ಪುರಸಭೆ ಮುಖ್ಯಾಧಿಕಾರಿಗಳ ನಿರ್ಲಕ್ಷ – ಬಿಜೆಪಿಯಿಂದ ಪ್ರತಿಭಟನೆಯ ಎಚ್ಚರಿಕೆ

ಪಾವಗಡ: ಪುರಸಭೆ ಮುಖ್ಯಾಧಿಕಾರಿಗಳು ಕಾಂಗ್ರೆಸ್ ಪಕ್ಷದ ವಕ್ತಾರರಂತೆ ಕಾರ್ಯ ನಿರ್ವಹಿಸುತ್ತಿರುವುದು ವಿಪರ್ಯಾಸ ಎಂದು ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸದಸ್ಯ ಡಾ.ಜಿ ವೆಂಕಟರಾಮಯ್ಯ ಆರೋಪಿಸಿದರು.

ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ,

ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಬೇಕಿದ್ದ ಪುರಸಭೆ ಮುಖ್ಯಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನೇ ಮರೆತು ಕಾಂಗ್ರೆಸ್ ಪಕ್ಷದ ವಕ್ತಾರರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಗೆ ಸರ್ಕಾರದಿಂದ ನೇಮಿಸಲ್ಪಟ್ಟಿರುವ ನಾಮಿನಿ ಸದಸ್ಯರನ್ನು ನಿರ್ಲಕ್ಷಿಸಲಾಗಿದ್ದು, ಯಾವುದೇ ಮಾಹಿತಿ ಕೇಳಿದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರ ಹೆಸರು ಹೇಳಿ ಕಾಲಾಹರಣ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ಬಿಜೆಪಿ ಯಿಂದ ಪುರಸಭೆ ಮುಂದೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಅನೇಕ ಯೋಜನೆಗಳು, ಕಾಮಗಾರಿಗಳ ಹೆಸರಲ್ಲಿ ಭಾರಿ ಅವ್ಯವಹಾರಗಳು ನಡೆದಿರುವ ಶಂಕೆ ಸಾರ್ವಜನಿಕರಲ್ಲಿದೆ, ಸಂಬಂಧಿಸಿದ ದಾಖಲೆಗಳನ್ನು ಕೇಳಿದರೆ ಅಧಿಕಾರಿಗಳು ಕೊಡಲು ಭಯಪಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ವಾರ್ಡ್‌ಗಳಲ್ಲಿ ವಾಸಿಸುತ್ತಿರುವ ಪ.ಜಾತಿ, ಪಂಗಡಗಳ ಜನರಿಗೆ ನೀರಿನ ಡ್ರಮ್ ವಿತರಣೆಗಾಗಿ ಹನ್ನೆರಡು ಲಕ್ಷಕ್ಕೂ ಅಧಿಕ ಹಣ ಉಪಯೋಗಿಸಲಾಗಿದೆ, ಅದರ ಸಂಬಂಧ ನಾಮಿಸಿ ಸದಸ್ಯರು ಮಾಹಿತಿ ಕೇಳಿದರೆ ನಿರ್ಲಕ್ಷ ಮತ್ತು ಉಡಾಫೆ ಉತ್ತರ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಂಡಲ ಅಧ್ಯಕ್ಷ ರವಿಶಂಕರ ನಾಯ್ಕ್ ಮಾತನಾಡಿ, ದೇಶದ ಸಮರ್ಗ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ರವರ 79ನೇ ಹುಟ್ಟು ಹಬ್ಬದ ಅಂಗವಾಗಿ ಸೆ.17 ರ ಶನಿವಾರ ದಂದು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಸಿಲಾಗಿದೆ ಎಂದ ಅವರು,

ತಾಲೂಕಿನ ಆಸ್ಪತ್ರೆಗಳು, ಆಶ್ರಮಗಳು, ಶಾಲಾ ಕಾಲೇಜುಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರಧಾನಿ ಮೋದಿ ರವರ ಹುಟ್ಟು ಹಬ್ಬದ ಅಂಗವಾಗಿ ಸುಮಾರು ಹದಿನೈದು ದಿನಗಳ ಕಾಲ ಸಾಮಾಜಿಕ ಸೇವೆಗಳನ್ನು ಜನರಿಗೆ ನೀಡುವ ಮೂಲಕ ಕಾರ್ಯಕರ್ತರೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದರು.

ಈ ವೇಳೆ ಮಂಡಲ ಅಧ್ಯಕ್ಷ ರವಿಶಂಕರ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಪಾವಗಡ, ಪುರಸಭೆ ನಾಮಿನಿ ಸದಸ್ಯರಾದ ಶೇಖರ್ ಬಾಬು, ಲೋಕೇಶ್ ರಾವ್, ಮಂಜು, ಪ್ರಸನ್ನ, ಮಂಡಲ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕಾರ್ಯದರ್ಶಿ ಕಡಪಲಕೆರೆ ನವೀನ್, ಯುವ ಮೋರ್ಚಾ ಅಧ್ಯಕ್ಷ ಮಧು ಪಾಳೇಗಾರ, ಮುಖಂಡರಾದ ಕಡಮಲಕುಂಟೆ ರಾಮಾಂಜಿನಪ್ಪ ಸೇರಿದಂತೆ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!