ಗುಂಡಗಲ್ಲು ಕೆರೆ ಕಾಲುವೆ ಹೊಡೆದು ನೀರು ಪೋಲು ಗ್ರಾಮಸ್ಥರ ಆಕ್ರೋಶ

ಕೊಡಿಗೇನಹಳ್ಳಿ:  ಕೆರೆಗೆ ನೀರು  ಹರಿಯಬೇಕಾಗಿದ್ದ  ಕಾಲುವೆ ಹೊಡೆದೋಗಿ ಹಲವು ದಿನಗಳಿಂದ ಕುಮಧ್ವತಿ ನದಿ ನೀರು ಆಂಧ್ರಕ್ಕೆ ಹೋಗುತ್ತಿದ್ದರೂ ಕೂಡ   ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮಗೆ  ಸಂಬಂಧವೇ ಇಲ್ಲವೆಂಬಂತೆ ನಿರ್ಲಕ್ಷ್ಯವಹಿಸಿರುವುದು  ಗುಂಡಗಲ್ಲು ಗ್ರಾಮಸ್ಥರ ಆಕ್ರೋಶಕ್ಕೆ  ಕಾರಣವಾಗಿದೆ. 

ಹೋಬಳಿಯ  ಕಲಿದೇವಪುರ  ಗ್ರಾಮದ ಕುಮಧ್ವತಿ ನದಿಯಿಂದ ಗುಂಡಗಲ್ಲು ಕೆರೆಗೆ ಹಾದು ಹೋಗುವ ಕಾಲುವೆ  ಕಲಿದೇವಪುರ ಬಳಿ ಹೊಡೆದು,  ಕೆರೆಗೆ ಹೋಗಬೇಕಾದ ಅಪಾರ ಪ್ರಮಾಣದ ನೀರು ಮತ್ತೆ ಕುಮಧ್ವತಿ ನದಿಗೆ ಹೋಗಿ ಆಂಧ್ರದತ್ತ ಸಾಗುತ್ತಿವೆ.   ಹಲವು ವರ್ಷಗಳಿಂದ ಕೃಷಿ ಜೊತೆಗೆ ಕುಡಿಯುವ ನೀರಿಗೆ ಜನರು ಹಲವಾರು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿದ್ದಾರೆ. ಆ ಸಮಯದಲ್ಲಿ  ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು  ಚುನಾವಣೆ ಅಥವಾ ಹಲವು ಕಾರ್ಯಕ್ರಮಗಳಲ್ಲಿ  ಆಗದಿರುವ ಕಾರ್ಯಗಳಾದ  ಎತ್ತಿನಹೊಳೆ, ಭದ್ರ ಮೇಲ್ದಂಡೆ ಹಾಗೂ ಇತರೆ ನೀರಾವರಿ ಯೋಜನೆಗಳ  ಬಗ್ಗೆ ಗಂಟೆಗಟ್ಟಲೇ ಭಾಷಣ ಬಿಗಿಯುವುದರ  ಜೊತೆಗೆ ನೀಡಿರುವ ಸುಳ್ಳು ಭರವಸೆಗಳನ್ನು ಕೇಳಿ ಕೇಳಿ ಸಾಕಾಗಿದೆ.  ಇಂತಹ ಸಂದರ್ಭದಲ್ಲಿ  ಈ ಬಾರಿ ನಮ್ಮ ಭಾಗದಲ್ಲಿ ಅಪರೂಪಕ್ಕೆಂಬಂತೆ  ಪ್ರಕೃತಿ  ಕೃಪೆ ತೀರಿದ ಪರಿಣಾಮ   ಉತ್ತಮ ಮಳೆಯಾಗಿ ಹಳ್ಳ-ಕೊಳ್ಳಗಳು, ಕೆರೆ-ಕುಂಟೆಗಳ ಜೊತೆಗೆ  ಬರುಡಾಗಿದ್ದ ನದಿಗಳು ಜೀವನದಿಗಳಂತೆ ಭೋರ್ಗರೆಯುತ್ತಿವೆ. ಇಂತಹ ಸಂದರ್ಭದಲ್ಲಿ ತುಂಬದಿರುವ ಕೆರೆಗಳಿಗೆ ಕಾಲುವೆಗಳನ್ನು ಸರಿಪಡಿಸಿ ನೀರನ್ನು ಸಂರಕ್ಷಿಸದಿರುವುದು  ಅತ್ಯಂತ ನೋವಿನ  ಸಂಗತಿಯಾಗಿದೆ  ಎಂದು ಗುಂಡಗಲ್ಲು ಗ್ರಾಮದ ಆನಂದ್ ಕುಮಾರ್ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ದ    ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಹುತೇಕ ಕೆರೆಗಳ ಜೊತೆಗೆ ನಮ್ಮ ಸುತ್ತಮುತ್ತಲಿನ ಕೆರೆಗಳು  ತುಂಬಿ ಕೋಡಿ ಹರಿಯುತ್ತಿವೆ, ಆದರೆ ನಮ್ಮ ಕೆರೆಗೆ ಕಾಲುವೆ ಇದ್ದರೂ ಕೂಡ ತುಂಬದಿರುವುದು ನಮ್ಮ ಪಾಪವೇನೋ  ಗೊತ್ತಿಲ್ಲ. ಕೆರೆಯ ಬಳಿ ಕೆಲ ಪ್ರಭಾವಿ ಮುಖಂಡರ  ಜಮೀನು ಇರುವುದರಿಂದ ಕೆರೆ ತುಂಬಿದರೆ  ತಮ್ಮ ಜಮೀನು ನೀರಲ್ಲಿ ಮುಳಗುತ್ತದೆ ಎಂಬ ದುರುದ್ದೇಶದಿಂದ  ಈರೀತಿ ಮಾಡುತ್ತಿದ್ದಾರೆಯೋ ತಿಳಿಯುತ್ತಿಲ್ಲ. ಸರ್ಕಾರ ಎತ್ತಿನಹೊಳೆಯಂತಹ ಮತ್ತು ಹಣ ಹೊಡೆಯುವಂತಹ ಇತರೆ ಕಾಮಗಾರಿಗಳಿಗೆ ಕೋಟ್ಯಾಂತರ ಹಣ ಖರ್ಚು ಮಾಡಿ ಪೋಲು ಮಾಡುವ   ಬದಲೂ ಕಾಲುವೆ ಸರಿಪಡಿಸಲು ಕೇವಲ ಸಾವಿರಾರು ರೂ ಖರ್ಚು ಮಾಡಿದರೆ ಸಾಕು ಈ ಭಾಗದ ಸಾಕಷ್ಟು ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ಸರಿಪಡಿಸದಿದ್ದರೇ  ಮುಂದಿನ ದಿನಗಳಲ್ಲಿ ಉಪ ವಿಭಾಗಾಧಿಕಾರಿಗಳ  ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ  ಎಂದು ಗುಂಡಗಲ್ಲು ಗ್ರಾಮದ ಸತ್ಯನಾರಾಯಣರೆಡ್ಡಿ ಎಚ್ಚರಿಕೆ ನೀಡಿದರು. 

ಕೆ.ಶ್ರೀಕಾಂತ್, ಕೆ.ಎಸ್. ಶ್ರೀರಾಮಪ್ಪ, ಅಶ್ವತ್ಥನಾರಾಯಣಪ್ಪ,ಕೆ. ಅಶ್ವತ್ಥಪ್ಪ,  ಮಂಜುನಾಥ್, ಅಶ್ವತ್ಥಪ್ಪ, ನಾಗರಾಜು, ನರಸಿಂಹಮೂರ್ತಿ ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!