ಪುಣ್ಯಕೋಟಿ ದತ್ತು ಯೋಜನೆ

ತುಮಕೂರು: ಪುಣ್ಯಕೋಟಿ ದತ್ತು ಯೋಜನೆ’ಯಡಿ ಸಾರ್ವಜನಿಕರು ಜಿಲ್ಲೆಯ ಗೋಶಾಲೆಯಲ್ಲಿರುವ ಜಾನುವಾರುಗಳನ್ನು ಪುಣ್ಯಕೋಟಿ ಆನ್‌ಲೈನ್ ಪೋರ್ಟಲ್ ಮೂಲಕ ಪ್ರತಿ ಜಾನುವಾರಿಗೆ ವಾರ್ಷಿಕ 11 ಸಾವಿರ ಮೊತ್ತ ಸಂದಾಯ ಮಾಡಿ ಜಾನುವಾರುಗಳನ್ನು ದತ್ತು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.

ತಮ್ಮ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿದಯಾ ಸಂಘದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಗೋಶಾಲೆಗಳಲ್ಲಿರುವ ಜಾನುವಾರುಗಳಿಗೆ ಮೇವು, ಸೌಕರ್ಯಗಳಿಗಾಗಿ ಅನುದಾನವನ್ನು ಒದಗಿಸಿದ್ದರೂ ಸಹ ಹೆಚ್ಚಿನ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಾರ್ವಜನಿಕ ಸಹಯೋಗದ ಅಗತ್ಯವಿದೆ ಎಂದ ಅವರು ಗೋ ಶಾಲೆಗಳಲ್ಲಿರುವ ಜಾನುವಾರುಗಳನ್ನು ಸಾರ್ವಜನಿಕರು ನಿರ್ಧಿಷ್ಟ ಅವಧಿಗೆ ದತ್ತು ಪಡೆದು ಸಾಕಾಣಿಕೆ ಮಾಡಲು ಧನ ಸಹಾಯ ಒದಗಿಸಬೇಕಾಗಿದ್ದು, ಇದನ್ನು ಅನುಷ್ಠಾನಗೊಳಿಸಲು” ಗೋಶಾಲೆಗಳಲ್ಲಿ ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಜಿಲ್ಲೆಯಲ್ಲಿರುವ ಗೋಶಾಲೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳಾದ ಸಗಣಿ, ಗಂಜಲ ಇತ್ಯಾದಿಗಳನ್ನು ಬಳಸಿ ಪರಿಸರ ಸ್ನೇಹಿ ಸಗಣಿ ಕಟ್ಟಿಗೆ, ಬಯೋಗ್ಯಾಸ್, ಫೆನಾಯಿಲ್, ಎರೆಹುಳು ಗೊಬ್ಬರ ಇತ್ಯಾದಿಗಳನ್ನ ತಯಾರಿಸಿ ಮಾರಾಟಕ್ಕಾಗಿ ಗೋ ಮಾತಾ ಸಹಕಾರ ಸಂಘ ಸ್ಥಾಪಿಸಿ ಬಂದ ಹಣವನ್ನು ಗೋಶಾಲೆಗಳ ನಿರ್ವಹಣೆಗೆ ಬಳಸಬಹುದು. ಇದರಿಂದ ಗೋಶಾಲೆಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಿ ಗೋಶಾಲೆಗಳನ್ನು ಆತ್ಮನಿರ್ಭರರಾಗಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ಗೋಶಾಲೆಗಳಿಗೆ ಸಹಾಯನುದಾನ ನೀಡುವ ಕಾರ್ಯಕ್ರಮದಡಿ ಶಿರಾ ತಾಲ್ಲೂಕು ಅಮರಾಪುರ ರಸ್ತೆಯ ಹನುಮಂತಪುರದಲ್ಲಿ ಸ್ಥಾಪಿಸಲಾಗಿರುವ ಮಹಾನಂದಿ ಗೋಶಾಲೆ ಟ್ರಸ್ಟ್ ಸರ್ಕಾರದಿಂದ ಅನುದಾನ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿ ಅನುಮೋದನೆ ನೀಡಲಾಯಿತು.

ಗೋಮಾತಾ ಸಹಕಾರ ಸಂಘಕ್ಕೆ ಕಾನೂನು ಸಲಹೆಗಾರರು ಮತ್ತು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಜಯಣ್ಣ, ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ|| ದಿವಾಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು, ಸುರಭಿ ಗೋಶಾಲೆಯ ಮಧುಸೂದನ್, ಜಿಲ್ಲಾ ಪ್ರಾಣಿದಯಾ ಸಂಘದ ಸದಸ್ಯ ಪ್ರಕಾಶ್, ಮಹಾನಂದಿ ಗೋಶಾಲೆಯ ಲಕ್ಷ್ಮೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

 

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!