ತುಮಕೂರು.:ಒಕ್ಕಲಿಗ ಸಮುದಾಯದ ಅಸ್ಥಿತ್ವಕ್ಕೆ ಧಕ್ಕೆಯಾಗುವಂತಹ ಪ್ರಕ್ರಿಯೆಗಳು ನಡೆದಾಗ ದ್ವನಿ ಎತ್ತುವ ಕೆಲಸವನ್ನು ಇಂದು ಮಾಡುತ್ತಿದ್ದು,ಮುಂದೆಯೂ ಮಾಡಲಿದ್ದೇವೆ ಎಂದು ಪಟ್ಟನಾಯಕನಹಳ್ಳಿಯ ಶ್ರೀನಂಜಾವಧೂತ ಸ್ವಾಮೀಜಿಗಳು ತಿಳಿಸಿದ್ದಾರೆ.
ನಗರದ ಕುಂಚಟಿಗ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಸಮಿತಿ, ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ(ರಿ), ತುಮಕೂರು ಜಿಲ್ಲೆಯ ಸಮಸ್ತ ಒಕ್ಕಲಿಗರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಕೆಂಪೇಗೌಡರ 512ನೇ ಜನ್ಮ ಜಯಂತಿ ಹಾಗೂ ಪ್ರತಿಭಾಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ದ್ವನಿ ಇಲ್ಲದೆ ಈ ಸಮಾಜ ಸಾಯುವಂತಾಗಬಾರದು. ಹಾಗಾಗಿ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಸಮಾಜ ಒಡೆಯುವಂತಹ ಕೆಲಸಗಳು ಬಹಳಷ್ಟು ನಡೆಯುತ್ತಿವೆ.ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯವನ್ನು,ಉಪಪಂಗಡಗಳ ಹೆಸರಿನಲ್ಲಿ ಒಡೆಯವ ವ್ಯವಸ್ಥಿತ ಕೆಲಸ ನಡೆಯುತ್ತಿದೆ.ಒಕ್ಕಲಿಗ ಎಂಬುದು ಒಂದು ಆಲದ ಮರವಿದ್ದಂತೆ,ಈ ಮರದ ಅಡಿಯಲ್ಲಿ ಎಲ್ಲಾ ಉಪಪಂಗಡಗಳು ಒಗ್ಗೂಡಿದರೆ ಹೆಚ್ಚು ಬಲಶಾಲಿ ಯಾಗಲು ಸಾಧ್ಯ.ಸಾಧ್ಯವಾದರೆ ಸಮುದಾಯಕ್ಕೆ ಸಹಾಯ ಮಾಡಿ,ಆದರೆ ಎಂದಿಗೂ ಸಮುದಾಯ ಒಡೆಯುವವರಿಗೆ ಸಹಾಯ ಮಾಡಬೇಡಿ ಎಂದು ಶ್ರೀನಂಜಾವಧೂತ ಸ್ವಾಮೀಜಿ ಕಿವಿ ಮಾತು ಹೇಳಿದರು.
