ಗುಬ್ಬಿ: ತನಿಖಾ ಹಂತದ ಭೂ ಹಗರಣ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡದೆ ಮುಂದಿನ ಎಲ್ಲಾ ಖಾತೆಗೆ ಬದಲಾವಣೆಗೆ ಸ್ಥಳ ಪರಿಶೀಲನೆ ಮಾಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭೂ ಹಗರಣದಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಲಾಗಿದೆ. ಈ ಹಗರಣದಲ್ಲಿ ಯಾರೇ ಇದ್ದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ರಕ್ಷಿಸುವ ಮಾತಿಲ್ಲ ಎಂದು ಸ್ಪಷ್ಟ ಪಡಿಸಿದರು.
ತನಿಖೆ ವೇಳೆ ಮತ್ತಷ್ಟು ಸೃಷ್ಠಿ ದಾಖಲೆ ಹೊರ ಬರುತ್ತಿವೆ. ಪೊಲೀಸರ ತನಿಖೆಗೆ ಇಲಾಖೆ ಸ್ಪಂದಿಸಿದೆ. ಗುಬ್ಬಿ ಶಾಸಕರು ಸೂಚಿಸಿದ ಗ್ರಾಮಗಳ ದಾಖಲೆಯನ್ನು ಪರಿಶೀಲಿಸಲಾಗುತ್ತಿದೆ ಎಂದ ಅವರು ಒತ್ತಡದಲ್ಲಿ ಆತ್ಮ ವಿಶ್ವಾಸ ಕಳೆದುಕೊಳ್ಳುವ ಈ ಸಂದರ್ಭವನ್ನು ಗುಬ್ಬಿ ತಹಶೀಲ್ದಾರ್ ಚೆನ್ನಾಗಿ ಎದುರಿಸಿದ್ದಾರೆ. ತಪ್ಪಿತಸ್ಥ ಸಿಬ್ಬಂದಿಗಳ ಬಗ್ಗೆ ಯಾವ ಸಿಂಪಥಿ ತೋರದೆ ಕ್ರಮ ವಹಿಸಿರುವುದು ಪ್ರಶಂಸನೀಯ ಎಂದರು.
ಅನುಭವದಲ್ಲಿರುವ ಅರ್ಹ ಫಲಾನುಭವಿಗೆ ಸಿಗದ ಭೂಮಿ ಬಗರ್ ಹುಕುಂ ಸಮಿತಿ ಮೂಲಕ ಅಥವಾ ಸಮಿತಿ ಗಮನಕ್ಕೆ ಬಾರದೆ ಬೇರೆಯವರಿಗೆ ಖಾತೆ ಪಹಣಿ ಆಗಿದ್ದಲ್ಲಿ ಅಂತಹ ರೈತರು ದೂರು ಗಳನ್ನು ಸಲ್ಲಿಸಬಹುದು. ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಹಗರಣದ ಪಟ್ಟಿ ಬೆಳೆದಂತೆ ತಾಲ್ಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಬೇರೆ ಸ್ಥಳಕ್ಕೆ ನಿಯೋಜನೆ ಆಗಿರುವ ಸಿಬ್ಬಂದಿಗಳ ಜೊತೆ ಚುರುಕಿನ ಕೆಲ ಸಿಬ್ಬಂದಿಗಳನ್ನು ಇಲ್ಲಿಗೆ ನಿಯೋಜಿಸುವ ಭರವಸೆ ನೀಡಿದರು.
ತುರುವೇಕೆರೆ ಮತ್ತು ಗುಬ್ಬಿ ಮಿನಿ ವಿಧಾನ ಸೌಧ ದುರಸ್ಥಿಗೆ ಬಂದಿದೆ. ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲಾಗುವುದು. ತಕ್ಷಣದ ಕ್ರಮಕ್ಕೆ ವ್ಯವಸ್ಥೆ ಮಾಡುವ ಭರವಸೆ ನೀಡಿದ ಅವರು ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಕೆರೆ ಗುರುತಿಸಿ 806 ಕೆರೆಗಳ ಒತ್ತುವರಿ ಕಾರ್ಯ ನಡೆದಿದೆ. ಮಳೆ ಬಿದ್ದು ಈಗಾಗಲೇ ನೀರು ಕೆರೆಯ ಗಡಿ ಗುರುತಿಸಿದೆ. ಈ ಸಂದರ್ಭ ಬಳಸಿ ಆಯಾ ಇಲಾಖೆ ತಮ್ಮ ಕೆರೆಗಳ ಒತ್ತುವರಿ ತೆರವು ಮಾಡಲು ಸೂಚಿಸಲಾಗಿದೆ. ಪೊಲೀಸ್ ರಕ್ಷಣೆಗೆ ತಾಲ್ಲೂಕು ಆಡಳಿತ ಬದ್ಧವಾಗಿರುತ್ತದೆ. ಮಾರನಕಟ್ಟೆ ಸಂಪೂರ್ಣವಾಗಿ ಸರ್ಕಾರ ಕಟ್ಟಡಗಳಿಗೆ ಬಳಕೆಯಾದ ಕಾರಣ ಈ ಕೆರೆಯ ಕಡತ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತಹಶೀಲ್ದಾರ್ ಬಿ.ಆರತಿ ಇದ್ದರು.