ಗುಬ್ಬಿ: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಹೆಚ್ಚಿನ ಕಾರ್ಯಕರ್ತರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲಾ ಮುಖಂಡರು, ಜವಾಬ್ದಾರಿ ಹೊತ್ತ ಪದಾಧಿಕಾರಿಗಳು ಮುಂದಾಗಬೇಕು. ಯಶಸ್ವಿಗೆ ದುಡಿದ ನಂತರವಷ್ಟೇ ಟಿಕೆಟ್ ವಿಚಾರ ಪ್ರಸ್ತಾಪ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿವಿ ಮಾತು ಹೇಳಿದರು.
ಪಟ್ಟಣದ ಹೊರ ವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಬಹಳ ವರ್ಷದಿಂದ ಕಾಂಗ್ರೆಸ್ ಶಾಸಕರು ಇಲ್ಲದ ಗುಬ್ಬಿಯಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡುವುದು ನಮ್ಮ ಕೆಲಸ. ಪಕ್ಷ ಸಂಘಟನೆಗೆ ಒತ್ತು ನೀಡಿದವರಿಗೆ ಆದ್ಯತೆ ಇರುತ್ತದೆ. ಈ ಯಾತ್ರೆ ಯಶಸ್ವಿ ಮೂಲಕ ಜಿಲ್ಲೆಯಲ್ಲಿ ಸಂಚಲನ ಮೂಡಲಿದೆ. ಕಾಂಗ್ರೆಸ್ ಆಳ್ವಿಕೆ ತರಲು ಎಲ್ಲರೂ ಶ್ರಮಿಸಿ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಬಿಜೆಪಿಯ ದುರಾಡಳಿತ, ಶೇಕಡಾ 40 ಕಮಿಷನ್, ಉದ್ಯೋಗದಲ್ಲಿ ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿದ ಬಿಜೆಪಿ ಸರ್ಕಾರದ ವಿರುದ್ಧ ಯುವಕರು, ರೈತರನ್ನು ಒಗ್ಗೂಡಿಸಲು ಮುಂದಾದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ ರಾಜ್ಯದಲ್ಲಿ 22 ದಿನಗಳ ಕಾಲ 510 ಕಿಮೀ ಕ್ರಮಿಸಲಿದೆ. ತುಮಕೂರು ಜಿಲ್ಲೆಯಲ್ಲಿ ನಾಲ್ಕು ದಿನದ ಕಾಲ ನಿತ್ಯ 25 ಕಿಮೀ ದೂರ ನಡೆಯಲಿದೆ. ಈ ಅವಕಾಶ ಬಳಸಿಕೊಂಡು ಎಲ್ಲರೂ ಭಾಗವಹಿಸಿ ಯಾತ್ರೆಯಲ್ಲಿ ಹೆಜ್ಜೆ ಹಾಕಲು ಕರೆ ನೀಡಿದ ಅವರು ಜಿಲ್ಲೆಯಲ್ಲಿ ಬಹುತೇಕ ಕಾಂಗ್ರೆಸ್ ಶಾಸಕರ ಆಯ್ಕೆ ಖಚಿತ. ಯಾತ್ರೆ ನಂತರ ಟಿಕೆಟ್ ವಿಚಾರ ಆಲೋಚನೆ ಇದೆ ಎಂದರು.
ಈಗಾಗಲೇ ಜನರ ಒಲವು ಕಾಂಗ್ರೆಸ್ ಮೇಲಿದೆ. 142 ಸ್ಥಾನ ಗೆಲ್ಲುವ ಸರ್ವೇ ನಡೆದಿದೆ. ಸರ್ಕಾರ ರಚಿಸುವ ಕಾಂಗ್ರೆಸ್ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನವನ್ನು ಸಂಘಟನೆಗೆ ದುಡಿದವರಿಗೆ ನೀಡಲಿದೆ. ಜಿಲ್ಲೆಯಲ್ಲಿ ಎಂಪಿ ಇಲ್ಲ ಎಂಎಲ್ಎ ಇಲ್ಲ ಅಂತ ಹೇಳುತ್ತಾ ಕಾಲಹರಣ ಮಾಡದೆ ಬಿಜೆಪಿ ಕೆಟ್ಟ ಆಡಳಿತ ಬಗ್ಗೆ ಜನರಿಗೆ ತಿಳಿಸಿ ಕಾಂಗ್ರೆಸ್ ನತ್ತ ಮತ ಪರಿವರ್ತನೆ ಮಾಡಿ ಎಂದು ಕರೆ ನೀಡಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನರನ್ನು ಸಂಘಟಿಸಿ ಮುಂದಿನ ತಿಂಗಳ 9 ರಿಂದ 12 ರವರೆಗೆ ನಡೆಯುವ ಯಾತ್ರೆ ಯಶಸ್ವಿಗೆ ಮೊದಲು ಸಿದ್ಧತೆ ನಡೆಸಿ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕ ಷಡಕ್ಷರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ಕೆಪಿಸಿಸಿ ಕಾರ್ಯದರ್ಶಿ ಮುರುಳಿಧರ್ ಹಾಲಪ್ಪ, ಶಶಿ ಹುಲಿಕುಂಟೆ, ಗುಬ್ಬಿ ಬ್ಲಾಕ್ ಅಧ್ಯಕ್ಷ ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೇಕಟ್ಟೆ ಜಯಣ್ಣ, ಸ್ಥಳೀಯ ಮುಖಂಡರಾದ ಹೊನ್ನಗಿರಿಗೌಡ, ಪ್ರಸನ್ನಕುಮಾರ್, ಕೆ.ಆರ್.ತಾತಯ್ಯ, ಶಂಕರಾನಂದ, ಭರತಗೌಡ, ಮಹಮದ್ ಸಾದಿಕ್, ಸಲೀಂಪಾಷಾ, ಜಿ.ಎಂ.ಶಿವಾನಂದ್, ಜಿ.ಎಲ್. ರಂಗನಾಥ ಇತರರು ಇದ್ದರು.