ಪಾವಗಡ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೆ ರೈತರ ಸಾಲ ಮನ್ನಾ ಮಾಡುವ ಯೋಜನೆ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷ ಎ. ಗೋವಿಂದರಾಜು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ರೈತರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ಕೊಳೆತು ನಷ್ಟವಾಗಿರುವ ಹಿನ್ನೆಲೆಯಲ್ಲಿ ಸಕಾರ ಈ ಕೂಡಲೆ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷದಿಂದಾಗಿ ರೈತರಿಗೆ ಸಕಾಲಕ್ಕೆ ಯೋಜನೆಗಳು ದೊರೆಯದಂತಾಗಿವೆ, ತಾಲೂಕು ಸೇರಿದಂತೆ ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಿಲುಕಿ ಬೆಳೆಗಳು ನಾಶವಾದ ಕಾರಣ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಬರ ಪೀಡಿತ ಪಾವಗಡ ತಾಲೂಕಿನಲ್ಲಿ ರೈತರು ಕೃಷಿ ಚಟುವಟಿಕೆಗಾಗಿ ಮಾಡಿರುವ ಬೆಳೆ ಸಾಲ ಮನ್ನಾ ಮಾಡಲು ಸರ್ಕಾರ ಸೂಕ್ತ ತಂಡ ರಚನೆ ಮಾಡಿ, ಶೀರ್ಘ ಸಮೀಕ್ಷೆ ನಡೆಸಬೇಕು, ಸಾಲ ಮನ್ನಾ ಮಾಡುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಂದು ಆತ್ಮಹತ್ಯೆಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಗ್ರಾಮೀಣ ಭಾಗದಲ್ಲಿ ಕೆರೆಗಳ ನೀರು ನುಗ್ಗಿ ರೈತರ ಅಪಾರ ಬೆಳೆ ನಾಶವಾಗಿದೆ ಹಾಗೂ ಬಡ ವರ್ಗದವರ ಮನೆಗಳು ಬಿದ್ದಿವೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ ತಹಶೀಲ್ದಾರ್ ವರದರಾಜು ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಪೂಜಾರಪ್ಪ, ಜಿಲ್ಲಾದ್ಯಕ್ಷ ಎ ಗೋವಿಂದರಾಜು, ಪ್ರ.ಕಾರ್ಯದರ್ಶಿ ಶಂಕರಪ್ಪ, ಮಧುಗಿರಿ ತಾಲೂಕು ಅಧ್ಯಕ್ಷ ರಾಜಣ್ಣ, ಶಿರಾ ತಾಲೂಕು ಅಧ್ಯಕ್ಷ ಲಕ್ಷ್ಮಣಗೌಡ, ಪ್ರ.ಕಾರ್ಯದರ್ಶಿ ನಾದೂರು ಕೆಂಚಪ್ಪ, ತಾಲೂಕು ಘಟಕದ ನರಸಣ್ಣ, ಪೂಜಾರಿ ಚಿತ್ತಯ್ಯ, ಹನುಮಂತರಾಯಪ್ಪ, ನಾರಾಯಣಪ್ಪ, ನವೀನ್, ಶಿವು ಸೇರಿದಂತೆ ರೈತರು ಇದ್ದರು.