ಅಹಿಂದ ನೌಕರರು ಹೆಚ್ಚು ಸಂಘಟಿತರಾಗಬೇಕು : ತಾಪಂ ನಿವೃತ್ತ ಇಓ ನರಸಿಂಹಯ್ಯ

ಗುಬ್ಬಿ: ಹಿಂದುಳಿದ ವರ್ಗಗಳ ನೌಕರರು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಲ್ಲಿ ಸರ್ಕಾರದ ಸವಲತ್ತು ಜೊತೆಗೆ ನಮ್ಮ ಹಕ್ಕು ಕೇಳಬಹುದು ಎಂದು ತಾಪಂ ನಿವೃತ್ತ ಇಓ ನರಸಿಂಹಯ್ಯ ತಿಳಿಸಿದರು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿ ಸಭಾಂಗಣದಲ್ಲಿ ಎಸ್ಸಿ ಎಸ್ಟಿ ಶಿಕ್ಷಕರ ಸಂಘ, ಆದಿ ಜಾಂಬವ ನೌಕರರ ಸಂಘ ಹಾಗೂ ಎಸ್ಸಿ ಎಸ್ಟಿ ಸಮನ್ವಯ ಸಮಿತಿ ಸಹಯೋಗದೊಂದಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಸ್ಸಿ ಎಸ್ಟಿ ನೌಕರರ ಸಂಘ ರಾಜ್ಯದಲ್ಲಿ ಬಲಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆ ಸಂಘಟನೆಯಲ್ಲಿ ಎರಡನೇ ಸ್ಥಾನ ಗಳಿಸಿಕೊಂಡಿದೆ ಎಂದರು.

ಹಿಂದಿನಿಂದಲೂ ತುಳಿತಕ್ಕೆ ಸಿಲುಕಿದ ಸಮುದಾಯವನ್ನು ಬೆಳೆಯಲು ಅಡ್ಡಿ ಪಡಿಸುವವರೇ ಹೆಚ್ಚು. ಈ ಅಸೂಯೆ ಗುಣ ವಿದ್ಯಾವಂತರಲ್ಲಿ ಕಂಡು ಬಂದಿರುವುದೇ ವಿಷಾದನೀಯ ಎಂದ ಅವರು ಮತ್ತಷ್ಟು ತುಳಿತಕ್ಕೆ ಒಳಗಾಗುವ ಮುನ್ನಾ ಸಂಘಟನೆ ಬಲ ಪಡಿಸಿಕೊಳ್ಳಿ. ಗುಬ್ಬಿ ತಾಲ್ಲೂಕಿನಲ್ಲಿ ಸಂಘಟನೆ ಮಾಡುವ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕು. ಈ ಜೊತೆಗೆ ನಿವೃತ್ತ ಎಸ್ಸಿ ಎಸ್ಟಿ ಸಂಘ ಕೂಡಾ ಕಟ್ಟುವ ಆಲೋಚನೆ ನಡೆದಿದೆ ಎಂದರು.

ಆದಿ ಜಾಂಬವ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶಾಂತರಾಜು ಮಾತನಾಡಿ ರಾಜಕೀಯ ಒತ್ತಡದ ಮಧ್ಯೆ ಶುದ್ದ ಹಸ್ತರಾಗಿ ಕೆಲಸ ಮಾಡಿ ಎಲ್ಲಾ ಗ್ರಾಮ ಪಂಚಾಯತಿಗಳ ಅಚ್ಚುಮೆಚ್ಚಿನ ಅಧಿಕಾರಿಯಾದ ನರಸಿಂಹಯ್ಯ ಎಲ್ಲದಕ್ಕೂ ಸ್ಪಂದಿಸುವ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಅನಾರೋಗ್ಯದ ನಡುವೆಯೂ ಕರ್ತವ್ಯ ಗೈರು ಆಗದೆ ತಮ್ಮ ಕೆಲಸ ನಿರ್ವಹಿಸಿದ್ದರು. ಇಂತಹ ಅಧಿಕಾರಿ ವಯೋ ನಿವೃತ್ತಿಯನ್ನು ಗೌರವಿಸುವುದು ನಮ್ಮಗಳ ಕರ್ತವ್ಯ ಎಂದರು.

ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಗಂಗಾಧರಯ್ಯ ಮಾತನಾಡಿ ಸರಳತೆಯ ವ್ಯಕ್ತಿಯಾದ ನರಸಿಂಹಯ್ಯ ಅವರು ಬಿಲ್ ಕಲೆಕ್ಟರ್ ಹುದ್ದೆಯಿಂದ ಎಲ್ಲಾ ಕೆಲಸ ಕಲಿತು ಉನ್ನತ ಸ್ಥಾನ ಗಳಿಸಿದ್ದರು. ಈ ನಿಟ್ಟಿನಲ್ಲಿ ಬಡವರ ಪಾಡು ಅರಿತು ಜನಮುಖಿ ಕೆಲಸ ಮಾಡಿದ್ದಾರೆ. ಅವರನ್ನು ಸನ್ಮಾನಿಸಿ ಗೌರವಿಸಲು ಎಲ್ಲಾ ನೌಕರರು ಮುಂದಾಗಿದ್ದಾರೆ. ಇದೇ ಅವರ ವ್ಯಕ್ತಿತ್ವ ತಿಳಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತಿಯಾದ ತಾಪಂ ಇಓ ನರಸಿಂಹಯ್ಯ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.

ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಕುಮಾರಸ್ವಾಮಿ, ಕಾಳಿದಾಸ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಎಸ್ಸಿ ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ಅಮ್ಮನಘಟ್ಟ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಮಹದೇವಯ್ಯ, ಸುಬ್ರಹ್ಮಣ್ಯ, ನರಸಿಂಹಮೂರ್ತಿ, ನಾಗಭೂಷಣ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!