ಗುಬ್ಬಿ: ಬಲಿಷ್ಠ ಜಾತಿ ಪದ್ಧತಿ ನಡುವೆ ತುಳಿತಕ್ಕೆ ಒಳಗಾಗುವ ದೀನ ದಲಿತರ ಪರ ನಿಲ್ಲುವ ಕೆಲಸ ಮಾಡುವ ದಲಿತ ಸಂಘರ್ಷ ಸಮಿತಿ ನ್ಯಾಯಯುತ ಹೋರಾಟಕ್ಕೆ ಸದಾ ಕಾಲ ಬದ್ದವಾಗಿರುತ್ತದೆ ಎಂದು ದಸಂಸ ನೂತನ ತಾಲ್ಲೂಕು ಸಂಚಾಲಕ ಜಿ.ಎನ್. ಪಾಂಡುರಂಗಯ್ಯ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ನಂತರ ಮಾತನಾಡಿದ ಅವರು ಸಮಿತಿಯಲ್ಲಿ ಎರಡು ಬಣಗಳು ಗೊಂದಲ ಮೂಡಿಸಿವೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ನಾಲ್ಕೈದು ಸಭೆ ನಡೆಸಿ ಒಮ್ಮತದ ತೀರ್ಮಾನ ಕೈಗೊಂಡು ಒಂದೇ ಸಮಿತಿ ತಾಲ್ಲೂಕಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದರು.
ದಸಂಸ ಎರಡು ಬಣಗಳ ಈಗಾಗಲೇ ತಾಲ್ಲೂಕಿನಲ್ಲಿ ಈಗಾಗಲೇ ಓಡಾಡುತ್ತಿರುವ ಚೇಳೂರು ಶಿವನಂಜಪ್ಪ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ. ಒಂದು ಸಂಘಟನೆ ಇದ್ದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲು ಸಾಧ್ಯ. ಹಾಗಾಗಿ ಒಂದು ಸಮಿತಿಯಲ್ಲಿ ಎಲ್ಲರೂ ಗುರುತಿಸಿಕೊಳ್ಳಲು ಸೂಚಿಸಲಾಗಿದೆ. ಬಣಗಳ ರೂಪಿಸಿದ್ದಲ್ಲಿ ದಲಿತರೇ ಅವರಿಗೆ ಪಾಠ ಕಲಿಸುತ್ತಾರೆ ಎಂದರು.
ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಪ್ರೊ.ಬಿ.ಕೃಷ್ಣಪ್ಪ ಅವರ ದಲಿತ ಸಂಘರ್ಷ ಸಮಿತಿ ದಲಿತರ ಪರ ನಿಲ್ಲಲ್ಲಿದೆ. ಗುಬ್ಬಿ ತಾಲ್ಲೂಕಿನಲ್ಲಿ ಎರಡು ಬಣ ಈಗಾಗಲೇ ಗುರುತಿಸಿಕೊಳ್ಳಲಾಗಿತ್ತು. ಒಗ್ಗೂಡಿ ಒಂದೇ ಸಮಿತಿ ರಚನೆ ಮಾಡಲಾಗಿ ಸರ್ವಾನುಮತದಿಂದ ಪಾಂಡುರಂಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಮತ್ತೊಂದು ಗುಂಪು ರಚನೆಗೆ ಅವಕಾಶ ನೀಡದೆ ಒಂದು ಸಮಿತಿ ಕೆಲಸ ಮಾಡಲಿದೆ. ಯಾರೇ ಸಮಿತಿಯ ವಿರುದ್ಧ ಹೋದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಿತಿ ತಾಲ್ಲೂಕು ಸಂಘಟನಾ ಸಂಚಾಲಕ ನಟರಾಜು, ಖಜಾಂಚಿ ನರೇಂದ್ರ ಸೇರಿದಂತೆ ಹೋಬಳಿ ಮಟ್ಟದ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಹಿರಿಯ ದಲಿತ ಮುಖಂಡರಾದ ಬಿ.ವಿ.ರತ್ನಕುಮಾರ್, ಕಿಟ್ಟದಕುಪ್ಪೆ ನಾಗರಾಜು, ನಾಗಭೂಷಣ, ಕಲ್ಲೂರು ರವಿ, ಹರಿವೇಸಂದ್ರ ಕೃಷ್ಣಪ್ಪ, ಹೊಸಹಳ್ಳಿ ಚೇತನ್, ಕಡಬ ಶಂಕರ್ ಇತರರು ಇದ್ದರು.