ಸಾರ್ವಜನಿಕರು ಆಭಾ (ABHA) ಕಾರ್ಡ್‌ಗಳನ್ನು ಪಡೆಯಬೇಕು : ಜಿಲ್ಲಾಧಿಕಾರಿ

  ತುಮಕೂರು: ಜಿಲ್ಲೆಯ ಎಲ್ಲಾ ನಾಗರೀಕರು ಗ್ರಾಮ ಒನ್ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್(ಆಭಾ) ಕಾರ್ಡ್‌ಗಳನ್ನು ಮಾಡಿಸಿಕೊಳ್ಳುವ ಮೂಲಕ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿರುತ್ತದೆ. ಅಂತೆಯೇ ಆಭಾ ಕಾರ್ಡ್‌ಗಳನ್ನು ಸಾರ್ವಜನಿಕರಿಗೆ ವಿತರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

 ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಈ ವಾರದೊಳಗೆ ಪ್ರತಿ ತಾಲ್ಲೂಕು ವತಿಯಿಂದ ಕನಿಷ್ಠ 5 ಸಾವಿರ ಆಭಾ ಕಾರ್ಡುಗಳನ್ನು ವಿತರಿಸಬೇಕೆಂದು ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು.

ಜಿಲ್ಲೆಯ ವಿಕಲಚೇತನರಿಗೆ ನೀಡುವ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ಕಾರ್ಡುಗಳನ್ನು ನೀಡುವ ಕೆಲಸ ತ್ವರಿತಗತಿಯಲ್ಲಿ ಆಗಬೇಕೆಂದರಲ್ಲದೇ,  ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದರು.

ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಶುಚಿತ್ವದ ಕಡೆ ಗಮನ ಹರಿಸುವಂತೆ ಆರೋಗ್ಯ ಇಲಾಖೆ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದ ಅವರು, ಎಲ್ಲಿಯೂ ಸಹ ಡೆಂಗ್ಯೂ ಸಾವು, ನೋವು ವರದಿಯಾಗದಂತೆ ಎಚ್ಚರ ವಹಿಸಿ ಸ್ವಚ್ಚತೆಯ ಕಡೆ ಗಮನಹರಿಸಬೇಕೆಂದು ಎಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಅವರು ಸೂಚಿಸಿದರು.

 ಜಿಲ್ಲೆಯಲ್ಲಿ ಲಭ್ಯವಿರುವ ಲಸಿಕೆಗಳನ್ನು ಆದ್ಯತೆಯ ಮೇಲೆ ಲಸಿಕಾಕರಣ ನಡೆಸಿ ಸೆಪ್ಟೆಂಬರ್15 ರೊಳಗೆ ಪೂರ್ಣಗೊಳಿಸಬೇಕು. ಶಿರಾ, ತಿಪಟೂರು, ತುಮಕೂರು ಆರ್‌ಟಿಪಿಸಿಆರ್ ಕೇಂದ್ರಗಳಲ್ಲಿ ಉಳಿದಿರುವ ಟೆಸ್ಟಿಂಗ್ ಕಿಟ್‌ಗಳು ಬಳಕೆಯಾಗದಿದ್ದಲ್ಲಿ ಇಲಾಖೆಗೆ ಹಿಂದಿರುಗಿಸಲು ಸೂಕ್ತ ಕ್ರಮವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಯಿಂದ ಆಗುತ್ತಿರುವ ಅವಗಢಗಳನ್ನು ಎದುರಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ಸಿದ್ದರಿರಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರಸ್ಥಾನದಲ್ಲಿರದೆ ಸಮಸ್ಯೆಗಳನ್ನು ಆಲಿಸಲು ಹಳ್ಳಿಗಳಿಗೆ ತೆರಳಬೇಕು. ತುರ್ತಾಗಿ ಸ್ಪಂದಿಸಬೇಕು ಈ ಕುರಿತು ತಹಸಿಲ್ದಾರ್ ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕೆಂದು ಸೂಚಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳನ್ನು ಎ/ಬಿ1/ಬಿ2/ಸಿ ಕೆಟಗೆರಿಗಳಾಗಿ ವಿಂಗಡಿಸಿ ಜಿಪಿಎಸ್ ಮಾಡಲಾಗುತ್ತಿದೆ. ನಿಗಧಿತ ತಂತ್ರಾಂಶದಡಿ ಅಪ್ಲೋಡ್ ಮಾಡಲು ಬಾಕಿ ಇರುವ ಪ್ರಕರಣಗಳನ್ನು ಸೆಪ್ಟೆಂಬರ್ ೧೫ರೊಳಗೆ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

 ಸರ್ಕಾರಿ/ಗ್ರಾಮಠಾಣ ಜಾಗದಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಯ ಹೆಸರಿಗೆ ಖಾತೆ ಮಾಡಿಕೊಡುವ ಕೆಲಸ ಪ್ರಗತಿಯಲ್ಲಿದೆ. ಸಂಬಂಧಿಸಿದ ಶಾಲೆಯ ಮುಖ್ಯಶಿಕ್ಷಕರು ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ದಾಖಲೆಯೊಂದಿಗೆ ಮನವಿ ಸಲ್ಲಿಸಿ ಶಿಕ್ಷಣ ಇಲಾಖೆಯ ಸುಪರ್ದಿಗೆ ಮಾಡಿಸಬೇಕು. ಈ ಕುರಿತು ಡಿಡಿಪಿಐ ಅಧಿಕಾರಿ ಸಿ.ನಂಜಯ್ಯ ಅವರು ಬಿಇಓ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ತಿಳಿಸಿದರು.

ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ನೀಡುವ ಕಾರ್ಯಪ್ರಗತಿಯಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು ಸೂಕ್ತ ನಿವೇಶನಗಳನ್ನು ಗುರುತಿಸಿ ನೀಡಬೇಕು. ಅಂತೆಯೇ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪೌರಾಯುಕ್ತರು ನಿವೇಶನಗಳನ್ನು ನೀಡುವಲ್ಲಿ ಕ್ರಮವಹಿಸಬೇಕು.  ಸರ್ಕಾರಿ ಶಾಲೆಯ ಆವರಣದಲ್ಲಿ ಜಾಗವಿದ್ದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕೆಂಬುದು ಸರ್ಕಾರದ ನಿರ್ದೇಶನವಿದೆ ಎಂದರು.

ಭೂಮಿ ಯೋಜನೆ ಪ್ರಗತಿ, ಪಹಣಿ ಕಾಲಂ 3/9 ಮಿಸ್ ಮ್ಯಾಚ್ ವಿಲೇವಾರಿ, ಪೈಕಿಪಹಣಿ ಒಟ್ಟುಗೂಡಿಸುವಿಕೆ, ೧೧ಇಗೆ ಸಂಬಂಧಿಸಿದಂತೆ ಆರ್‌ಟಿಸಿ ತಿದ್ದುಪಡಿ ಪ್ರಕರಣಗಳು ವಿಷಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ ಅಜಯ್, ತಹಸಿಲ್ದಾರ್ ಮೋಹನ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಟಿ ಎ ವೀರಭದ್ರಯ್ಯ, ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!