ಶಿಕ್ಷಣ ಪಡೆದವರನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಒಂದು ವಿದ್ಯೆ ಪಡೆದ ಸುಶಿಕ್ಷಿತ ನಾಗರಿಕರು, ಇನ್ನೊಂದು ಶಿಕ್ಷಣ ಪಡೆದ ಆನಾಗರಿಕರು.ಹಾಗಾಗಿ ಇಂದು ಪ್ರತಿಭಾಪುರಸ್ಕಾರಕ್ಕೆ ಭಾಜನರಾಗುತ್ತಿರುವ ಎಲ್ಲಾ ಮಕ್ಕಳು ಸುಶಿಕ್ಷಿತ ನಾಗರಿಕರಾಗಿ ಭವಿಷ್ಯದಲ್ಲಿ ಸಮಾಜಕ್ಕೆ ಒಳ್ಳೆಯ ಹೆಸರು ತನ್ನಿ.ತಂದೆ, ತಾಯಿಗಳನ್ನು ಗೌರವಿಸುವುದರ ಜೊತೆಗೆ, ಸಮುದಾಯದ ಅಭಿವೃದ್ದಿಗೂ ನಿಮ್ಮ ಸಹಕಾರ ಇರಲಿ ಎಂದು ಸ್ವಾಮೀಜಿ ಮಕ್ಕಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಶಾಖಾ ಮಠದ ಶ್ರೀಮಂಗಳನಾಥಸ್ವಾಮೀಜಿ ಮಾತನಾಡಿ,ಒಕ್ಕಲಿಗ ಸಮುದಾಯ ರಾಜಕೀಯ,ಆಡಳಿತ,ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯು ಮಂಚೂಣಿಯಲ್ಲಿದೆ.ಒಳ್ಳೆಯ ಹುದ್ದೆ, ಅಧಿಕಾರ ಸಿಕ್ಕಾಗ ಸಮಾಜದ ಬಡವರಿಗೆ ನೆರವಾಗಿ,ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಗುಣವಿದ್ದ ಕೆಂಪೇಗೌಡರ ಆದರ್ಶ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ರಾಜ್ಯ ಒಕ್ಕಲಿಗ ಸಂಘದ ಕಾರ್ಯದರ್ಶಿ ಕೋನಪ್ಪರೆಡ್ಡಿ ಮಾತನಾಡಿ,ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರು ಸಂವಿಧಾನದ ಆಶಯವಾದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವವನ್ನು ಅಂದೇ ಅಳವಡಿಸಿಕೊಂಡು, ಸಮುದಾಯಗಳ ಕುಲಕಸುಬಗಳ ಆಧಾರಿತ ಪೇಟೆಗಳನ್ನು ನಿರ್ಮಾಣ ಮಾಡುವ ಮೂಲಕ ಎಲ್ಲರನ್ನು ಒಳಗೊಳ್ಳುವ ವಿಶಾಲ ಮನೋಭಾವವನ್ನು ಹೊಂದಿದ್ದರು.ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿರುವ ಒಕ್ಕಲಿಗರ ಸಂಘ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ಎಲ್ಲಾ ಸಮುದಾಯಗಳಿಗೂ ಶೇ25ರ ರಿಯಾಯಿತಿ ನೀಡಿದ್ದೇವೆ.ಸಮಾಜದ ಒಗ್ಗಟ್ಟಿನಿಂದಾಗಿ ರಾಜ್ಯಕ್ಕೆ ೬ ಜನ ಮುಖ್ಯಮಂತ್ರಿಗಳು,ಓರ್ವ ಪ್ರಧಾನಿಯನ್ನು ನೀಡಿದ ಕೀರ್ತಿ ಒಕ್ಕಲಿಗ ಸಮುದಾಯಕ್ಕೆ ಸಲ್ಲುತ್ತದೆ.ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆಗಾಗಿ 10 ಸಾವಿರದಿಂದ 20 ಲಕ್ಷದವರಗೆ ರಿಯಾಯಿತು ನೀಡಲಾಗುತ್ತಿದೆ.ಹೊಸದಾಗಿ ತುಮಕೂರು,ಹಾಸನ, ಚಿಕ್ಕಬಳ್ಳಾ ಪುರ ಹಾಗೂ ಮಂಡ್ಯದಲ್ಲಿ ಹಾಸ್ಟಲ್ ತೆರೆಯುತಿದ್ದು, ಹೊಸ ಕಾಲೇಜುಗಳನ್ನು ನೀಡಲಾಗಿದೆ.