ಗುಬ್ಬಿ: ಪ್ರಾಥಮಿಕ ಶಾಲಾ ಮಕ್ಕಳಲ್ಲಿನ ಕ್ರೀಡಾ ಪ್ರತಿಭೆಗೆ ನೀರೆರೆದು ಪೋಷಿಸಿದ್ದಲ್ಲಿ ಪದಕಗಳ ಕೊರತೆ ನೀಗಿಸಬಹುದು. ಈ ಪೈಕಿ ಗ್ರಾಮೀಣ ಮಕ್ಕಳಿಗೆ ಸೂಕ್ತ ತರಬೇತಿ ನೀಡಿದ್ದಲ್ಲಿ ಉತ್ತಮ ಕ್ರೀಡಾಳುಗಳಾಗುತ್ತಾರೆ ಎಂದು ಅಡಗೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಂದರಹಳ್ಳಿ ಶಿವಕುಮಾರ್ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಕಡಬ ಕಾಲೇಜು ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದರು.
ದೈಹಿಕ ಮತ್ತು ಮಾನಸಿಕ ಸದೃಢತೆ ಕ್ರೀಡೆ ಉತ್ತಮ ಮಾರ್ಗ. ಇತ್ತೀಚಿನ ದಿನಗಳಲ್ಲಿ ಮಾರಕ ರೋಗಗಳು ಹೆಚ್ಚಾಗಿವೆ. ಆಸ್ಪತ್ರೆಗಳ ದಾಖಲು ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೋಗ ಮುಕ್ತ ಸಮಾಜಕ್ಕೆ ಕ್ರೀಡೆಯೇ ಉತ್ತಮ ಸಾಧನ ಎಂದ ಅವರು ಮಕ್ಕಳಿಗೆ ಕ್ರೀಡಾಸಕ್ತಿ ಬೆಳೆಸಲು ಶಿಕ್ಷಣ ಇಲಾಖೆ ಉತ್ತಮ ಯೋಜನೆ ರೂಪಿಸಿಕೊಳ್ಳಬೇಕು. ಪೋಷಕರ ಸಹಕಾರ ಸಹ ಅತ್ಯಗತ್ಯ ಎಂದರು.
ಅಡಗೂರು ಗ್ರಾಪಂ ಸದಸ್ಯೆ ಶ್ವೇತಾ ನಾಗರಾಜು ಮಾತನಾಡಿ ದೈಹಿಕ ಕಸರತ್ತು ಎಷ್ಟು ಮುಖ್ಯ ಎಂಬುದು ಈಚೆಗೆ ಹರಡಿದ ರೋಗ ರುಜಿನಗಳು ತೋರಿಸಿಕೊಟ್ಟಿವೆ. ಎಲೆ ಮರೆಯ ಕಾಯಿಯಂತೆ ಹಲವು ಪ್ರತಿಭೆಗಳು ಈಗಾಗಲೇ ಬೆಳಕಿಗೆ ಬಂದಿಲ್ಲ. ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಜೊತೆಗೆ ಮಕ್ಕಳು ದೈಹಿಕ ಸದೃಢತೆ ಸಂಪಾದಿಸಿರುತ್ತಾರೆ. ಹಾಗಾಗಿ ಹಳ್ಳಿಗಾಡಿನ ಮಕ್ಕಳಿಗೆ ಕ್ರೀಡೆಯ ಆಸಕ್ತಿ ಬೆಳೆಸಿ ಸೂಕ್ತ ತರಬೇತಿ ನೀಡುವುದು ಸರ್ಕಾರ ಮಾಡಬೇಕು ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್ ಮಾತನಾಡಿ ಮಕ್ಕಳ ಪ್ರತಿಭೆ ಗುರುತಿಸಲು ಕ್ಲಸ್ಟರ್ ಹಂತದಿಂದ ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟ ಹೀಗೆ ಕ್ರೀಡಾಕೂಟ ಆಯೋಜಿಸಲಾಗಿದೆ. ಶಿಕ್ಷಣ ಇಲಾಖೆ ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸಲಾಯಿತು. ಸಮವಸ್ತ್ರ ತೊಟ್ಟ ಮಕ್ಕಳ ಕವಾಯತು ಆಕರ್ಷಿಸಿತು.
ವೇದಿಕೆಯಲ್ಲಿ ಮುಖಂಡ ನಾಗರಾಜು, ದೈಹಿಕ ಪರಿವೀಕ್ಷಕಿ ಚಂದ್ರಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಟಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಟಿ.ಆರ್.ಕುಮಾರ್, ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಕೆ.ಭೈರಪ್ಪ, ಜಿಲ್ಲಾ ಉಪಾಧ್ಯಕ್ಷೆ ಯಶೋಧಮ್ಮ, ತಾಲ್ಲೂಕು ಸಹ ಕಾರ್ಯದರ್ಶಿ ಜಿ. ಮಂಜುನಾಥ ಇತರರು ಇದ್ದರು.