ಜಿಲ್ಲಾಧಿಕಾರಿಗಳಿಂದ ಪತ್ರಿಕಾ ಭವನದ ನವೀಕರಣ ಕಾಮಗಾರಿ ಪರಿಶೀಲನೆ

ತುಮಕೂರು : ನಗರದ ಬಾಳನಕಟ್ಟೆಯಲ್ಲಿರುವ ಜಿಲ್ಲಾ ಪತ್ರಿಕಾ ಭವನದ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು.

ಸಂವಿಧಾನದಲ್ಲಿ ಅಡಕವಾಗಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಂತೆ ಮಾಧ್ಯಮ ರಂಗ ಪ್ರಜಾ ಪ್ರಭುತ್ವದ ನಾಲ್ಕನೆಯ ಅಂಗವೆನಿಸಿದರೂ ಅದರ ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಹುದಾದ ಕಾರಣಕ್ಕೆ ಸರ್ಕಾರದ ಚೌಕಟ್ಟಿನೊಳಗೆ ಸೇರಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿಯೇ ಮಾಧ್ಯಮ ಸ್ವಾತಂತ್ರ್ಯ ಬರುತ್ತದೆ ಎಂದರು.

ಪತ್ರಕರ್ತ ಯಾವತ್ತಿಗೂ ವಸ್ತುನಿಷ್ಠವಾಗಿ ಇರಬೇಕು. ಜನಾಭಿಪ್ರಾಯ ಮೂಡಿಸುವಂತಹ ಕೆಲಸ ಮಾಡಬೇಕು. ನಕಾರಾತ್ಮಕ ಮತ್ತು ಸಕರಾತ್ಮಕ ಧೋರಣೆಗಳ ಆಚೆ ಸರಿ ತಪ್ಪುಗಳನ್ನು ಸಮಾಜ ನಿರ್ಧರಿಸುತ್ತದೆ ಎಂದು ವಿವರಿಸಿದರು.

ಸರ್ಕಾರಿ ಉದ್ಯೋಗಿಗಳಿಗೆ ಕಚೇರಿಯ ವೇಳಾಪಟ್ಟಿ ಇರುತ್ತದೆ. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅದರ ಎಲ್ಲೆಯನ್ನು ದಾಟಿ ತಮ್ಮ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ ಎಂದರು. ಯಾವುದೇ ವೃತ್ತಿಯಿರಲಿ ಜೀವನದ ಗುರಿ ಸ್ಪಷ್ಟವಿದ್ದಲ್ಲಿ ಹಗಲಿರುಳು ಎಂಬುದು ಲೆಕ್ಕವಿರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರಾದ ಚಿ.ನಿ.ಪುರುಷೋತ್ತಮ್ ಮಾತನಾಡಿ, ಜಿಲ್ಲೆಯಲ್ಲಿ ಪತ್ರಕರ್ತರ ನೆಲೆ ಇರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯ ಮೂಲೆಯೊಂದರ ಕೊಠಡಿಯಲ್ಲಿ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದವು ಎಂದು ಹಳೆಯ ದಿನಗಳನ್ನು ನೆನೆದ ಅವರು ಪತ್ರಕರ್ತರ ಪರಿಶ್ರಮ ಮತ್ತು ಸರ್ಕಾರದ ಅನುದಾನದ ಸಹಕಾರದೊಂದಿಗೆ ವಾರ್ತಾ ಇಲಾಖೆ ಕಚೇರಿಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಸುಮಾರು 75 ಲಕ್ಷ.ರೂಗಳ ವೆಚ್ಚದಲ್ಲಿ ಪತ್ರಿಕಾ ಭವನ ನಿರ್ಮಾಣ ಮಾಡಲಾಗಿದೆ ಎಂದರು.

ಇದೀಗ ಜಿಲ್ಲಾಡಳಿತ ಮತ್ತು ಪಾಲಿಕೆ ವತಿಯಿಂದ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಪತ್ರಿಕಾ ಚಟುವಟಿಕೆಗಳನ್ನು ನಡೆಸುವುದಕ್ಕೆ ಪತ್ರಿಕಾ ಭವನ ಮುಕ್ತವಾಗಲಿದೆ ಎಂದರಲ್ಲದೇ ಕಚೇರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ವಿಐಪಿ ಕುರ್ಚಿಗಳು, ಸೌಂಡ್ ಸಿಸ್ಟಮ್, ಯುಪಿಎಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಜಿಲ್ಲಾ ವಾರ್ತಾಧಿಕಾರಿ ಎಂ.ಆರ್.ಮಮತಾ, ಪತ್ರಕರ್ತರುಗಳಾದ ಚಿಕ್ಕೀರಪ್ಪ, ಟಿ.ಎಸ್.. ಕೃಷ್ಣಮೂರ್ತಿ ಟಿ.ಇ.ರಘುರಾಂ, ಸತೀಶ್ ಎಚ್.ಇ., ಜಯಣ್ಣ, ಮಲ್ಲಿಕಾರ್ಜುನ ಸ್ವಾಮಿ, ಚಿಕ್ಕಣ್ಣ, ಸೇರಿದಂತೆ ಹಲವು ಪತ್ರಕರ್ತರು ಹಾಜರಿದ್ದರು.

 

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!