ರಾಜ್ಯದ ವಿವಿಧೆಡೆಗಳಲ್ಲಿ ಹಾಸ್ಟಲ್ ಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ,ಪ್ರತಿಭಾಪುರಸ್ಕಾರವೆಂಬುದು ಮಕ್ಕಳ ಪ್ರೋತ್ಸಾಹಿಸಲು ಒಂದು ಮಹತ್ವದ ವೇದಿಕೆ.ಸಂಘಟಿತರಾಗಿ ಜಿಲ್ಲೆಯಲ್ಲಿ ರಾಜಕೀಯವಾಗಿ ಬೆಳೆಯಲು ಅಗತ್ಯವಿರುವಕ್ರಮ ವಹಿಸೋಣ.ನಮ್ಮ ಶಕ್ತಿ ಪ್ರದರ್ಶನ ಮಾಡುವ ಮೂಲಕ 1983-84ರಲ್ಲಿ ಮೀಸಲಾತಿ ರದ್ದು ಪಡಿಸಿದ ಸಂದರ್ಭದಲ್ಲಿ ನಡೆಸಿದ ಹೋರಾಟ ಅವಿಸ್ಮರಣಿಯ.ಆ ನಿಟ್ಟಿನಲ್ಲಿ ಹೋರಾಟ ಮತ್ತೊಮ್ಮೆ ನಡೆಯಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ,ಒಕ್ಕಲಿಗ ಸಮುದಾಯದಲ್ಲಿ ಪ್ರತಿಭಾವಂತರ ಕೊರತೆಯಿಲ್ಲ. ರೈತರ ಮಕ್ಕಳಾಗಿದ್ದರು ಕಷ್ಟಪಟ್ಟು ಓದಿ ಶೇ 90ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದಿರುವುದನ್ನು ನೋಡಿದಂತೆ ಸಂತಸವಾಗುತ್ತದೆ.ಇಂತಹ ಮಕ್ಕಳನ್ನು ಸಮಾಜದ ಆಸ್ತಿಯಾಗಿಸುವ ನಿಟ್ಟಿನಲ್ಲಿ ಮುಂದೆಯೂ ಪ್ರತಿಭಾಪುರಸ್ಕಾರ ನಡೆಸಲಿದ್ದೇವೆ.ಜಿಲ್ಲೆಯಲ್ಲಿ ಒಂದು ಒಕ್ಕಲಿಗರ ಸಮುದಾಯ ಭವನ ನಿರ್ಮಿಸುವ ಗುರಿ ಇದ್ದು, ನಿಮ್ಮೆಲ್ಲರ ಸಹಕಾರ ಇದ್ದರೆ ಶೀಘ್ರದಲ್ಲಿಯೇ ಆದು ನೆರವೇರಲಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಬಿ.ಜಿ.ಎಸ್ ವೃತ್ತದಿಂದ ಕೆಂಪೇಗೌಡರ ಭಾವಚಿತ್ರವನ್ನು ಚಿನ್ನಲೇಪಿತ ರಥದಲ್ಲಿರಿಸಿ, ಡೊಳ್ಳು, ಚಂಡೆ,ಪಟಕುಣಿತ, ಪೂಜಾಕುಣಿತ, ಕೀಲು ಕುದುರೆ,ವೀರಗಾಸೆ ಸೇರಿದಂತೆ 20ಕ್ಕು ಹೆಚ್ಚು ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ಎಂ.ಜಿ.ರಸ್ತೆ, ಹೊರಪೇಟೆ ಮುಖ್ಯರಸ್ತೆ ಮೂಲಕ ಕುಂಚಟಿಗ ಭವನಕ್ಕೆ ತರಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಅಶ್ವಥಕುಮಾರ್ ವಹಿಸಿದ್ದರು. ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕರಾದ ಹನುಮಂತರಾಯಪ್ಪ,ಲೋಕೇಶ್ ಡಿ.ನಾಗರಾಜಯ್ಯ,ನೌಕರರ ಸಂಘದ ಉಪಾಧ್ಯಕ್ಷ ಬೆಳ್ಳಿ ಲೋಕೇಶ್, ಆರ್.ಕಾಮರಾಜು,ಮುರುಳೀಧರ ಹಾಲಪ್ಪ,ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಗಿರೀಶ್,ಕೆ.ಬಿ.ಬೋರೇಗೌಡ, ಹೆಚ್.ನಿಂಗಪ್ಪ, ಪಾಲಿಕೆ ಸದಸ್ಯರಾದ ಜೆ.ಕುಮಾರ್, ಶ್ರೀನಿವಾಸ್, ಧರಣೇಂದ್ರಕುಮಾರ್,ಶ್ರೀಮತಿ ವೀಣಾ ಮನೋಹರ, ಒಕ್ಕಲಿಗ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.