ಗುಬ್ಬಿ: ಸೋಲು ಗೆಲುವು ಸ್ಪರ್ಧಾತ್ಮಕ ಮನೋಭಾವದಲ್ಲಿ ಸ್ವೀಕರಿಸಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ ಅತೀ ಮುಖ್ಯ. ಸೋಲೇ ಗೆಲುವಿನ ಸೋಪಾನ ಎನ್ನುವ ಹಾಗೇ ಪ್ರಯತ್ನ ನಿರಂತರವಾಗಿದ್ದಲ್ಲಿ ಖಂಡಿತಾ ಜಯ ಸಿಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಕ್ಕಳಿಗೆ ಹುರಿದುಂಬಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿಭಾಗ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತೆಗೆಯುವ ಈ ಕ್ರೀಡಾಕೂಟ ಉತ್ತಮ ಕ್ರೀಡಾಪಟುಗಳ ತಯಾರಿಕೆಗೆ ಸೋಪಾನ ಆಗಲಿದೆ ಎಂದರು.
ದೈಹಿಕ ಮತ್ತು ಮಾನಸಿಕ ಸ್ಥೈರ್ಯವನ್ನು ತುಂಬುವ ಕ್ರೀಡೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣ. ಕ್ರೀಡೆ ಮಕ್ಕಳ ಉಜ್ವಲ ಭವಿಷ್ಯ ಕೂಡಾ ರೂಪಿಸುತ್ತದೆ. ಆಟದ ಮೂಲಕವೇ ಬದುಕು ಕಟ್ಟಿಕೊಂಡ ಹಲವಾರು ಮಂದಿ ನಿದರ್ಶನವಾಗಿದ್ದಾರೆ. ಸರ್ಕಾರ ಕೂಡಾ ಕ್ರೀಡಾಪಟುಗಳಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ಮೀಸಲಾತಿ ಕಲ್ಪಿಸಿದೆ. ಅದರ ಬಳಕೆಗೆ ಮಕ್ಕಳು ನಿತ್ಯ ಅಭ್ಯಾಸ ಮೂಲಕ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಹೋಬಳಿ ಮಟ್ಟದ ಮೂಲಕ ಅರಳುವ ಮಕ್ಕಳ ಪ್ರತಿಭೆಯನ್ನು ಸೂಕ್ತ ತರಬೇತಿ ನೀಡಿದ್ದಲ್ಲಿ ದೇಶಕ್ಕೆ ಗೌರವ ತರುವ ಕ್ರೀಡಾಳುಗಳ ಉತ್ಪತ್ತಿಯಾಗಲಿದೆ. ಸ್ಕೌಟ್ ಅಂಡ್ ಗೈಡ್ಸ್ ಮೂಲಕ ಮಕ್ಕಳ ಪ್ರತಿಭೆ ಗುರುತಿಸುವ ಕೆಲಸ ಮಾಡಲು ಅಧ್ಯಕ್ಷನಾಗಿ ಎಲ್ಲಾ ಸಿದ್ಧತೆ ನಡೆಸಿದ್ದೇವೆ ಎಂದ ಅವರು ಒಟ್ಟು 1200 ವಿಧ್ಯಾರ್ಥಿಗಳು 58 ಶಾಲೆಯಿಂದ ಆಗಮಿಸಿದ್ದಾರೆ. 12 ಗುಂಪು ಆಟಗಳು, 14 ವೈಯಕ್ತಿಕ ಆಟಗಳು ನಡೆಯಲಿದ್ದು ಕ್ರೀಡಾಪಟುಗಳಿಗೆ ಗೆಲುವು ಸಿಗಲಿ ಎಂದು ಹಾರೈಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಕಿ ಚಂದ್ರಮ್ಮ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಪಪಂ ಸದಸ್ಯ ಶಶಿಕುಮಾರ್ ಶಾಲಾ ಮಕ್ಕಳ ಪಥ ಸಂಚಲನಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಟಿ.ಪ್ರಕಾಶ್, ಭೈರಯ್ಯ, ಶಿವಣ್ಣ, ಕುಮಾರಸ್ವಾಮಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವರಾಮೇಗೌಡ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ರವೀಶ್, ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಕರಿಯಣ್ಣ, ಕಾರ್ಯದರ್ಶಿ ಶಿವಪ್ರಸಾದ್ ಇತರರು ಇದ್ದರು.