ಮಕ್ಕಳು ಮಾನಸಿಕ ಮತ್ತು ಧೈಹಿಕವಾಗಿ ಸದೃಢರಾಗಬೇಕು : ಹಿರಿಯ ಸೀವಿಲ್ ನ್ಯಾ.ನೂರುನ್ನೀಸ

ತುಮಕೂರು : ಮನುಷ್ಯ ಆರೋಗ್ಯವಂತನಾಗಿರಲು ಕೇವಲ ಪೌಷ್ಟಿಕ ಆಹಾರ ಇದ್ದರೆ ಸಾಲದು, ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಸಹ ಸದೃಢನಾಗಿರಬೇಕು. ಅಂತೆಯೇ ಇಂದಿನ ಮಕ್ಕಳು ಸಹ ಒಳ್ಳೆಯ ಅಲೋಚನೆಗಳನ್ನು, ಮಾನವೀಯ ಮೌಲ್ಯಗಳನ್ನು, ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನೀಸ ಅವರು ತಿಳಿಸಿದರು.

ಜಿಲ್ಲಾ ಬಲಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಹಭಾಗಿತ್ವದಲ್ಲಿ ಪೌಷ್ಟಿಕ ಆಹಾರ ಕುರಿತು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಾಗಾರ’ ಹಾಗೂ ಪೋಷಣ್ ಮಾಸಾಚಾರಣೆ ಮಾತೃ ವಂದನ ಸಪ್ತಾಹ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು, ಮಾನಸಿಕ ಸ್ಥಿತಿ ಹಾಗೂ ಆಹಾರಗಳು ಉತ್ತಮವಾಗಿರಬೇಕು. ಮನೆಯಲ್ಲಿ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಂಡು, ಮಾನಸಿಕ ಮತ್ತು ದೈಹಿಕ ಆರೋಗ್ಯಕರ ಸಮಾಜವನ್ನು ಸೃಷ್ಟಿಸಬೇಕಾಗಿದೆ ಎಂದರಲ್ಲದೆ, ಮಕ್ಕಳು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು, ತಾಳ್ಮೆ, ಮಾನವೀಯ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಇಂದಿನ ಮಕ್ಕಳು ದೈಹಿಕ ಹಾಗೂ ಮಾನಸಿಕ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಹೆಣ್ಣು ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರು ಪೌಷ್ಟಿಕಾಂಶದಿಂದ ಕೂಡಿದ ಆಹಾರ ಸೇವನೆ ಮಾಡುವುದರ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಇಂದಿನ ಮಕ್ಕಳು ಪ್ರೀತಿ ಪ್ರೇಮಕ್ಕೆ ಒಳಗಾಗಿ ತಮ್ಮ ಶಿಕ್ಷಣ ಮತ್ತು ಬಾಲ್ಯವನ್ನು ಸರಿಯಾಗಿ ಅನುಭವಿಸುತ್ತಿಲ್ಲ. ಮಕ್ಕಳನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸಲೆಂದೇ ಸರ್ಕಾರ ಹಲವು ಕಾಯ್ದೆಗಳನ್ನು ಜಾರಿಗೆ ತಂದಿರುವುದರ ಜೊತೆಗೆ, ಮಕ್ಕಳ ರಕ್ಷಣೆಗೆಂದೇ ಫೋಕ್ಸೋ ಕಾಯ್ದೆಯನ್ನು ಜಾರಿಗೆ ತಂದಿದೆ. ಫೋಕ್ಸೋ ಕಾಯ್ದೆಯಲ್ಲಿ ಒಮ್ಮೆ ಸಿಲುಕಿ ಕೊಂಡರೆ ಹೊರ ಬರುವುದು ತುಂಬಾ ಕಷ್ಟಕರವಾಗಿರುವುದರಿಂದ ಮಕ್ಕಳು ತಮ್ಮ ಆಸೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಆಕರ್ಷಣೆಗೆ ಒಳಗಾಗದೆ, ಒಳ್ಳೆಯ ಚಿಂತನೆಗಳ ಕಡೆ ಗಮನ ಕೊಡಿ ಎಂದು ತಿಳಿಸಿದರು.

