾತುಗಳಾಡಿ ಹಲವಾರು ವರ್ಷದ ಬಳಿಕ ಈ ಬಾರಿ ಮಳೆ ಗಮನಿಸಿದ್ದೇವೆ ಎನ್ನುತ್ತಾರೆ.

ಅಂತರ್ಜಲ ವೃದ್ಧಿಗೆ ಕೆರೆಗಳ ಅವಶ್ಯಕತೆ ಬಗ್ಗೆ ಸುಪ್ರೀಂ ಕೋರ್ಟ್ ತಿಳಿಸಿ ಕೆರೆಗಳ ಒತ್ತುವರಿ ತೆರವಿಗೆ ಆದೇಶಿಸಿದೆ. ಆದರೆ ಈ ಆದೇಶದಂತೆ ಒತ್ತುವರಿ ಕಾರ್ಯವನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ವಿಳಂಬ ಅನುಸರಿಸಿವೆ. ಜಿಲ್ಲೆಯಲ್ಲಿ ಒಟ್ಟು 2060 ಕೆರೆಗಳನ್ನು ಗುರುತಿಸಿ 760 ಕೆರೆಗಳ ಒತ್ತುವರಿ ಕಾರ್ಯ ಕೈಗೊಂಡಿದ್ದೇವೆ ಎನ್ನುತ್ತಾರೆ. ಅಧಿಕಾರಿಗಳ ಮಂಡಗತಿಗೆ ಸಾಥ್ ನೀಡುವ ಜನ ಪ್ರತಿನಿಧಿಗಳು ಸಹ ಪ್ರಜಾ ಪೀಡಕರಾಗಿ ಈಗ ಪರಿಸರ ಪೀಡಕರಾಗಿದ್ದಾರೆ. ಈ ಸಮಯದಲ್ಲಿ ಯಾವುದೇ ಕಾನೂನಾತ್ಮಕ ಕ್ರಮಕ್ಕೆ ಕಾಯದ ವರುಣನ ಆರ್ಭಟಕ್ಕೆ ಅಕ್ರಮ ಸಕ್ರಮ ಆಗುತ್ತಿದೆ. ಕೆರೆಗಳ ಒತ್ತುವರಿ ತೆರವು ಕಾರ್ಯಕ್ಕೆ ರೈತರ ಸಹಕಾರ ಸಹ ಅಗತ್ಯವಿದೆ ಎಂಬುದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಆಶಯವಾಗಿದೆ.
ಕೆರೆಗಳ ಒತ್ತುವರಿಯಿಂದಾಗಿ ಈಗಾಗಲೇ ಅನೇಕ ಹಳ್ಳಿಗಳು ಜಲಾವೃತಗೊಂಡಿವೆ. ಅನೇಕ ಸಮಸ್ಯೆಗಳು ತಲೆದೋರಿದೆ. ಹಾಗಾಗಿ ಕೆರೆ ಒತ್ತುವರಿ ತೆರವು ಕಾರ್ಯಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಸರ್ವೇ ಕಾರ್ಯ ಶೀಘ್ರ ಗತಿಯಲ್ಲಿ ನಡೆದಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಕೆರೆಗಳ ಮಾಲೀಕತ್ವ ಪಡೆದ ಆಯಾ ಇಲಾಖೆಯೇ ಒತ್ತುವರಿ ಜವಾಬ್ದಾರಿ ಹೊರಬೇಕಿದೆ. ಹೇಮಾವತಿ, ಲೋಕೋಪಯೋಗಿ, ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯಿತಿ ಇಲಾಖೆಗಳಿಗೆ ಪತ್ರ ಮುಖೇನ ತಿಳಿಸಲಾಗಿದೆ. ಆದರೆ ನಮ್ಮ ನೋಟಿಸ್ ಗೆ ಯಾವ ಇಲಾಖೆಯಿಂದಲೂ ಉತ್ತರ ಬಂದಿಲ್ಲ. ಒತ್ತುವರಿ ಸಮಯದಲ್ಲಿ ವಾಣಿಜ್ಯ ಬೆಳೆಯ ಮರಗಿಡಗಳನ್ನು ತೆಗೆಯಲು ಅರಣ್ಯ ಇಲಾಖೆ ಅನುಮತಿ ಬೇಕಿಲ್ಲ ಎಂದು ತಹಶೀಲ್ದಾರ್ ಬಿ.ಆರತಿ ತಿಳಿಸಿದರು.