ಗುಬ್ಬಿ: ಕೋರೋನ ಹಿನ್ನಲೆ ಕಳೆದೆರಡು ವರ್ಷದಿಂದ ನಿಂತಿದ್ದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಮರು ಚಾಲನೆ ದೊರಕಿದೆ. ಸುಭೀಕ್ಷ ಮಳೆ ಜೊತೆಗೆ ಗಣೇಶ ಆಚರಣೆ ಪ್ರತಿ ಗ್ರಾಮದಲ್ಲಿ ಏಕತೆ, ಜಾತ್ಯತೀತತೆ ಮೂಡಿಸುತ್ತಿರುವುದು ಸಂತಸದ ವಿಚಾರ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗಣೇಶ ವಿಸರ್ಜನಾ ಮಹೋತ್ಸವ ಹಾಗೂ ಸಂಗೀತ ರಸ ಮಂಜರಿಗೆ ಚಾಲನೆ ನೀಡಿ ಮಾತನಾಡಿದ ಅವರು ಧಾರ್ಮಿಕ ಚಟುವಟಿಕೆ ರೈತಾಪಿ ವರ್ಗಕ್ಕೆ ಶ್ರೀ ರಕ್ಷೆಯಾಗಿದೆ ಎಂದರು.
ಗಣೇಶ ಹಬ್ಬಕ್ಕೆ ಮುನ್ನವೇ ಎಲ್ಲಾ ಕೆರೆಕಟ್ಟೆಗಳು ತುಂಬಿ ತುಳುಕಿರುವುದು ಜನರಲ್ಲಿ ಸಂತೋಷ ತಂದಿದೆ. ಕೃಷಿ ಚಟುವಟಿಕೆ ಜೊತೆ ಗಣೇಶ ಹಬ್ಬ ಆಯೋಜಿಸಿ ಎರಡು ವರ್ಷದ ಬ್ರೇಕ್ ಗೆ ಮುಕ್ತಿ ನೀಡಿದ್ದಾರೆ. ಈ ಬಾರಿ ಇಡೀ ತಾಲ್ಲೂಕಿನ ಎಲ್ಲಾ ಗ್ರಾಮದಲ್ಲಿ ಯುವಕರು ಗಣೇಶ ಉತ್ಸವ ನಡೆಸಿದ್ದಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಗ್ರಾಪಂ ಮಾಜಿ ಸದಸ್ಯ ಗಂಗರೇವಣ್ಣ, ಕಾಂತರಾಜು, ಕುಮಾರ್, ಬಸವರಾಜು, ರವಿಕುಮಾರ್ ಇತರರು ಇದ್ದರು.