ಹೆಣ್ಣು ಮಕ್ಕಳ ಕಳ್ಳ ಸಾಗಣೆ, ವೇಶ್ಯಾವಾಟಿಕೆ, ಅತಿ ಹೆಚ್ಚು ನಡೆಯುತ್ತಿದ್ದು, ಅಸಹಾಯಕ ಹೆಣ್ಣು ಮಕ್ಕಳ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ಎಲ್ಲರೂ ಜಾಗೃತವಾಗಿರಬೇಕು. ಶೇ.೧೫ ರಿಂದ 2೦ರಷ್ಟು ಹೆಣ್ಣು ಮಕ್ಕಳು ಇಂದು ಮನೆಯಿಂದ ನಾಪತ್ತೆಯಾಗುತ್ತಿದ್ದಾರೆ. ಗಂಡು ಮಕ್ಕಳನ್ನು ಭಿಕ್ಷಾಟನೆಗೆ ತಳ್ಳುತ್ತಿದ್ದಾರೆ ಹಾಗೂ ಡ್ರಗ್ಸ್, ಸ್ಮಗ್ಲಿಂಗ್ ಎಂಬ ಮಾಫಿಯಾಗಳಿಗೆ ಬಳಸಿಕೊಳ್ಳುವ ದಂಧೆಗಳು ಹೆಚ್ಚಾಗಿರುವ ಕಾರಣ ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ ವಿದ್ಯಾಭ್ಯಾಸ ಮತ್ತು ಆರೋಗ್ಯದ ಕಡೆ ಗಮನ ನೀಡಿ ಎಂದು ಅವರು ತಮ್ಮ ಕೆಲಸದ ಸಮಯದಲ್ಲಿ ಕಂಡ ನೈಜ ಸತ್ಯಾಂಶಗಳನ್ನು ಬಿಚ್ಚಿಟ್ಟರು.

ನಂತರ ಜಿಲ್ಲಾ ಮಕ್ಕಳ ತಜ್ಞರು ಹಾಗೂ ಪ್ರಾಂಶುಪಾಲರಾದ ಡಾ. ರಜನಿ.ಎಂ ಮಾತನಾಡಿ, ಇಂದಿನ ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿತಿ ಸರಿಯಾಗಿರಬೇಕಾದರೆ ತಿನ್ನುವ ಆಹಾರ ಪಾದಾರ್ಥಗಳು ಸಾತ್ವಿಕವಾಗಿರಬೇಕು. ಅನಾರೋಗ್ಯಕರ ಆಹಾರ ಪದಾರ್ಥಗಳ ಬಳಕೆ ಕಡಿಮೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಹಾಗೂ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ನಾರಿನಾಂಶ ಮತ್ತು ನೀರಿನಾಂಶ ಇರುವ ಆಹಾರಗಳನ್ನು ಹೆಚ್ಚು ತಿನ್ನಿ ಎಂದರು.

ತಾಯಿಯು ಮಗು ಜನನವಾದ ೬ ತಿಂಗಳ ವರೆಗೆ ಮಗುವಿಗೆ ಪೂರಕ ಆಹಾರ ಪಾದರ್ಥ ಹಾಗೂ ಹಾಲುಣಿಸುವ ರೀತಿ ಸರಿಯಾಗಿರಬೇಕು. ಮಕ್ಕಳು ಎತ್ತರಕ್ಕೆ ಸರಿಯಾದ ತೂಕವಿದ್ದರೆ ಮಾತ್ರ ಆರೋಗ್ಯ ಚೆನ್ನಾಗಿರಲು ಸಾಧ್ಯ ಎಂದರು. ಐರನ್ ಮತ್ತು ಫೋಲಿಕಾಸಿಡ್ ಮಾತ್ರೆಯನ್ನು ಹಾಗೂ ಜಂತು ಹುಳುವಿನ ಮಾತ್ರೆಯನ್ನು ತೆಗೆದುಕೊಂಡು ತಮ್ಮ ದೇಹ ಮತ್ತು ಆರೋಗ್ಯವನ್ನು ಸುಧಾರಿಸಿಕೊಳ್ಳಿ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗನವಾಡಿ ಹಾಗೂ ಮನೆಗಳಲ್ಲಿ ಕೈತೋಟಗಳನ್ನು ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ. ದೇಶದಲ್ಲಿ ಹೆಚ್ಚಾಗಿ ಮಹಿಳೆಯರು ಅನಿಮಿಯದಿಂದ ಬಳಲುತ್ತಿದ್ದು, ಅನಿಮಿಯ ಮುಕ್ತ ಭಾರತವನ್ನು ಮಾಡಬೇಕಾಗಿದೆ. ಸರ್ಕಾರ ಉಚಿತವಾಗಿ ಶಾಲೆಗಳಲ್ಲಿ ಐರನ್ ಮಾತ್ರೆಗಳನ್ನು ನೀಡುತ್ತಿದ್ದು ಸದುಪಯೋಗ ಪಡೆದುಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣಾಧಿಕಾರಿ ಪವಿತ್ರ, ಜಿಲ್ಲಾ ನಿರೂಪಣಾಧಿಕಾರಿ ಶಿವಕುಮಾರಯ್ಯ, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ರಾಧಾ, ಕಾರ್ಯಕ್ರಮ ಸಂಯೋಜಕರಾದ ಮಮತಾ, ಬಾಲ ಭವನ ಸಮಿತಿ ಸದಸ್ಯರಾದ ಬಸವಯ್ಯ ಸೇರಿದಂತೆ ಮತ್ತಿತರ ಅಧಿಕಾರಿಗಳು, ಜಿಲ್ಲೆಯ ಅಂಗನವಾಡಿ ಮತ್ತು ಶಾಲಾ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!