ಸಿದ್ಧಿವಿನಾಯಕ ಪೆಂಡಲ್ ನಲ್ಲಿ ಚಿಣ್ಣರ ಕಲರವ

ತುಮಕೂರು: ಇಲ್ಲಿನ ವಿನಾಯಕನಗರದ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಲಿಯಲ್ಲಿ ಏರ್ಪಡಿಸಿರುವ 46ನೇ ವರ್ಷದ 35 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾನುವಾರ ಶಾಲಾ ಮಕ್ಕಳಿಗೆ ಸ್ಥಳದಲ್ಲೇ ಗಣಪತಿ ಹಾಗೂ ನಂದಿನಿ ಹಾಲಿನ ಲಾಂಚನವಿರುವ ಚಿತ್ರ ಬರೆಯುವ ಸ್ಪರ್ಧೆಯನ್ನು ಮಲ್ಲಸಂದ್ರದ ತುಮಕೂರು ಸಹಕಾರಿ ಹಾಲು ಒಕ್ಕೂಟದ ಪ್ರಾಯೋಜಕತ್ವದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಲಿ ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಸಿದ್ಧಿವಿನಾಯಕ ಸೇವಾ ಮಂಡಲಿ ಆವರಣದಲ್ಲಿ ಚಿಣ್ಣರ ಕಲರವ. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಕ್ಕಳು ಬಿಳಿಯ ಹಾಳೆಯ ಮೇಲೆ ಗಣಪತಿ ಹಾಗೂ ನಂದಿನಿ ಹಾಲಿನ ಲಾಂಛನದ ಚಿತ್ತಾರಗಳನ್ನು ಮೂಡಿಸುತ್ತಾ, ಆ ಮೂಲಕ ತಮ್ಮ ಚಿತ್ರಕಲೆಯನ್ನು ಅಭಿವ್ಯಕ್ತಿಗೊಳಿಸಿ ಸಂಭ್ರಮಿಸಿದರು.
ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಈ ಸ್ಪರ್ಧೆಯ ವೇದಿಕೆಗೆ ಅದ್ಭುತ ಸ್ಪಂದನೆ ದೊರೆಯಿತು.
ತುಮಕೂರು ನಗರವೂ ಸೇರಿದಂತೆ ಸುತ್ತಮುತ್ತಲ ತಾಲ್ಲೂಕುಗಳಿಂದಲೂ ಸುಮಾರು 3೦೦ಕ್ಕೂ ಹೆಚ್ಚು ಶಾಲಾ ಮಕ್ಕಳು ಗಣಪತಿ ಮತ್ತು ನಂದಿನಿ ಹಾಲಿನ ಲಾಂಛನದ ಚಿತ್ರಗಳನ್ನು ಬಿಡಿಸುವ ಮೂಲಕ ಕಲಾ ಪ್ರದರ್ಶನ ಮಾಡಿದರು.
1 ರಿಂದ 4ನೇ ತರಗತಿ, 5 ರಿಂದ 7ನೇ ತರಗತಿ ಮತ್ತು 8 ರಿಂದ 1೦ನೇ ತರಗತಿ ಮಕ್ಕಳಿಗಾಗಿ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಬೆಳಿಗ್ಗೆ 9ಕ್ಕೆ ನೋಂದಣಿ ಮಾಡಿದ ಶಾಲಾ ಮಕ್ಕಳು ಶ್ರೀ ಸಿದ್ಧಿವಿನಾಯಕ ಸೇವಾ ಮಂಡಲಿಯ ಆವರಣದಕ್ಕೆ ಆಗಮಿಸಿ ಸ್ಪರ್ಧೆಗೆ ಉತ್ಸಾಹ ತೋರಿದರು. ಮಕ್ಕಳೊಂದಿಗೆ ಪಾಲಕರು ಸಹ ಜತೆಗೂಡಿ ಮಕ್ಕಳಿಗೆ ಪ್ರೋತ್ಸಾಹ ತುಂಬಿದರು. ಚಿತ್ರ ಬಿಡಿಸುವ ಸ್ಪರ್ಧೆಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಮಕ್ಕಳು ಅತ್ಯುತ್ಸಾಹದಿಂದ ಗಣಪತಿ ಹಾಗೂ ನಂದಿನಿ ಹಾಲಿನ ಲಾಂಛನದ ಚಿತ್ರಗಳನ್ನು ಬಿಡಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಚಿತ್ರ ಬಿಡಿಸಲು ಪೂರಕವಾದ ಬಿಳಿ ಹಾಳೆ, ಸ್ಕೆಚ್ ಪೆನ್, ಪೆನ್ಸಿಲ್, ರಬ್ಬರ್‌ನಂತಹ ವಸ್ತುಗಳನ್ನು ಒದಗಿಸಿದ್ದಲ್ಲದೇ, ನಂದಿನಿ ಉತ್ಪನ್ನಗಳಾದ ಹಾಲು ಮತ್ತು ಪೇಡ ವಿತರಿಸಲಾಯಿತು. ಸ್ಪರ್ಧೆಯ ಆನಂತರ ಭಾಗವಹಿಸಿದ ಎಲ್ಲ ಮಕ್ಕಳಿಗೆ ಮತ್ತು ಪಾಲಕರಿಗೆ ಉಪಾಹಾರ ಮತ್ತು ಐಸ್‌ಕ್ರೀಂ ವ್ಯವಸ್ಥೆ ಸಹ ಮಾಡಲಾಗಿತ್ತು.
