ಗುಬ್ಬಿ: ಪ್ರಾದೇಶಿಕ ಭಾಷೆಗಳಿಗೆ ಕುತ್ತು ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಿಂದಿ ಭಾಷೆ ಬಲವಂತವಾಗಿ ಹೇರುವ ಕ್ರಮ ವಹಿಸಿ ಹಿಂದಿ ದಿವಸ್ ಆಚರಣೆಯನ್ನು ಸೃಷ್ಟಿಸಲಾಗಿದೆ. ಇದನ್ನು ಪ್ರಾದೇಶಿಕ ಪಕ್ಷ ಜೆಡಿಎಸ್ ಬಲವಾಗಿ ವಿರೋಧಿಸಿದೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ತಲುಪಿದ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಹಿಂದಿ ಹೇರಿಕೆ ಖಂಡಿಸಿ ಮಾತೃ ಭಾಷೆ ಉಳಿಸಿ ಹಿಂದಿ ದಿವಸ್ ಆಚರಣೆ ಕೈ ಬಿಡಲು ಎಂದು ಒತ್ತಾಯಿಸಿದರು.
ಈಗಾಗಲೇ ಶ್ರೀ ಸಾಮಾನ್ಯರ ಬದುಕಿಗೆ ಸಲ್ಲದ ಬೆಲೆ ಏರಿಕೆ ಬಿಸಿ ತಟ್ಟಿಸಿ ಈಗ ಹಿಂದಿ ಭಾಷೆ ಬಲವಂತವಾಗಿ ಹೇರುವ ಮೂಲಕ ನಮ್ಮಗಳ ಕನ್ನಡ ಭಾಷೆಗೆ ಅಪಾಯ ತಂದಿದ್ದಾರೆ. ಕೇವಲ 400 ವರ್ಷದ ಇತಿಹಾಸ ಇರುವ ಹಿಂದಿ ಭಾಷೆಗೆ ಸಿಗುವ ಮಾನ್ಯತೆ 2500 ವರ್ಷ ಇತಿಹಾಸ ಕನ್ನಡ ಭಾಷೆಗೆ ಸಿಕ್ಕಿಲ್ಲ. ಕನ್ನಡ ಭಾಷೆ ಜೊತೆ ತುಳು, ಕೊಂಕಣಿ ಭಾಷೆಗೂ ಮನ್ನಣೆ ನೀಡಿದ್ದೇವೆ. ಇಂತಹ ವೈವಿಧ್ಯತೆಯ ನಮ್ಮ ನಾಡಲ್ಲಿ ಹಿಂದಿ ಹೇರಿಕೆ ಸಲ್ಲದು ಎಂದರು.
ಎಪಿಎಂಸಿ ಮಾಜಿ ಸದಸ್ಯ ಜಿ.ಎಂ.ಶಿವಲಿಂಗಯ್ಯ ಮಾತನಾಡಿ ಇಡೀ ದೇಶದ ವ್ಯವಸ್ಥೆ ಹಾಳು ಮಾಡಿ ಮನಸೋ ಇಚ್ಚೆ ದೇಶದ ಆರ್ಥಿಕ ಸ್ಥಿತಿ ಬಿಗಡಾಯಿಸಿ ಈಗ ಭಾಷಿಕ ರಾಜ್ಯ ಹೊರತಾಗಿ ನಮ್ಮಗಳ ಮೇಲೆ ಹಿಂದಿ ಹೇರಿಕೆ ಮಾಡಿರುವುದು ಅವರ ಕನ್ನಡದ ಮೇಲಿನ ಕೀಳು ಅಭಿರುಚಿ ವ್ಯಕ್ತವಾಗುತ್ತಿದೆ. ನಮ್ಮ ಮಾತೃ ಭಾಷೆ ಉಳಿಸಿ ಬೆಳೆಸಿಕೊಳ್ಳುವ ಅನಿವಾರ್ಯ ಎದುರಾಗುವಂತೆ ಮಾಡಿದ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಹೇಳಬೇಕಿದೆ. ಕೇಂದ್ರ ಸರ್ಕಾರದ ಈ ಬಲವಂತ ನೀತಿ ಬಗ್ಗೆ ವಿರೋಧ ವ್ಯಕ್ತ ಪಡಿಸದಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಯ್ಯ ಮಾತನಾಡಿ ನಮ್ಮ ಮಾತೃ ಭಾಷೆ ಕನ್ನಡ ಮೇಲಿನ ಅಭಿಮಾನ ಈಚೆಗೆ ಹೊರದೇಶದಲ್ಲಿ ವ್ಯಕ್ತ ಪಡಿಸಿದ ಉದಾಹರಣೆ ಇರುವಾಗ ನಮ್ಮ ರಾಜ್ಯದ ಬಿಜೆಪಿ ಸರ್ಕಾರ ಕಿಂಚಿತ್ತೂ ಕಾಳಜಿ ತೋರಿಲ್ಲ. ಹಿಂದಿ ಹೇರಿಕೆ ಬಗ್ಗೆ ಮಾತನಾಡಿಲ್ಲ ಎಂದರು.
ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯಕುಮಾರ್ ಮಾತನಾಡಿ ಗುಲಾಮಗಿರಿ ಅನುಭವಿಸಿದ ನಾಡಿಗೆ ಮತ್ತೊಮ್ಮೆ ಹಿಂದಿ ಭಾಷಿಕರ ಪ್ರಾಬಲ್ಯ ಹೆಚ್ಚಿಸುವ ಹುನ್ನಾರ ಕೇಂದ್ರ ಸರ್ಕಾರ ಮಾಡುತ್ತಿದೆ. ಬಲವಂತದ ಹೇರಿಕೆ ಮಾಡುವ ಸರ್ವಾಧಿಕಾರ ಧೋರಣೆಯ ಫಲ ಇಂದು ಬ್ಯಾಂಕ್ ಗಳಲ್ಲಿ ಕಂಡಿದ್ದೇವೆ. ಗ್ರಾಮೀಣ ಜನರು ಬ್ಯಾಂಕ್ ವ್ಯವಹಾರ ಮಾಡಲು ಭಾಷೆ ಸಮಸ್ಯೆ ಎದುರಾಗಿದೆ. ಈ ಉದಾಹರಣೆ ಗಮನಿಸಿದರೆ ಮುಂದಿನ ದಿನದಲ್ಲಿ ಎಲ್ಲಾ ರಂಗದಲ್ಲೂ ಈ ದುರಂತ ಎದುರಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಗಂಗಾಧರ್, ಫಿರ್ದೋಸ್ ಆಲಿ, ಹೊಸಕೆರೆ ರುದ್ರೇಶ್, ಡಿ.ರಘು, ಶಿವಾಜಿ, ಗಿರೀಶ್, ರಾಯವಾರ ನರಸಿಂಹಮೂರ್ತಿ, ರುದ್ರೇಶ್, ಗೋಪಾಲಗೌಡ, ಮನೋಜ್ ಇತರರು ಇದ್ದರು.