ಚಿತ್ರ ಬಿಡಿಸುವ ಸ್ಪರ್ಧೆಗೂ ಮುನ್ನ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಂಸ್ಕೃತಿಕ ಕಾರ್ಯಕ್ರಮ ಉಪಸಮಿತಿಯ ಅಧ್ಯಕ್ಷ ಟಿ.ಹೆಚ್.ಪ್ರಸನ್ನಕುಮಾರ್, ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣಪತಿ ಹಾಗೂ ನಂದಿನಿ ಹಾಲಿನ ಲಾಂಛನವಿರುವ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದು, ಸುಮಾರು 3೦೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುವುದು ಸಂತಸ ತಂದಿದೆ ಎಂದರು.
ಈ ಸ್ಪರ್ಧೆಯಲ್ಲಿ ಅತ್ಯತ್ಸಾಹದಿಂದ ಶಾಲಾ ಮಕ್ಕಳು ಭಾಗವಹಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸೆಪ್ಟೆಂಬರ್ 22 ರಂದು ಸಂಜೆ 53೦ಕ್ಕೆ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರತಿ ವಿಭಾಗದಲ್ಲಿ ನಾಲ್ಕು ಮಂದಿಯಂತೆ 12ಮಂದಿಗೆ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಮಲ್ಲಸಂದ್ರ ತುಮಕೂರು ಸಹಕಾರಿ ಹಾಲು ಒಕ್ಕೂಟ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ವಿದ್ಯಾನಂದ್ ಮಾತನಾಡಿ, ಪ್ರತಿವರ್ಷ ಶ್ರೀ ಸಿದ್ದಿವಿನಾಯಕ ಸೇವಾ ಮಂಡಲಿಯಲ್ಲಿ ನಡೆಯಲಿರುವ ಗಣೇಶೋತ್ಸವ ಸಮಾರಂಭದಲ್ಲಿ ನಮ್ಮ ಸಹಕಾರಿ ಒಕ್ಕೂಟದ ಪ್ರಾಯೋಜಕತ್ವದಲ್ಲಿ ಶಾಲಾ ಮಕ್ಕಳಿಗೆ ಗಣಪತಿ ಮತ್ತು ನಂದಿನಿ ಹಾಲಿನ ಲಾಂಛನದ ಚಿತ್ರ ಬಿಡಿಸುವ ಸ್ಪರ್ಧೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು. ತಮಗೆ ಸಿಕ್ಕಿದ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ದಿವಿನಾಯಕ ಸೇವಾ ಮಂಡಲಿ ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ಧರಾಮಯ್ಯ ವಹಿಸಿದ್ದರು. ತುಮಕೂರು ಸಹಕಾರಿ ಹಾಲು ಒಕ್ಕೂಟದ ಮಾರುಕಟ್ಟೆ ವಿಭಾಗದ ಸಹಾಯಕ ವ್ಯವಸ್ಥಾಪಕ ನರಸಿಂಹೇಗೌಡ, ಶ್ರೀ ಸಿದ್ದಿವಿನಾಯಕ ಸೇವಾ ಮಂಡಲಿ ನಿರ್ದೇಶಕರಾದ ಕೆ.ನರಸಿಂಹಮೂರ್ತಿ, ಲಿಂಗಪ್ಪ, ಡಾ.ಎನ್.ವೆಂಕಟೇಶ್, ಎಂ.ಎನ್. ಉಮಾಶಂಕರ್, ಡಾ.ಅನಸೂಯ, ರೇಣುಕಾ ಪರಮೇಶ್, ಸಾಂಸ್ಕೃತಿಕ ಕಾರ್ಯಕ್ರಮದ ಉಪಸಮಿತಿಯ ನಾಗರಾಜು (ಎಸ್‌ವಿಎಸ್), ಎಂ.ಎನ್.ಚಲುವರಾಜು ಸೇರಿದಂತೆ ಎಲ್ಲಾ ನಿರ್ದೇಶಕರು, ಶಾಲಾ ಮಕ್ಕಳು, ಪೋಷಕರು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!